ಇಡಿ ಮುಷ್ಟಿಯಲ್ಲಿ ಮುಡಾ ಸಾಕ್ಷ್ಯ?; ಮಹತ್ವದ ದಾಖಲೆ ತನಖಾ ತಂಡದ ವಶಕ್ಕೆ

muda case
Published on

ಬೆಂಗಳೂರು/ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಗರಣ ಸಂಬಂಧ ಬೆಂಗಳೂರು, ಮೈಸೂರಿನ ವಿವಿಧಡೆ ಸೋಮವಾರ, ಮಂಗಳವಾರ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯುವುದರೊಂದಿಗೆ ಕಾರ್ಯಾಚರಣೆ ಪೂರ್ಣಗೊಳಿಸಿದ್ದಾರೆ. ದಾಳಿ ವೇಳೆ ಬಿಲ್ಡರ್​ಗಳು, ಮುಡಾದ ಹಾಲಿ, ಮಾಜಿ ಅಧಿಕಾರಿಗಳ ಮನೆ, ಕಚೇರಿಗಳಲ್ಲಿ ಹಗರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯ ಕಲೆ ಹಾಕಿದ್ದಾರೆಂದು ತಿಳಿದು ಬಂದಿದೆ.

ಇ.ಡಿ. ತಂಡ ಎರಡು ದಿನಗಳಲ್ಲಿ ಒಟ್ಟಾರೆ ಬೆಂಗಳೂರಿನಲ್ಲೇ 32 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದೆ. ಬೆಂಗಳೂರಿನ ಮಲ್ಲೇಶ್ವರ 10ನೇ ಕ್ರಾಸ್​ನಲ್ಲಿರುವ ಮುಡಾ ಮಾಜಿ ಆಯುಕ್ತ ನಟೇಶ್, ಬಾಣಸವಾಡಿ ದೀಪಿಕಾ ರಾಯನ್ ಅಪಾರ್ಟ್​ವೆುಂಟ್​ನಲ್ಲಿ ನೆಲೆಸಿರುವ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಮತ್ತು ಜೆ.ಪಿ.ನಗರದ ಎನ್. ಕಾರ್ತಿಕ್ ಡೆವಲಪರ್ ಮಾಲೀಕ ಎನ್.ಮಂಜುನಾಥ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದರು.

ನಟೇಶ್ ಅವರನ್ನು ವಿಚಾರಣೆಗೆ ಸಹಕರಿಸದ ಆರೋಪದ ಮೇಲೆ ವಶಕ್ಕೆ ಪಡೆದು ಶಾಂತಿನಗರದ ಇಡಿ ಕಚೇರಿಯಲ್ಲಿ ರಾತ್ರಿವರೆಗೂ ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದರು. ಮುಡಾ ಆಯುಕ್ತರಾಗಿದ್ದ ಸಮಯದಲ್ಲಿ 50:50 ಅನುಪಾತದಲ್ಲಿ 928 ಸೈಟ್​ಗಳು ಅಕ್ರಮ ಹಂಚಿಕೆ ಆಗಲು ಡಿ.ಬಿ.ನಟೇಶ್ ಅವರೇ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಎನ್. ಮಂಜುನಾಥ್, ದಿನೇಶ್ ಕುಮಾರ್ ಮತ್ತು ಮೈಸೂರಿನಲ್ಲಿರುವ ಸಿಎಂ ಆಪ್ತ ರಾಕೇಶ್ ಪಾಪಣ್ಣ ಮನೆ, ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆ ಪತ್ರಗಳನ್ನು ಜಪ್ತಿ ಮಾಡಿದ್ದಾರೆ.

ಮೈಸೂರಲ್ಲಿ 48 ಗಂಟೆ ಶೋಧ

ಮೈಸೂರಿನ ವಿವಿಧೆಡೆ ದಾಳಿ ನಡೆಸಿದ್ದ ಇ.ಡಿ. ಅಧಿಕಾರಿಗಳು 8 ಗಂಟೆಗಳ ಬಳಿಕ ಕಾರ್ಯಾಚರಣೆ ಮುಗಿಸಿದ್ದಾರೆ. ರಿಯಲ್ ಎಸ್ಟೇಟ್ ಸಂಸ್ಥೆ ಎಂ.ಎಂ.ಜಿ. ಕನ್​ಸ್ಟ್ರಕ್ಷನ್ ಕಚೇರಿಯಲ್ಲಿ ಸಿಕ್ಕ ದಾಖಲೆಗಳನ್ನು ವಶಪಡಿಕೊಂಡು ಬಂಡಲ್ ಮಾಡಿ ಕಾರಿನಲ್ಲಿ ತುಂಬಿ ತೆರಳಿದರು. ರಿಯಲ್ ಎಸ್ಟೇಟ್ ನಡೆಸá-ವ ಜಯರಾಮ್ ಸಂಪರ್ಕದಲ್ಲಿದ್ದ ಅಧಿಕಾರಿಗಳು, ರಾಜಕಾರಣಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ದಾಖಲೆ ಕಲೆ ಹಾಕಿದ್ದರು.

ಮುಂದೆ ಯಾರು?

ದಾಳಿ ವೇಳೆ ಲಭ್ಯವಾಗಿರುವ ದಾಖಲೆ, ಹೇಳಿಕೆ ಆಧಾರದ ಮೇಲೆ ಇಡಿ ಅಧಿಕಾರಿಗಳು ಮತ್ತಷ್ಟು ಸರ್ಕಾರಿ ಅಧಿಕಾರಿ ಮತ್ತು ಖಾಸಗಿ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುವ ಸಾಧ್ಯತೆ ಇದೆ. ಇದೇ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಸಹ ಆರೋಪಿಗಳಾಗಿದ್ದಾರೆ. ಇವರಿಗೂ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯುವ ಅಥವಾ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಹೇಗಿತ್ತು ಇ.ಡಿ.ದಾಳಿ?

  • 2 ದಿನಗಳ ಇ.ಡಿ.ಬೇಟೆ ಅಂತ್ಯ
  • ಮೈಸೂರು, ಬೆಂಗ್ಳೂರಲ್ಲಿ ಬೇಟೆ
  • ಪ್ರತ್ಯೇಕ ತಂಡಗಳ ಕಾರ್ಯಾಚರಣೆ
  • ಏಕಕಾಲಕ್ಕೆ ಹಲವೆಡೆ ದಿಢೀರ್ ದಾಳಿ
  • ಬಿಲ್ಡರ್, ಅಧಿಕಾರಿಗಳು ಟಾರ್ಗೆಟ್
  • ಬೆಂಗಳೂರಲ್ಲಿ 32 ಗಂಟೆ ಶೋಧ
  • ಪಿನ್ ಟು ಪಿನ್ ದಾಖಲೆ ಶೋಧ
  • ನಂಟಿರುವವರ ಸಮಗ್ರ ವಿಚಾರಣೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net