

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಿವೇಶನ ಹಂಚಿಕೆ ಅವ್ಯವಹಾರ ಸಂಬಂಧ ನ್ಯಾಯಾಮೂರ್ತಿ ಪಿ.ಎನ್.ದೇಸಾಯಿ ಏಕ ಸದಸ್ಯ ವಿಚಾರಣಾ ಆಯೋಗ ವಿಚಾರಣೆ ಆರಂಭಿಸಿದೆ.
ಮುಡಾದಲ್ಲಿ ಸೈಟು ಹಂಚಿಕೆ ಕುರಿತ ಆರೋಪಗಳ ಪ್ರಕರಣದ ವಿಚಾರಣೆ ನಡೆಸಲು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಪಿ.ಎನ್.ದೇಸಾಯಿ ಅವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚನೆ ಮಾಡಿ ಸರ್ಕಾರ ಜುಲೈ 14ರಂದು ಆದೇಶ ಹೊರಡಿಸಿತ್ತು. ಈ ಮೇರೆಗೆ ರಚನೆಯಾದ ನ್ಯಾ.ಪಿ.ಎನ್. ದೇಸಾಯಿ ಏಕಸದಸ್ಯ ವಿಚಾರಣಾ ಆಯೋಗ, 2006 ರಿಂದ 2024ರ ಜುಲೈ 15ರ ಅವಧಿಯಲ್ಲಿ ಮುಡಾದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ವಿಚಾರಣೆ ನಡೆಸಲು ಮುಂದಾಗಿದೆ.
ಈ ಅವಧಿಯಲ್ಲಿ ಮುಡಾ ಎಷ್ಟು ಬಡಾವಣೆಗಳನ್ನು ಅಭಿವೃದ್ಧಿ ಪಡಿಸಿದೆ. ಎಲ್ಲ ಲೇಔಟ್‌ಗಳಲ್ಲಿ ಯಾವುದೇ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡಿಸದೇ ಕೈಬಿಡಲಾಗಿದೆ. ಆನಂತರ ಎಷ್ಟು ಪ್ರಮಾಣದ ಭೂಮಿಯನ್ನು ಲೇಔಟ್‌ಗೆ ಬಳಸಿಕೊಳ್ಳಲಾಗಿದೆ ಎಂಬುದರ ಬಗ್ಗೆ ದಾಖಲೆ ಕೋರಿದೆ.
ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡಿಸದ ಭೂ ಮಾಲೀಕರಿಗೆ ಪರಿಹಾರವಾಗಿ ನೀಡಿರುವಂತಹ ವಿಧಾನ ಏನು. ಈ ರೀತಿಯಾಗಿ ನೀಡಿರುವ ಪರಿಹಾರ ಕಾನೂನಾತ್ಮಕವಾಗಿ ಇದೆಯೇ. ಭೂಸ್ವಾಧೀನ ಪ್ರಕ್ರಿಯೆಗೆ ಬದ್ಧವಾಗಿರದೇ ಬಡಾವಣೆಗಳ ರಚನೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ಭೂ ಮಾಲೀಕರಿಗೆ ಸೈಟ್‌ಗಳ ರೂಪದಲ್ಲಿ ಪರಿಹಾರ ನೀಡಿರುವುದು ಕಾನೂನಿನಲ್ಲಿ ಅನುಮತಿ ಇದೆಯೇ. ಬದಲಿ ನಿವೇಶನ ಹಂಚಿಕೆಯಲ್ಲಿ ಎಷ್ಟು ಅಕ್ರಮಗಳನ್ನು ಗುರುತಿಸಲಾಗಿದೆ. ವಾಪಸ್ ಮುಡಾಗೆ ಹಿಂಪಡೆಯಲು ಅಗತ್ಯಕ್ರಮಗಳ ಬಗ್ಗೆಯೂ ಸಾರ್ವಜನಿಕರು ಸಲಹೆ ನೀಡಬಹುದು ಎಂದು ಆಯೋಗ ಕೋರಿದೆ. ಇದಲ್ಲದೆ, ಮುಡಾ ನಿರ್ಮಿಸಿರುವ ಬಡಾವಣೆಗಳಲ್ಲಿ ಸಿಎ ಸೈಟ್‌ಗಳಿಗೆ ಸಂಬಂಧಿಸಿದಂತೆ ನಡೆದಿರುವ ಅಕ್ರಮಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ.
ಈ ಸಂಬಂಧ ಲಿಖಿತ ಹೇಳಿಕೆ ರೂಪದಲ್ಲಿ ಮತ್ತು ಅದರ ಸಮರ್ಥನೆಗಾಗಿ ಸಕ್ಷಮ ಪ್ರಾಧಿಕಾರ/ವ್ಯಕ್ತಿ ಅವರು ದೃಢೀಕರಿಸಿದ ಪ್ರಮಾಣ ಪತ್ರ ಸಹಿತ ದಾಖಲಾತಿಗಳನ್ನು ಸಲ್ಲಿಸುವಂತೆ ಆಯೋಗ ಜನರಲ್ಲಿ ಕೋರಿದೆ. ಸಲ್ಲಿಸಿದ ದಾಖಲೆ ಪತ್ರಗಳ ಸಂಬಂಧ ಸಂಕ್ಷಿಪ್ತ ನಿರೂಪಣೆ ನೀಡುವುದು ಅಗತ್ಯವಾಗಿದೆ. ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಆಯೋಗಕ್ಕೆ ಆಗಸ್ಟ್ 30ರ ಒಳಗಾಗಿ ಸಲ್ಲಿಸಬೇಕು ಎಂದು ಆಯೋಗ ಸಾರ್ವಜನಿಕರಿಗೆ ಸೂಚಿಸಿದೆ.
ವಿಚಾರಣೆ 2004ರಿಂದ ಅಲ್ಲ..?
ಮುಡಾ ಸೈಟ್ ಹಂಚಿಕೆ ಸಂಬಂಧ ದಿನಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಸಲುವಾಗಿ ವಿಚಾರಣಾ ಆಯೋಗ ಕಾಯ್ದೆ-1955ರ ನಿಯಮ 3 ಉಪನಿಯಮ 1 ರನ್ವಯ ನ್ಯಾ.ಪಿ. ಎನ.ದೇಸಾಯಿ ಏಕ ಸದಸ್ಯ ವಿಚಾರಣಾ ಆಯೋಗ ರಚನೆ ಮಾಡಲಾಗಿದೆ ಎಂದು ಆ.5ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಮುಡಾ ವಿವಾದ 2004ರಲ್ಲಿ ಶುರುವಾಗಿದೆ ಎಂದು ಆರೋಪಗಳು ಕೇಳಿಬಂದಿದೆ. 2004ರಲ್ಲೇ ವಿವಾದಿತ ಭೂಮಿಯಲ್ಲಿ ದೇವನೂರು ಬಡಾವಣೆ ರಚನೆಯಾಗಿತ್ತು. ಸಿಎಂ ಸಿದ್ದರಾಮಯ್ಯ ಅವರ ಪತ್ನಿಯ ಸಹೋದರ ದೇವರಾಜು ಎಂಬುವರು 2004ರಲ್ಲಿ ಜಮೀನು ಖರೀದಿಸಿದ್ದು, ಸಹೋದರಿಗೆ ದಾನ ಕೊಟ್ಟಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ದೇವನೂರು ಲೇಔಟ್‌ನಲ್ಲಿ ಖಾಲಿ ಸೈಟ್‌ಗಳು ಇದ್ದರೂ ವಿಜಯನಗರ ಬಡಾವಣೆಯಲ್ಲಿ ಬದಲಿ 14 ನಿವೇಶನ ನೀಡಿರುವ ಬಗ್ಗೆ ವಿವಾದ ಕೇಳಿಬಂದಿದೆ. 2006 ರಿಂದ 2010ರ ನಡುವೆ ಈ ಜಮೀನಿನಲ್ಲಿ ಬಡಾವಣೆ ರಚನೆಯಾಗಿ ಸೈಟುಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ವಿವಾದ ಕೇಳಿ ಬಂದಿದೆ. ಆದರೆ, 2006 ರಿಂದ 2024ರ ಜುಲೈ 15ರ ಅವಧಿಯಲ್ಲಿನ ಅವ್ಯವಹಾರದ ಬಗ್ಗೆ ವಿಚಾರಣೆ ನಡೆಸುವ ಜವಾಬ್ದಾರಿಯನ್ನು ಆಯೋಗಕ್ಕೆ ನೀಡಲಾಗಿದೆ. ಅದಕ್ಕೂ ಮೊದಲು ಎರಡು ವರ್ಷ ಕೈಬಿಟ್ಟಿರುವುದು ಸಾರ್ವಜನಿಕರಲ್ಲಿ ಪ್ರಶ್ನಾರ್ಥವಾಗಿದೆ.
ಆಯೋಗದ ವಿಳಾಸ :
ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಏಕ ಸದಸ್ಯ ವಿಚಾರಣಾ ಆಯೋಗ, ಕೊಠಡಿ ಸಂಖ್ಯೆ 602, ನೂತನ ಕುಮಾರ ಕೃಪಾ ಅಥಿತಿಗೃಹ, ಬೆಂಗಳೂರು 560 001ರಲ್ಲಿ ಕಚೇರಿ ತೆರೆಯಲಾಗಿದೆ. ಸಾರ್ವಜನಿಕ ರಜೆ ಹೊರತುಪಡಿಸಿ ಎಲ್ಲ ದಿನಗಳು ಕಾರ್ಯನಿರ್ವಹಿಸಲಿದೆ.