

ದಾವಣಗೆರೆ: ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಕಾಣೆಯಾಗಿರುವ ತಮ್ಮ ಸಹೋದರನ ಮಗನನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಅ.30ರ ರಾತ್ರಿಯಿಂದ ಎಂಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಕಾಣೆಯಾಗಿದ್ದಾನೆ. ಯಾವಾಗಲೂ ಸ್ನೇಹಿತರೊಂದಿಗೆ ಇರುತ್ತಿದ್ದ ಚಂದ್ರಶೇಖರ್ ಕಳೆದ ಭಾನುವಾರ ಮಾತ್ರ ಒಬ್ಬನೇ ತೆರಳಿದ್ದಾನೆ. ತನ್ನ KA 17- MA- 2534 ನಂಬರ್ನ ಹೋಂಡಾಯ್ ಕ್ರೇಟಾ ಕಾರಿನಲ್ಲಿ ಶಿವಮೊಗ್ಗದ ಗೌರಿಗದ್ದೆಗೆ ಹೋಗಿದ್ದಾನೆ ಎನ್ನಲಾಗಿದೆ. ಆದರೆ ಹೋದವನು ಮತ್ತೆ ವಾಪಸ್ ಬಂದಿಲ್ಲ. ಇದಲ್ಲದೇ ಕಾಣೆಯಾದ ರಾತ್ರಿ 11:30 ರಿಂದ ಚಂದ್ರಶೇಖರ್ನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಇದರಿಂದ ಆತನ ಮನೆಯವರು ಕಂಗಾಲಾಗಿದ್ದಾರೆ.
ತನಗೆ ಸದಾ ಬೆಂಬಲವಾಗಿ ನಿಲ್ಲುತ್ತಿದ್ದ ತನ್ನ ಸಹೋದರನ ಪುತ್ರ ಚಂದ್ರಶೇಖರ್ ಕಾಣೆಯಾದ ಸುದ್ದಿ ತಿಳಿದು ಶಾಸಕರು ಗೋಳಾಡುತ್ತಿದ್ದಾರೆ. 'ಎಲ್ಲಿ ಹೋಗಿದ್ದಾನೆ, ಎಲ್ಲಿ ಇದ್ದಾನೆ ಎಂಬುದೇ ಗೊತ್ತಿಲ್ಲ. ಎಲ್ಲಿದ್ದರೂ ಬಾರಪ್ಪ' ಎಂದು ಶಾಸಕರು ಕಣ್ಣೀರು ಹಾಕಿದ್ದಾರೆ.