ಸಂಸದ ಪ್ರಜ್ವಲ್ ರೇವಣ್ಣನ​ ಹೊಸ ವಿಡಿಯೋ ರಿಲೀಸ್: ಕುಮಾರಸ್ವಾಮಿ ಫಸ್ಟ್‌ ರಿಯಾಕ್ಷನ್‌..

HDK
Published on

ಚಿಕ್ಕಬಳ್ಳಾಪುರ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಪ್ರತ್ಯಕ್ಷರಾಗಿದ್ದಾರೆ. ಬರೋಬ್ಬರಿ ಒಂದು ತಿಂಗಳ ಬಳಿಕ ವಿದೇಶದಲ್ಲಿದ್ದುಕೊಂಡು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಇದೇ ಮೇ 31ರಂದು ಬೆಳಗ್ಗೆ 10.30ಕ್ಕೆ ಎಸ್​​ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ ಹಾಗೂ ನಾನು ಎಲ್ಲೆ ಇದ್ದರೂ ಬಂದು ಎಸ್‌ಐಟಿ ಮುಂದೆ ಹಾಜರಾಗುವ ಮೂಲಕ ತನಿಖೆಗೆ ಸಹಕಾರ ಕೊಡುವಂತೆ ಕೇಳಿಕೊಂಡಿದ್ದೆವು. ಈ ಬಗ್ಗೆ ದೇವೇಗೌಡರು ಎಚ್ಚರಿಕೆ ಕೊಟ್ಟರೆ ನಾನು ಮನವಿ ಮಾಡಿಕೊಂಡಿದ್ದೆ. ಅಲ್ಲದೇ ಇದೇ ವೇಳೆ ಕಾರ್ಯಕರ್ತರ ಮೇಲೆ ನಂಬಿಕೆ ಇದ್ದರೆ ಕೂಡಲೇ ಬರಬೇಕು ಎಂದು ಹೇಳಿದ್ದೆವು. ಇದೀಗ ನಮ್ಮ ಮನವಿಗೆ ಓಗೊಟ್ಟು ಬರುತ್ತಿರುವುದು ಇವತ್ತು ನಮಗೂ ಸ್ವಲ್ಪ ಸಮಾಧಾನ ತಂದಿದೆ ಎಂದು ತಿಳಿಸಿದರು.

ಪ್ರಜ್ವಲ್ ರೇವಣ್ಣ ವಿಡಿಯೋಗಳ ಪ್ರಕರಣದಲ್ಲಿ ದೊಡ್ಡ ಷಡ್ಯಂತ್ರ ಇದೆ. ಷಡ್ಯಂತರ ನಡೆಸಿರುವುದು ಕಾಂಗ್ರೆಸ್ ಎನ್ನುವುದು ಇಡೀ ಜಗತ್ತಿಗೆ ಗೊತ್ತು. ಕಾನೂನಿನ ಮುಂದೆ ಎಲ್ಲರೂ ಸಮಾನರು, ಯಾರು ದೊಡ್ಡವರಿಲ್ಲ ಎಲ್ಲರೂ ಕಾನೂನಿಗೆ ತಲೆ ಬಾಗಲೇಬೇಕು. ಮುಂದಿನ ದಿನಗಳಲ್ಲಿ ಏನೇನೋ ನಡೆಯುತ್ತದೆ ನೋಡೋಣ. ಈಗಲೇ‌ ಪ್ರಕರಣದ ಬಗ್ಗೆ ಏನು ಹೇಳುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನಡೆಯಬಾರದೆಲ್ಲ ನಡೆಯುತ್ತಿದೆ. ಜನರ ನಿರೀಕ್ಷೆಗೆ ಅನುಗುಣವಾಗಿ, ಅಭಿವೃದ್ಧಿ ಕೆಲಸಗಳು ಸೊರಗಿವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net