ಕುಟುಂಬಕ್ಕಾಗಿ ಬೀದಿಯಲ್ಲಿ​ ವ್ಯಾಪಾರಕ್ಕಿಳಿದಿದ್ದ ಬಾಲಕನಿಗೆ ಈಗ ಮತ್ತೊಂದು ಶಾಕ್! ಬಿಟ್ಟುಹೋದ ತಾಯಿ ವಾಪಾಸ್​

WhatsApp Image 2024-05-14 at 8.24.49 AM
Published on

ದೆಹಲಿ: ಕಳೆದ ವಾರ ದೆಹಲಿಯ ತಿಲಕ್ ನಗರದಲ್ಲಿ ತಂದೆ ಮೃತಪಟ್ಟ ಬೆನ್ನಲ್ಲೇ ಹೆತ್ತ ತಾಯಿ ತನ್ನನ್ನು ಹಾಗೂ ತನ್ನ ಸಹೋದರಿಯನ್ನು ಬಿಟ್ಟುಹೋದ ಕಾರಣ, 10 ವರ್ಷದ ಬಾಲಕನೊಬ್ಬ ವಿಧಿಯಿಲ್ಲದೆ, ಕುಟುಂಬದ ನಿರ್ವಹಣೆಗಾಗಿ ಬೀದಿಬದಿಯಲ್ಲಿ ಎಗ್​ರೋಲ್ ವ್ಯಾಪಾರ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ. ಬಾಲಕ ಕಷ್ಟಪಟ್ಟು, ಯಾರ ಮೇಲೂ ಅವಲಂಬಿತನಾಗದೆ, ರಸ್ತೆಬದಿಯಲ್ಲಿ ಕೆಲಸ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಬಾಲಕ ಪಟ್ಟ ಕಷ್ಟ ನೋಡಿದ ಬಾಲಿವುಡ್​ ನಟ ಅರ್ಜುನ್ ಕಪೂರ್ ಮತ್ತು ಉದ್ಯಮಿ ಆನಂದ್ ಮಹೀಂದ್ರಾ ಜಸ್ಪ್ರೀತ್​ ಸಿಂಗ್​ಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ದೆಹಲಿಯ ತಿಲಕ್ ನಗರದ 10 ವರ್ಷದ ಬಾಲಕ ಜಸ್ಪ್ರೀತ್ ಸಿಂಗ್​ನ ಕರುಳು ಹಿಂಡುವ ಕಥೆ ಕೇಳಿ ಭಾವುಕರಾದ ನೆಟ್ಟಿಗರು, ಇಂತಹ ತಾಯಿ ಯಾರಿಗೂ ಸಿಗಬಾರದು, ಇವರಿಗೆಲ್ಲಾ ಏಕೆ ಮಕ್ಕಳು, ಜೀವನ ಎಂದು ಕಿಡಿಕಾರಿದ್ದರು. ಆದರೆ, ಇದೀಗ ಹೊಸ ಟ್ವಿಸ್ಟ್​ ಎದುರಾಗಿದ್ದು, ಬಾಲಕನ ತಾಯಿ ವಿಡಿಯೋ ಮೂಲಕ ವಾಪಾಸ್ ಆಗಿದ್ದು, ಮಗನ ಬಗ್ಗೆ ಇರುವ ಕಾಳಜಿಯನ್ನು ಈ ರೀತಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಜಸ್ಪ್ರೀತ್ ತಾಯಿ ಸಿಮ್ರಾನ್ ಕೌರ್, ತನ್ನ ಮೇಲೆ ಕೇಳಿಬಂದ ಆರೋಪಗಳನ್ನು ತಳ್ಳಿಹಾಕಿದ್ದು, "ಇದೆಲ್ಲಾ ನನ್ನ ಅತ್ತೆ ಮನೆಯವರು ಮಾಡಿರುವ ಪಿತೂರಿ ಬಿಟ್ಟರೆ, ಮತ್ತೇನೂ ಅಲ್ಲ. ನನ್ನ ಮಗನ ಬಗ್ಗೆ ಅವರಿಗೆ ಕಾಳಜಿ ಇದ್ದಿದ್ದರೆ, ಏಕೆ ಅವನನ್ನು ರಸ್ತೆಬದಿ ವ್ಯಾಪಾರ ಮಾಡಲು ಬಿಡುತ್ತಿದ್ದರು? ನನ್ನ ಮಕ್ಕಳನ್ನು ನನ್ನ ವಶಕ್ಕೆ ನೀಡದಿದ್ದರೆ, ಶೀಘ್ರವೇ ಪೊಲೀಸ್ ಠಾಣೆ ಮೆಟ್ಟಿಲೇರಿ, ದೂರು ದಾಖಲಿಸುವೆ" ಎಂದು ಎಚ್ಚರಿಸಿದ್ದಾರೆ. ಸದ್ಯ ಇದು ಭಾರೀ ಗೊಂದಲಕ್ಕೆ ಕಾರಣವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net