

Confessed: ತನ್ನ ಕರುಳ ಬಳ್ಳಿಯನ್ನೇ ಕಡಿದು ಹಾಕಿದ ತಾಯಿಯೊಬ್ಬಳು ಸದ್ಯ ಪೊಲೀಸರ ಅತಿಥಿಯಾಗಿದ್ದು, ವಿಚಾರಣೆಯಲ್ಲಿ ನಾಲ್ಕು ವರ್ಷದ ಮಗಳನ್ನು ಹತ್ಯೆಗೈದ ಕಾರಣವನ್ನು ಬಹಿರಂಗಪಡಿಸಿದ್ದಾಳೆ. ಆರೋಪಿ ಮಹಿಳೆಯನ್ನು ತಮಿಳುನಾಡಿನ ಕೊಯಮತ್ತೂರಿನ ತಮಿಳರಸಿ (30) ಎಂದು ಗುರುತಿಸಲಾಗಿದೆ.
ಕಾಮತೃಷೆ ತೀರಿಸಿಕೊಳ್ಳಲು ಅಡ್ಡಿಯಾಗಿದ್ದ ಮಗಳನ್ನು ಕೊಂದು ಹಾಕಿದ ಪಾಪಿ, ಕೆಲವು ತಿಂಗಳ ಹಿಂದೆಯಷ್ಟೇ ಪತಿಯಿಂದ ದೂರವಿದ್ದಳು. ಈ ವೇಳೆ ಮತ್ತೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ತಮಿಳರಸಿ, ಸರಸ-ಸಲ್ಲಾಪ ನಡೆಸಲು ಮಗಳು ಅಡ್ಡಿಯಾಗಿದ್ದಾಳೆ ಎಂದು ಕೊಲೆ ಮಾಡಿದ್ದಾಗಿ ಖಾಕಿ ಬಳಿ ಹೇಳಿಕೊಂಡಿದ್ದಾಳೆ.
ಮೃತ ಅಪರ್ಣಶ್ರೀ (4) ತಮಿಳರಸಿ ಪತಿ ರಘುಪತಿ ದಂಪತಿಯ ಪುತ್ರಿ. ರಘುಪತಿ ಕೆಲವು ತಿಂಗಳ ಹಿಂದೆ ತನ್ನ ಪತ್ನಿಯಿಂದ ಬೇರ್ಪಟ್ಟಿದ್ದ. ಈ ಸಮಯದಲ್ಲಿ ಪುತ್ರಿ ಅಮ್ಮನ ಜೊತೆ ಒಂಟಿಯಾಗಿ ವಾಸಿಸುತ್ತಿದ್ದಳು ಎನ್ನಲಾಗಿದೆ. ಗಾರೆ ಕೆಲಸಕ್ಕೆ ಹೋಗುತ್ತಿದ್ದ ಆರೋಪಿ, ಧರ್ಮಪುರಿ ಜಿಲ್ಲೆಯ ಬಿಲ್ಡರ್ ವಸಂತ್ ಎಂಬುವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ತಮ್ಮಿಬ್ಬರ ಚೆಲ್ಲಾಟಕ್ಕೆ ಮಗಳು ಅಡ್ಡಿಯಾಗಿದ್ದಾಳೆ ಎಂದು ಅಪರ್ಣಾಳ ಕತ್ತು ಹಿಸುಕಿ ಕೊಂದಿದ್ದಾಳೆ.
ಆರೋಪಿ ನೀಡಿದ ಹೇಳಿಕೆಯಲ್ಲಿ, "ನನ್ನ ಪತಿ ಬೇರ್ಪಟ್ಟ ನಂತರ, ನನಗೆ ವಸಂತ್ ಜೊತೆ ಸಂಬಂಧವಿತ್ತು. ನಾನು ವಸಂತ್ರನ್ನು ಮದುವೆಯಾಗಲು ನಿರ್ಧರಿಸಿದೆ. ಮಗುವಿದ್ದ ಕಾರಣ ಆತ ಇದಕ್ಕೆ ಒಪ್ಪುವುದಿಲ್ಲ ಅನ್ನೋದು ತಿಳಿಯಿತು. ಆಗ, ನಾನು ಒಬ್ಬಂಟಿಯಾಗಿ ಅವರ ಬಳಿ ಹೋದರೆ ಖಂಡಿತ ಒಪ್ಪುತ್ತಾರೆ ಎಂದು ಭಾವಿಸಿದೆ. ಈ ಸಮಯದಲ್ಲಿ ನನಗೆ ಮಗುವನ್ನು ಕೊಲ್ಲುವುದು ಬಿಟ್ಟರೆ ಬೇರೆ ದಾರಿ ಇರಲಿಲ್ಲ ಎಂದು ಹೇಳಿದ್ದಾಳೆ. ಮಗುವಿನ ಕೊಲೆಗೆ ಪ್ರಚೋದನೆ ನೀಡಿದ ಆರೋಪದಡಿ ವಸಂತ್‌ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ,(ಏಜೆನ್ಸೀಸ್).