

ಬುಡಾಪೆಸ್ಟ್: ಲಾಕ್ಡೌನ್ ಸಮಯದಲ್ಲಿ ಅನೇಕರು ತಮ್ಮ ಕುಟುಂಬದ ಜತೆ ಅದ್ಭುತ ಸಮಯ ಕಳೆದಿದ್ದಾರೆ. ಎಷ್ಟೋ ಪುರುಷರು ಪ್ರತಿನಿತ್ಯ ಅಡುಗೆ ಮಾಡಿ ಬಡಿಸುವ ಹೆಂಡತಿಗಾಗಿ ಅಡುಗೆ ಕಲಿತು, ರುಚಿಯಾದ ಖಾದ್ಯ ಮಾಡಿ ಉಣಿಸಿದ್ದಾರೆ. ಆದರೆ ಇಲ್ಲೊಬ್ಬ ಸಂಸದ ಮಾತ್ರ ಲಾಕ್ಡೌನ್ ಸಮಯದಲ್ಲಿ ಸೆಕ್ಸ್ ಪಾರ್ಟಿಗೆ ಹೋಗಿದ್ದು, ಇದೀಗ ಪೇಚಿಗೆ ಸಿಲುಕಿದ್ದಾನೆ.
ಯುರೋಪ್ನ ಹಂಗೇರಿಯನ್ನ ಸಂಸದ ಜೋಸೆಫ್ ಜಾಜರ್ ಇದೀಗ ಪೇಚಿಗೆ ಸಿಲುಕಿರುವ ಸಂಸದ. ಯುರೋಪಿಯನ್ ದೇಶಗಳಲ್ಲಿ ಕರೊನಾ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಹಾಗಿದ್ದರೂ ಸಣ್ಣ ಪುಟ್ಟ ಪಾರ್ಟಿಗಳನ್ನು ಅಲ್ಲಿನ ಜನರು ಕದ್ದು ಮುಚ್ಚಿ ಮಾಡಲಾರಂಭಿಸಿದ್ದಾರೆ. ಕಳೆದ ವಾರ ರಾಜಧಾನಿಯಲ್ಲಿ ನಡೆಯುತ್ತಿದ್ದ ಸೆಕ್ಸ್ ಪಾರ್ಟಿಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮೊದಲನೇ ಮಹಡಿಯಲ್ಲಿ ನಡೆಯುತ್ತಿದ್ದ ಪಾರ್ಟಿಯ ಮೇಲೆ ದಾಳಿ ನಡೆದ ಸಮಯದಲ್ಲಿ ಸಂಸದ ಜೋಸೆಫ್ ಜಾಜರ್ ಕೂಡ ಅಲ್ಲಿದ್ದು, ಪೊಲೀಸರನ್ನು ಕಂಡೊಡನೆ ಕಿಟಕಿಯಿಂದ ಹಾರಿ ಓಡಿಹೋಗಿದ್ದಾರೆ.
ಈ ರೀತಿ ಓಡಿ ಹೋಡಿ ಹೋದ ವ್ಯಕ್ತಿಯನ್ನು ಜೋಸೆಫ್ ಎಂದು ಪೊಲೀಸರು ಗುರುತಿಸಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಇದೀಗ ಜೋಸೆಫ್ ಅದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಆದರೆ ನಾನು ಸೆಕ್ಸ್ ಪಾರ್ಟಿಗೆ ಹೋಗಿರಲಿಲ್ಲ, ಬೇರೊಂದು ಪಾರ್ಟಿಗೆ ಹೋಗಿದ್ದೆ ಎಂದು ಅವರು ಹೇಳಿದ್ದಾರೆ. ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಅವರು ಕ್ಷಮೆ ಕೇಳಿದ್ದಾರೆ. (ಎಜೆನ್ಸೀಸ್)