

ಯುಎಸ್: ಟೀಮ್ ಇಂಡಿಯಾದ ಶ್ರೇಷ್ಠ ನಾಯಕ, ಕ್ರಿಕೆಟ್ ಅಭಿಮಾನಿಗಳ ಅಚ್ಚುಮೆಚ್ಚಿನ ಕ್ಯಾಪ್ಟನ್, ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಸದ್ಯ ವಿದೇಶಿ ನೆಲದಲ್ಲಿ ಸಮಯ ಕಳೆಯುತ್ತಿದ್ದಾರೆ. ದಿಢೀರ್ ಸ್ನೇಹಿತರೊಂದಿಗೆ ಅಮೆರಿಕಾಗೆ ತೆರಳಿರುವ ಮಾಹಿ, ಅಲ್ಲಿನ ಸ್ಟೇಡಿಯಂನಲ್ಲಿ ತಮ್ಮ ನೆಚ್ಚಿನ ಕ್ರೀಡೆಯನ್ನು ಸ್ನೇಹಿತರೊಂದಿಗೆ ವೀಕ್ಷಿಸಿದ ಫೋಟೋ, ವಿಡಿಯೋಗಳು ಇದೀಗ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಒಂದೆಡೆ 'ಕ್ಯಾಪ್ಟನ್ ಕೂಲ್' 2025ರ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡ್ತಾರಾ? ಎಂಬ ಪ್ರಶ್ನೆಗಳು ವ್ಯಾಪಕವಾಗಿ ಚರ್ಚೆಯಾಗುತ್ತಿದ್ದರೆ, ಧೋನಿ ಮಾತ್ರ ಈ ಬಗ್ಗೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡದೆ ತಮ್ಮ ಸಮಯಕ್ಕಾಗಿ ಕಾಯುತ್ತಿರುವುದು ಮತ್ತೊಂದೆಡೆ. ಸದ್ಯ ಐಪಿಎಲ್ ವಿಚಾರದಿಂದ ಭಾರೀ ಚರ್ಚೆಗೆ ಗ್ರಾಸವಾಗಿರುವ ಮಾಹಿ ಇದೀಗ ಯುನೈಟೆಡ್ ಸ್ಟೇಟ್ಸ್‌ನ ಮಿಚಿಗನ್‌ನಲ್ಲಿ ತಮ್ಮ ಸ್ನೇಹಿತರೊಂದಿಗೆ ಅಮೆರಿಕನ್ ಫುಟ್‌ಬಾಲ್ ಮ್ಯಾಚ್ ವೀಕ್ಷಿಸಿದ್ದಾರೆ.
ಸ್ನೇಹಿತರೊಂದಿಗೆ ವಿದೇಶದಲ್ಲಿ ಹಾಯಾದ ಸಮಯ ಕಳೆಯುತ್ತಿರುವ ಧೋನಿ, ಸ್ಟೇಡಿಯಂನಲ್ಲಿ ಫುಟ್‌ಬಾಲ್ ಪಂದ್ಯವನ್ನು ಆನಂದಿಸುತ್ತಿರುವುದು ವೈರಲ್ ಫೋಟೋ ಮೂಲಕ ತಿಳಿದುಬಂದಿದೆ. ಕ್ಯಾಪ್ಟನ್ ಕೂಲ್ ಸ್ಮೈಲ್ ಮಾಡ್ತಿರುವ ಫೋಟೋವನ್ನು ಅವರ ಸ್ನೇಹಿತರಲ್ಲೇ ಒಬ್ಬರು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿರುವ ಫೋಟೋಗಳು ಮಾಹಿ ಅಭಿಮಾನಿಗಳಿಗೆ ಭಾರೀ ಸಂತಸ ನೀಡಿದೆ,(ಏಜೆನ್ಸೀಸ್).