ಎಂಪಿಎಂ ನಿವೃತ್ತ ಕಾರ್ಮಿಕರ ಬಾಕಿ ಹಣ ಪಾವತಿಸಿ

bdvt mpm
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭದ್ರಾವತಿ ಉಪತಹಸೀಲ್ದಾರ್ ಮಂಜಾನಾಯ್ಕ ಅವರಿಗೆ ಭದ್ರಾವತಿ ಎಂಪಿಎಂ ನಿವೃತ್ತ ಕಾರ್ಮಿಕರು ಮನವಿ ಸಲ್ಲಿಸಿದರು. ಟಿ.ಜಿ.ಬಸವರಾಜಯ್ಯ, ವೆಂಕಟೇಶ್, ಡಿ.ಟಿ.ಶ್ರೀಧರ್, ಬಾಬು ಇತರರಿದ್ದರು.
Published on

ಭದ್ರಾವತಿ: ನಿವೃತ್ತ ಕಾರ್ಮಿಕರಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರು, ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ಪದಾಧಿಕಾರಿಗಳು ಬುಧವಾರ ಹಳೇನಗರದ ಅಕ್ಕಮಹಾದೇವಿ ಸಮುದಾಯ ಭವನದಿಂದ ತಾಲೂಕು ಕಚೇರಿವರೆಗೆ ಸಾಗಿ ಪ್ರತಿಭಟನೆ ನಡೆಸಿದರು.

ಸೇವೆ ಸಲ್ಲಿಸಿ ನಿವೃತ್ತಿ ಹಾಗೂ ಸ್ವಯಂ ನಿವೃತ್ತಿ ಹೊಂದಿರುವ ಕಾರ್ಮಿಕರಿಗೆ ಬರಬೇಕಾದ ಬಾಕಿ ಹಣದ ಬಗ್ಗೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಬಾಕಿ ಹಣ ಕೊಟ್ಟಿಲ್ಲ. ಸೂಪರ್ ಅನ್ಯೂಯೇಷನ್ ಹಣದ ಬಗ್ಗೆಯೂ ಹಾಗೂ ಕಾರ್ಖಾನೆಯನ್ನು ಪುನರಾರಂಭಿಸುವ ಬಗ್ಗೆಯೂ ಮಾಹಿತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

60 ವರ್ಷ ಮೇಲ್ಪಟ್ಟವರಿಗೆ ಯಾವುದೇ ನೇಮಕಾತಿ ಆದೇಶ, ಸಂದರ್ಶನ ಇರದಿದ್ದರೂ ಹಿಂಬಾಗಿಲಿನಿಂದ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ವಾಲ್ಮೀಕಿ ನಿಗಮದ ಹಗರಣದಂತೆ ಎಂಪಿಎಂ ಕಾರ್ಖಾನೆ ಆಡಳಿತ ಮಂಡಳಿ ಕೂಡಾ ಕೋಟ್ಯಂತರ ರೂ. ಹಗರಣ ನಡೆಸುತ್ತಿದೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಕಾರ್ಖಾನೆಯ ಒಳಗೆ ಕೋಟ್ಯಂತರ ರೂ. ಬೆಲೆಬಾಳುವ ಅನೇಕ ಉಪಕರಣಗಳನ್ನು ಅನಧಿಕೃತ ವ್ಯಕ್ತಿಗಳು ಮಾರಾಟ ಮಾಡುತ್ತಿದ್ದಾರೆ. ಎಂಪಿಎಂ ಅರಣ್ಯ ವ್ಯಾಪ್ತಿಯಲ್ಲಿರುವ ನೀಲಗಿರಿ ಹಾಗೂ ಅಕೇಶಿಯಾ ಮರಗಳನ್ನು ಲೂಟಿ ಮಾಡಲಾಗುತ್ತಿದೆ. ಜೀವ ವಿಮಾ ನಿಗಮದ ಕಾರ್ಮಿಕರ ಖಾತೆಗೆ ಪ್ರತಿ ವರ್ಷವೂ ಪಾವತಿಸಬೇಕಾಗಿದ್ದ ಸೂಪರ್ ಅನ್ಯೂಯೇಷನ್ ಹಣವನ್ನು ಕಟ್ಟುತ್ತಿಲ್ಲ. ನಮ್ಮ ನ್ಯಾಯಯುತ ಬೇಡಿಕೆಗಳು ಆ.15ರೊಳಗೆ ಈಡೇರಬೇಕು. ಇಲ್ಲದಿದ್ದರೆ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದ ವೇದಿಕೆ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಟಿ.ಜಿ.ಬಸವರಾಜಯ್ಯ, ವೆಂಕಟೇಶ್, ಡಿ.ಟಿ.ಶ್ರೀಧರ್, ಬಾಬು, ಬಸವರಾಜ್ ಪಾಟೀಲ್, ತಾರಕೇಶ್ವರಪ್ಪ, ಗೋವಿಂದಪ್ಪ, ಶಿವರಾಮ ರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net