

ಬಿಡದಿ: ಸರ್ಕಾರಿ ಶಾಲೆಗಳಿಗೆ ಕಾಯ ಕಲ್ಪ ನೀಡುವ ನಿಟ್ಟಿನಲ್ಲಿ ಸಂಸದ ಡಾ.ಸಿ.ಎನ್. ಮಂಜುನಾಥ್ ಅವರು ಹಲವು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಪುರಸಭಾ ವ್ಯಾಪ್ತಿಯ ತೊರೆದೊಡ್ಡಿ, ಹೆಗ್ಗಡಗೆರೆ, ಬಾನಂದೂರು, ಇಟ್ಟಮಡು ಗ್ರಾಮಗಳ ಸರ್ಕಾರಿ ಪ್ರೌಢಶಾಲೆಗೆ ಮಂಗಳವಾರ ಭೇಟಿ ನೀಡಿ ಶಾಲೆಗಳ ಸ್ಥಿತಿಗತಿ ವೀಕ್ಷಣೆ ಮಾಡಿದರು.
ಶಾಲೆಗಳ ಮೂಲ ಸೌಕರ್ಯಗಳ ಅಗತ್ಯ ಕಾಮಗಾರಿಗಳ ಬಗ್ಗೆ ಶಾಲಾ ಶಿಕ್ಷಕರು ಹಾಗೂ ಪಾಲಕರಿಂದ ಮಾಹಿತಿ ಪಡೆದುಕೊಂಡರು. ತೊರೆದೊಡ್ಡಿ ಶಾಲೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ರಾಷ್ಟ್ರಕವಿ ಕುವೆಂಪು ಸಭಾಂಗಣ ಹಾಗೂ ನೆಲಹಾಸು ನಿರ್ಮಾಣದ ಉಳಿಕೆ ಕಾಮಗಾರಿಗೆ 10 ಲಕ್ಷ ರೂ. ವಿಶೇಷ ಅನುದಾನ ನೀಡಲಾಗುವುದೆಂದು ಭರವಸೆ ನೀಡಿದರು.
ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಂಪ್ಯೂಟರ್, ವಿಜ್ಞಾನ ಪ್ರಯೋಗಾಲಯ ಅದಕ್ಕೆ ಅಗತ್ಯವಿರುವ ಹೆಚ್ಚುವರಿ ಕೊಠಡಿಯನ್ನು ಮುಂದಿನ ದಿನಗಳಲ್ಲಿ ನಿರ್ಮಿಸಿಕೊಡುವುದಾಗಿ ಸಂಸದರು ಭರವಸೆ ನೀಡಿದರು.
ಸಂಸದರ ಜತೆಗೆ ಆಗಮಿಸಿದ್ದ ಅಮೇರಿಕಾ ಮೂಲದ ಉದ್ಯಮಿ ಕ್ರಿಸ್‌ಮೂರ್ತಿ ಅವರು ಶಾಲಾ ಕೈತೋಟ, ಶೌಚಗೃಹ ನಿರ್ವಹಣೆ ಹಾಗೂ ಸ್ವಚ್ಛಂದ ಪರಿಸರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ತೊರೆದೊಡ್ಡಿ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಲಭ್ಯವಿರುವ ಹಾಗೂ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳು, ಔಷಧ ಹಾಗೂ ಸಿಬ್ಬಂದಿ ಬಗ್ಗೆ ಆಸ್ಪತ್ರೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು.
ಇಟ್ಟಮಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಸಂಸದರು ತುಂಬಾ ಹಳೇಯದಾಗಿರುವ ಕಟ್ಟಡವನ್ನು ತೆರವುಗೊಳಿಸಿ ಇನ್‌ಫೋಸಿಸ್ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ನೂತನ ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಿಸಿಕೊಡುವುದಾಗಿ ತಿಳಿಸಿದರು.
ಬಾನಂದೂರು ಗ್ರಾಮಕ್ಕೆ ಭೇಟಿ ನೀಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು ವೀಕ್ಷಣೆ
ಮಾಡಿದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಂಧರನಾಥ ಸ್ವಾಮೀಜಿ ಅವರು ವಿದ್ಯಾಭ್ಯಾಸ ಮಾಡಿರುವ ಶಾಲಾ ಕಟ್ಟಡ ದುಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದರು. ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಮೂರು ಕೊಠಡಿಗಳುಳ್ಳ ಶಾಲಾ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದರು.
ನಂತರ ಹೆಗ್ಗಡಗೆರೆ ಸರ್ಕಾರಿ ಶಾಲೆಗೆ ಭೇಟಿ ನೀಡಿ ಶಾಲೆಯ ನಿರ್ವಹಣೆ ಹಾಗೂ ಶೌಚಗೃಹ ಸ್ಥಿತಿಗತಿ ಕಂಡು ಬೇಸರ ವ್ಯಕ್ತಪಡಿಸಿದರು. ಶಾಲಾ ಮಕ್ಕಳಿಗೆ ಶೌಚಗೃಹ ಇರಬೇಕಿದೆ. ಆದರೆ, ಇಲ್ಲಿ ಮರಿಚಿಕ್ಕೆಯಾಗಿದೆ. ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಕೂಡಲೇ ಶೌಚಗೃಹ ನಿರ್ಮಿಸಿಕೊಡುವ ಭರವಸೆ ನೀಡಿದರು.
ಪುರಸಭೆ ಸದಸ್ಯರಾದ ಎಚ್.ನಾಗರಾಜು, ರಾಮಚಂದ್ರಯ್ಯ, ಶ್ರೀನಿವಾಸ್, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಬಿ.ಗೋಪಾಲ್, ಮುಖಂಡರಾದ ಇಟ್ಟಮಡು ಸೋಮಣ್ಣ, ಉದಯಕುಮಾರ್, ನಿಂಗೇಗೌಡ ಮತ್ತಿತರರು ಇದ್ದರು.