ಬಿಜೆಪಿ, ಕಾಂಗ್ರೆಸ್‌ನ ಪ್ರಬಲರನ್ನು ಸೋಲಿಸಿ ಶಾಸಕನಾದ ಕೂಲಿ ಕಾರ್ಮಿಕರ ಮಗ

MLA
Published on

ಮಧ್ಯಪ್ರದೇಶ: ರತ್ಲಂ ಜಿಲ್ಲೆಯ ಸೈಲಾನಾ ವಿಧಾನಸಭಾ ಕ್ಷೇತ್ರದಲ್ಲಿ ಬಂಪರ್ ಮತದಾನ ನಡೆದಿದೆ. ಇದಾದ ನಂತರ ಇಲ್ಲಿನ ಫಲಿತಾಂಶಗಳೂ ಶಾಕಿಂಗ್​​​​​ ಅನಿಸುತ್ತದೆ. ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಸೈಲಾನಾ ವಿಧಾನಸಭಾ ಕ್ಷೇತ್ರದಿಂದ ಕಾರ್ಮಿಕನ ಮಗನನ್ನು ಜನರು ತಮ್ಮ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಹೌದು, ಸೈಲಾನ ಶಾಸಕರಾದ 33 ವರ್ಷದ ಕಮಲೇಶ್ವರ ದೊಡಿಯಾರ್ ಅವರು ಭಾರತೀಯ ಆದಿವಾಸಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಅವರ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಚುನಾವಣಾ ವೆಚ್ಚಕ್ಕಾಗಿ 12 ಲಕ್ಷ ಸಾಲ ಮಾಡಿದ್ದರು. ಹಾಗಾದರೆ ಬಿಜೆಪಿ ಮತ್ತು ಕಾಂಗ್ರೆಸ್‌ನ ದಿಗ್ಗಜರನ್ನು ಸೋಲಿಸಿದ ಕಮಲೇಶ್ವರ ದೊಡಿಯಾರ್ ಯಾರೆಂದು ನೋಡೋಣ...  

ಸೈಲಾನ ಕ್ಷೇತ್ರದಲ್ಲಿ ಕಮಲೇಶ್ವರ್ ಗೆಲುವು
ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ಸೋಲು ಕಂಡಿವೆ. ಕಮಲೇಶ್ವರ ಅವರ ಒಂದು ಪಕ್ಷ ಮಾತ್ರ ಸೈಲಾನಾ ಕ್ಷೇತ್ರದಲ್ಲಿ ಗೆದ್ದಿದೆ. ಕಮಲೇಶ್ವರ ದೊಡಿಯಾರ್ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 71219 ಮತಗಳನ್ನು ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಹರ್ಷ್ ವಿಜಯ್ ಗೆಹ್ಲೋಟ್ 66601 ಮತಗಳನ್ನು ಪಡೆದಿದ್ದಾರೆ. ಇಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿದೆ.

ಪೋಷಕರು ಕಾರ್ಮಿಕರು
ಶಾಸಕರಾದ ಕಮಲೇಶ್ವರ ದೊಡಿಯಾರ್ ಅವರ ಪೋಷಕರು ಕೂಲಿ ಕೆಲಸ ಮಾಡುತ್ತಾರೆ. ಇವರು ಸೈಲಾನಾ ಅಸೆಂಬ್ಲಿಯ ಸರವನ್ ಪ್ರದೇಶದ ರಾಧಾಕುನ್ವಾ ಎಂಬ ಸಣ್ಣ ಹಳ್ಳಿಯ ನಿವಾಸಿಗಳು. ಇಬ್ಬರೂ ಹಗಲಿರುಳು ದುಡಿದು ಜೀವನ ಸಾಗಿಸುತ್ತಾರೆ. ಇಂದಿಗೂ ಅವರ ದಿನಚರಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 

ಇಡೀ ಕುಟುಂಬ ಗುಡಿಸಲಿನಲ್ಲಿ ವಾಸಿಸುತ್ತಿದೆ
ಕಮಲೇಶ್ವರ ದೊಡಿಯಾರ್ ಅವರ ಇಡೀ ಕುಟುಂಬ ಮಧ್ಯಪ್ರದೇಶದ ರಾಧಾಕುನ್ವಾ ಗ್ರಾಮದಲ್ಲಿ ವಾಸಿಸುತ್ತಿದೆ. ಪಾಲಕರು ಮತ್ತು ಕಮಲೇಶ್ವರರು ಇಂದಿಗೂ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಮಳೆಗಾಲದಲ್ಲಿ ಅದರಲ್ಲಿ ವಾಸಿಸುವುದೂ ಕಷ್ಟ. ಕಮಲೇಶ್ವರರು ತಮ್ಮ ಪದವಿಯನ್ನು ಉಜ್ಜಯಿನಿಯ ವಿಕ್ರಮ್ ವಿಶ್ವವಿದ್ಯಾನಿಲಯದಲ್ಲಿ ಹಣಕಾಸಿನ ಅಡೆತಡೆಗಳ ನಡುವೆ ಮಾಡಿದರು. ಅದೇ ಸಮಯದಲ್ಲಿ, ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದರು. 

ಹಲವು ಬಾರಿ ಜೈಲಿಗೆ ಹೋಗಬೇಕಾಯಿತು
ಆರು ವರ್ಷಗಳ ಹಿಂದೆ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಓದಿ ಜೈ ಜೋಹರ್ ಘೋಷಣೆ ಮಾಡಿದ ಕಮಲೇಶ್ವರ ದೊಡಿಯಾರ್ ಹಲವು ಬಾರಿ ಜೈಲಿಗೆ ಹೋಗಬೇಕಾಯಿತು. ಅವರು ಸುದೀರ್ಘ ಕಾಲ ಜೈಲಿನಲ್ಲಿ ಇರಬೇಕಾಯಿತು. ಇದರ ಹೊರತಾಗಿಯೂ, ಕಮಲೇಶ್ವರ ದೊಡಿಯಾರ್ ತಮ್ಮ ಪ್ರದೇಶದಲ್ಲಿ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರೆಸಿದರು. ಕಮಲೇಶ್ವರ್ 2018 ರಲ್ಲಿ ಮೊದಲ ಬಾರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ 18 ಸಾವಿರದ 800 ಮತಗಳನ್ನು ಪಡೆದರು. ಇದರ ನಂತರ, 2019 ರಲ್ಲಿ ಅವರು ರತ್ಲಾಮ್-ಜಬುವಾ ಸಂಸದೀಯ ಸ್ಥಾನದಿಂದ ಸ್ಪರ್ಧಿಸಿ 14 ಸಾವಿರ ಮತಗಳನ್ನು ಪಡೆದರು. ಕಮಲೇಶ್ವರ್ ಈ ಬಾರಿ ಎರಡೂ ಪಕ್ಷಗಳ ಹಿರಿಯ ನಾಯಕರನ್ನು ಸೋಲಿಸಿದ್ದಾರೆ.

ದೇಣಿಗೆ, ಸಾಲ ಪಡೆದು ಚುನಾವಣೆ ಎದುರಿಸಿದರು
ಕಮಲೇಶ್ವರ ದೊಡಿಯಾರ್ ಅವರ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ಚುನಾವಣಾ ವೆಚ್ಚಕ್ಕಾಗಿ 12 ಲಕ್ಷ ಸಾಲ ಮಾಡಿದ್ದಾರೆ.  ಜನರಿಂದ ತಲಾ 100 ರೂಪಾಯಿ ದೇಣಿಗೆಯನ್ನೂ ಸಹ ಪಡೆಯಲಾಗಿದೆ. ಕಮಲೇಶ್ವರ ದೊಡಿಯಾರ್ ಅವರಿಗೂ ಸಾಕಷ್ಟು ವಿವಾದಗಳಿವೆ. ಇವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ನಾಮನಿರ್ದೇಶನಕ್ಕೆ ಎಂಟು ದಿನಗಳ ಮೊದಲು ಅವರು ಜಾಮೀನಿನ ಮೇಲೆ ಜೈಲಿನಿಂದ ಹೊರಬಂದರು. ದೊಡಿಯಾರ್ ವಿರುದ್ಧ ಬಾಲಕಿಯೊಬ್ಬಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ದೊಡಿಯಾರ್ ತನಗೆ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆಯ ಸಹೋದರ ಕೂಡ ಆರೋಪಿಸಿದ್ದರು.   

ಬೈಕಿನಲ್ಲಿ ತಿರುಗಾಡುತ್ತಾರೆ ದೊಡಿಯಾರ್
ಶಾಸಕರಾದ ಕಮಲೇಶ್ವರ ದೊಡಿಯಾರ್ ಅವರ ಬಳಿ ಕಾರಿಲ್ಲ. ಚುನಾವಣೆಯಲ್ಲಿ ಗೆದ್ದ ನಂತರ ಬೈಕ್‌ನಲ್ಲಿ ಮಾತ್ರ ಸಂಚರಿಸುತ್ತಾರೆ. ಬೈಕ್ ಮುಂಭಾಗದಲ್ಲಿ ಎಂಎಲ್ ಎ ಎಂದು ಬರೆಯಲಾಗಿದೆ. ದೊಡಿಯಾರ್ ಅನ್ನು ಆದಿವಾಸಿಗಳು ಆ ಪ್ರದೇಶದಲ್ಲಿ ತಮ್ಮ ನಾಯಕ ಎಂದು ಪರಿಗಣಿಸುತ್ತಾರೆ. ಅವರಿಗಾಗಿ ಹೋರಾಟ ಮುಂದುವರೆಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net