ಚನ್ನಗಿರಿ ಲಾಕಪ್‌ ಡೆತ್‌ ಪ್ರಕರಣ: ಡಿವೈಎಸ್ಪಿ ಸೇರಿ ಮೂವರು ಪೊಲೀಸ್‌ ಅಧಿಕಾರಿಗಳ ಸಸ್ಪೆಂಡ್

chi
Published on

ದಾವಣಗೆರೆ: ಚನ್ನಗಿರಿ ಯುವಕನ ಲಾಕಪ್‌ ಡೆತ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಚನ್ನಗಿರಿ ಡಿವೈಎಸ್‌ಪಿ ಪ್ರಶಾಂತ್ ಮುನ್ನೊಳ್ಳಿ, ಸರ್ಕಲ್‌ ಇನ್‌ಸ್ಪೆಕ್ಟರ್ ನಿರಂಜನ. ಬಿ ಹಾಗೂ ಪಿಎಸ್‌ಐ ಅಕ್ತರ್ ಅವರನ್ನು ಅಮಾನತು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್​ ಆದೇಶ ಹೊರಡಿಸಿದ್ದಾರೆ.

ಚನ್ನಗಿರಿ ಪೊಲೀಸ್​ ವಶದಲ್ಲಿದ್ದ ಆದಿಲ್ ಎಂಬ ಯುವಕ ಮೇ 24 ರಂದು ಮೃತಪಟ್ಟಿದ್ದ. ಇದರಿಂದ ರೊಚ್ಚಿಗೆದ್ದ ಕುಟುಂಬಸ್ಥರು, ಪೊಲೀಸರೇ ಹೊಡೆದು ಯುವಕನನ್ನು ಕೊಂದಿದ್ದರು ಎಂದು ಆರೋಪಿಸಿ ಚನ್ನಗಿರಿ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣ ಸಂಬಂಧ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಪೂರ್ವ ವಲಯ ಐಜಿಪಿ ಡಾ. ತ್ಯಾಗರಾಜನ್ ಮಾಹಿತಿ ನೀಡಿದ್ದಾರೆ.

ಏನಿದು ಘಟನೆ: ಒಸಿ (ಮಟ್ಕಾ) ದಂಧೆ ನಡೆಸುತ್ತಿದ್ದ ಎನ್ನುವ ಆರೋಪದ ಮೇಲೆ ಚನ್ನಗಿರಿಯ ಟಿಪ್ಪು ನಗರದ ನಿವಾಸಿ ಆದಿಲ್ ಎನ್ನುವವನನ್ನು ಚನ್ನಗಿರಿ ಪೊಲೀಸರು ಬಂಧಿಸಿ, ಠಾಣೆಗೆ ಕರೆತಂದಿದ್ದರು. ಠಾಣೆಗೆ ಕರೆತಂದ ಕೆಲವೇ ಗಂಟೆಗಳಲ್ಲಿ ಈತ ಮೂರ್ಛೆ ಹೋಗಿದ್ದಾನೆ. ತಕ್ಷಣ ಆತನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಆರೋಪಿ ಬದುಕಿ ಉಳಿದಿರಲಿಲ್ಲ.

ಇದರಿಂದಾಗಿ ಕೋಪಗೊಂಡ ಸುಮಾರು ನೂರಕ್ಕೂ ಹೆಚ್ಚು ಜನರಿದ್ದ ಉದ್ರಿಕ್ತ ಗುಂಪು ಪೊಲೀಸ್ ಠಾಣೆಯ ಮೇಲೆ ರಾತ್ರಿ ಏಕಾಏಕಿ ದಾಳಿ ಮಾಡಿದೆ. ಇದು ಸಹಜ ಸಾವಲ್ಲ, ಲಾಕಪ್ ಡೆತ್ ಎಂದು ಆರೋಪಿಸಿ ಹಿಂಸಾಚಾರಕ್ಕೆ ಇಳಿದಿತ್ತು.

ಉದ್ರಿಕ್ತ ಜನರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸ ಬೇಕಾಯಿತು. ಘಟನೆಯ ವೇಳೆ ಉದ್ರಿಕ್ತರ ಗುಂಪು ಠಾಣೆಗೆ ಸಾಕಷ್ಟು ಹಾನಿಯನ್ನು ಮಾಡಿದ್ದಾರೆ. 11 ಜನ ಪೋಲಿಸರಿಗೆ ಗಾಯಗಳಾಗಿದ್ದು, 5 ಪೊಲೀಸ್‌ ವಾಹನಗಳು ಜಖಂಗೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net