

ಕೋಲಾರ: ಸಚಿವರ ಮುಂದೆಯೇ ಶಾಸಕ ಮತ್ತು ಸಂಸದರ ನಡುವೆ ವಾಗ್ವಾದ ನಡೆದಿದೆ.
ಮಾಲೂರಿನ ಕೊಮ್ಮನಹಳ್ಳಿ ಬಳಿಯ ನಂಜೇಗೌಡ ಮಾಲೀಕತ್ವದ ಕ್ರಷರ್ಗೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್ ಗುರುವಾರ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಕೋಲಾರ ಸಂಸದ ಮುನಿಸ್ವಾಮಿ, 'ಸರ್ಕಾರಿ ಗುಂಡುತೋಪಿನಲ್ಲಿ ಕ್ರಷರ್ ಮಾಡಿದ್ದಾರೆ' ಎನ್ನುತ್ತಿದ್ದಂತೆ ಸಿಟ್ಟಿಗೆದ್ದ ಮಾಲೂರು ಶಾಸಕ ನಂಜೇಗೌಡ, ಸಂಸದರನ್ನು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿರಿ ಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ
'ಇದೆಲ್ಲಾ ಬಿಡಪ್ಪ, ವೈಯಕ್ತಿಕವಾಗಿ ತಗೋಬೇಡ' ಎಂದು ಶಾಸಕರು ಹೇಳುತ್ತಿದ್ದಂತೆ ಪ್ರತಿಕ್ರಿಯಿಸಿದ ಸಂಸದರು, 'ನೀವೂ ಇದೆಲ್ಲ ಬಿಡಿ. ನನಗೆ ಎಲ್ಲ ಗೊತ್ತಿದೆ' ಎಂದರು.
'ರಾಜಕೀಯವನ್ನು ರಾಜಕೀಯವಾಗಿ ಎದುರಿಸಿ. ವೈಯಕ್ತಿಕ ಬೇಡ. ನೀನು ಗಾಳಿಯಲ್ಲಿ ಬಂದಿದ್ದೀಯ. ಗಾಳಿಯಲ್ಲೇ ಹೋಗ್ತೀಯ ಬಿಡು' ಎಂದು ಶಾಸಕರು ತಿರುಗೇಟು ನೀಡಿದರು. ಅಲ್ಲದೆ 'ನಾವಿಬ್ಬರೂ ಒಂದೇ ಹೋಬಳಿಯವರು. ಇದೆಲ್ಲ ಬಿಟ್ಟು ಬಿಡು' ಎಂದು ಶಾಸಕರು ಹೇಳುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, 'ಒಂದೇ ಹೋಬಳಿಯವರು ಆದರೇನು?' ಎಂದು ಖಾರವಾಗಿಯೇ ಪ್ರಶ್ನಿಸಿದರು.
ಸುಮ್ಮನಿರಿ ಕಿತ್ತಾಡಬೇಡಿ ಎಂದು ಸಚಿವರು ಹೇಳಿದರೂ ಶಾಸಕ-ಸಂಸದರ ನಡುವಿನ ವಾಗ್ವಾದ ತಾರಕಕ್ಕೇರಿತ್ತು. ಮೂಕಪ್ರೇಕ್ಷಕರಂತೆ ಸಾರ್ವಜನಿಕರು ನೋಡುತ್ತ ನಿಂತಿದ್ದರು.