

ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅಧಿಕಾರದಲ್ಲಿದ್ದ ಸಂದರ್ಭ ತಮ್ಮ ಪ್ರಭಾವ ಬಳಸಿ ವಾಮಮಾರ್ಗದಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಪತ್ನಿ ಹೆಸರಿನಲ್ಲಿರುವ ನಿವೇಶನಕ್ಕೆ ಕ್ರಯಪತ್ರ ಪಡೆದಿದ್ದಾರೆ ಎಂದು ಮುಡಾ ಅಧ್ಯಕ್ಷ ಕೆ. ಮರಿಗೌಡ ಆರೋಪಿಸಿದ್ದಾರೆ.
ಪ್ರತಾಪ್ ಸಿಂಹ ಪತ್ನಿ ಡಾ.ಜೆ.ಎಸ್. ಅರ್ಪಿತಾಗೆ ವಿಜಯನಗರ 4ನೇ ಹಂತ 2ನೇ ಘಟ್ಟದಲ್ಲಿ 40*60 ಅಡಿ ವಿಸ್ತೀರ್ಣದ ನಿವೇಶನ ಮಂಜೂರಾಗಿದ್ದು, ಸದರಿ ನಿವೇಶನಕ್ಕೆ ಹಕ್ಕುಪತ್ರ ಪಡೆಯುವ ಸಂದರ್ಭದಲ್ಲಿ ಸದರಿ ನಿವೇಶನದಲ್ಲಿ ಮನೆ ನಿರ್ಮಿಸಬೇಕಾಗಿರುತ್ತದೆ. ತಪ್ಪಿದ್ದಲ್ಲಿ ಉಪ ನೋಂದಾಣಾಧಿಕಾರಿಗಳ ಮಾರುಕಟ್ಟೆ ಮೌಲ್ಯದ ಶೇ.25 ರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಬೇಕು. ಈ ದಂಡದ ಮೊತ್ತ ಪಾವತಿಸುವುದನ್ನು ತಪ್ಪಿಸಲು ಪ್ರತಾಪ್ ಸಿಂಹ ವಾಮಮಾರ್ಗ ಅನುಸರಿಸಿದ್ದರು ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಪ್ರತಾಪ್ ಸಿಂಹ ತಮ್ಮ ಪ್ರಭಾವ ಬಳಸಿ ಮುಡಾದಿಂದ ಪತ್ನಿ ಹೆಸರಿಗೆ 9-8-2021 ರಂದು ನಕ್ಷೆ ಮಂಜೂರಾತಿ ಪಡೆದು ಸದರಿ ನಿವೇಶ ನದಲ್ಲಿ ಒಂದು ಎಸಿ ಶೀಟಿನ ಕೊಠಡಿ ನಿರ್ಮಿಸಿದ್ದಾರೆ. ನಂತರ ಇದೇ ಎಸಿ ಶೀಟಿನ ಕೊಠಡಿಯನ್ನು ಮನೆ ಎಂದು ಬಿಂಬಿಸಿ ಪ್ರಾಧಿಕಾರದಿಂ ದ 4-10-2021 ರಂದು ಕಟ್ಟಡ ಪೂರ್ಣಗೊಂಡ ವರದಿ ಪಡೆದಿದ್ದಾರೆ. ನಂತರ ಆ ಕಟ್ಟಡಕ್ಕೆ ಮನೆ ಕಂದಾಯವನ್ನು 21-10-2021 ರಂದು ನಿಗದಿಪಡಿಸಿ 10-11-2021 ರಂದು ಕ್ರಯಪತ್ರ ಪಡೆದಿದ್ದಾರೆ. ನಂತರ ಎಸಿ ಶೀಟಿನ ಕಟ್ಟಡದ ಕುರಿತು ದೂರು ಸ್ವೀಕೃತವಾದ ಹಿನ್ನೆಲೆಯಲ್ಲಿ ಈ ಹಿಂದೆ ನೀಡಲಾಗಿದ್ದ ಕಟ್ಟಡ ಪೂರ್ಣಗೊಂಡ ವರದಿಯನ್ನು 27-09-2023 ರಂದು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಾಧಿಕಾರಕ್ಕೆ ನ್ಯಾಯಯುತವಾಗಿ ಪಾವತಿಸಬೇಕಾಗಿದ್ದ ಉಪ ನೋಂದಾಣಾಧಿಕಾರಿಗಳ ಮಾರುಕಟ್ಟೆ ಮೌಲ್ಯದ ಶೇ.25 ರಷ್ಟು ಮೊತ್ತದ ದಂಡ ಪಾವತಿ ತಪ್ಪಿಸಲು ಪ್ರತಾಪ್ ಸಿಂಹ ವಾಮ ಮಾರ್ಗ ಅನುಸರಿಸಿ ನಿವೇಶನಕ್ಕೆ ಕ್ರಯಪತ್ರ ಪಡೆದಿದ್ದಾರೆ. ಆಡಳಿತಾವಧಿಯಲ್ಲಿ ಪ್ರತಾಪ್ ಸಿಂಹ ಎಷ್ಟರ ಮಟ್ಟಿಗೆ ಮುಡಾದ ಪ್ರಯೋಜನ ಪಡೆದಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇಂತಹ ಪ್ರತಾಪ್ ಸಿಂಹ ಪ್ರಮಾಣಿಕತೆಯಿಂದ ರಾಜಕಾರಣ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ನೈತಿಕತೆ ಹೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.