Instagram ಮೂಲಕ ಪರಿಚಯವಾದವನನ್ನು ಮದುವೆಯಾಗಲು ಹೆತ್ತ ಮಗಳನ್ನೇ ಕೊಂದ ಪಾಪಿ ತಾಯಿ

Crime Scene
Published on

ನವದೆಹಲಿ: ಸ್ಮಾರ್ಟ್​​ಫೋನ್​ ಯುಗದಲ್ಲಿ ಜನರು ಸಾಮಾಜಿಕ ಜಾಲತಾಣದ ಗೀಳಿಗೆ ಹೆಚ್ಚು ಮಾರು ಹೋಗುತ್ತಿದ್ದು, ಇದರಿಂದ ಒಂದಿಲ್ಲೊಂದು ಸಂಕಷ್ಟಗಳನ್ನು ಬರಮಾಡಿಕೊಳ್ಳುತ್ತಿದ್ದಾರೆ. ಇದೀಗ ಅಂತಹದ್ದೆ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ತನ್ನ ಇನ್ಸ್ಟಾಗ್ರಾಂ (Instagram) ಗೆಳೆಯನನ್ನು ಮದುವೆಯಾಗಲು ತನ್ನ ಐದು ವರ್ಷದ ಮಗಳನ್ನೇ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.

ರಾಷ್ಟ್ರರಾಜಧಾನಿ ನವದೆಹಲಿಯ ಅಶೋಕ್ ವಿಹಾರ್‌ನಲ್ಲಿ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಪೊಲೀಸರು ಆರೋಪಿ ತಾಯಿಯನ್ನು ಬಂಧಿಸಿದ್ದು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು,ಹಿಮಾಚಲ ಮೂಲದವರಾದ ಮಹಿಳೆಯ ಪತಿ ಆಕೆಯನ್ನು ತೊರೆದ ನಂತರ ಇನ್​ಸ್ಟಾಗ್ರಾಂನಲ್ಲಿ (Instagram) ರಾಹುಲ್ ಎಂಬ ವ್ಯಕ್ತಿಯನ್ನು ಭೇಟಿಯಾಗಿ ಸ್ನೇಹ ಬೆಳೆಸಿದ್ದಳು. ಇದರ ನಂತರ, ಮಹಿಳೆ ತನ್ನ ಇನ್​ಸ್ಟಾಗ್ರಾಂ ಸ್ನೇಹಿತನನ್ನು ಮದುವೆಯಾಗಲು ದೆಹಲಿಗೆ ತೆರಳಲು ನಿರ್ಧರಿಸಿದಳು. ಆದರೆ ಆ ವ್ಯಕ್ತಿ ಮತ್ತು ಆತನ ಕುಟುಂಬದವರು ಆಕೆಯ ಮಗಳನ್ನು ಸ್ವೀಕರಿಸಲು ಒಪ್ಪಿರಲಿಲ್ಲ. ಇದರಿಂದ ಹತಾಶಳಾದ ಮಹಿಳೆ ಆಕೆಯ ಮಗಳ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.

ದೆಹಲಿಯ ದೀಪ್​ಚಂದ್​ ಬಂಧು ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ವೇಳೆ ಮಗುವನ್ನು ಉಸಿರುಗಟ್ಟಿಸಿ ಸಾಯಿಸಿರುವುದನ್ನು ಕಂಡಿದ್ದಾರೆ. ಕೂಡಲೇ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದು, ಮಹಿಳೆ ಹಾಗೂ ಆಕೆಯ ಸಂಬಂಧಿಕರನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿ ತಪ್ಪೊಪ್ಪಿಕೊಂಡಿದ್ದು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net