ಮೊಬೈಲ್ ಬೇಕೆಂದು ಹಠ ಹಿಡಿದ ಬಾಲಕಿ; ಮುಂದೆ ನಡೆದಿದ್ದು ಆಘಾತಕಾರಿ!

ವಿಜಯವಾಣಿ - 2024-01-05T151345.298
Published on

ಹರಿಯಾಣ: ಮಹಿಳೆಯೊಬ್ಬಳು ತನ್ನ 8 ವರ್ಷದ ಮಗಳು ಆಟವಾಡಲು ಮೊಬೈಲ್ ಫೋನ್‌ ಕೇಳಿದ್ದಕ್ಕೆ ಕುಪಿತಗೊಂಡು ಆಕೆಗೆ ಫೋನ್​ ಕೊಡಲು ನಿರಾಕರಿಸಿದ್ದು, ತದನಂತರ ಪುತ್ರಿಗೆ ಮನಬಂದಂತೆ ಥಳಿಸಿ, ನೇಣು ಬಿಗಿದುಕೊಂಡ ಘಟನೆ ಓಲ್ಡ್ ಫರಿದಾಬಾದ್‌ನ ಬಸೆಲ್ವಾ ಕಾಲೋನಿಯಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.

ತನ್ನ ಮನೆಯ ಸೀಲಿಂಗ್‌ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಮೃತಪಟ್ಟ ಮಹಿಳೆಯನ್ನು ರಾಧಾ ಎಂದು ಗುರುತಿಸಲಾಗಿದ್ದು, ಪತಿಯಿಂದ ಬೇರ್ಪಟ್ಟು ಕಳೆದ ಎಂಟು ವರ್ಷಗಳಿಂದ ಪೋಷಕರೊಂದಿಗೆ ವಾಸವಾಗಿದ್ದರು ಎನ್ನಲಾಗಿದೆ.

ಘಟನೆಯ ವಿವರ: ಘಟನೆಯ ಸಮಯದಲ್ಲಿ ಮೃತ ರಾಧಾ ಅವರ ತಂದೆ ಮೂಲಚಂದ್ ಮನೆಯಲ್ಲಿ ಇರಲಿಲ್ಲ. ಈ ವೇಳೆ ಅವರ ಪತ್ನಿ ಸುಶೀಲಾ ಅವರಿಂದ ಫೋನ್ ಕರೆ ಬಂದಿದ್ದು, ಕೂಡಲೇ ಮನೆಗೆ ತಲುಪುವಂತೆ ಹೇಳಿದ್ದಾರೆ. ಮೂಲಚಂದ್ ಮನೆಗೆ ಬಂದಾಗ ರಾಧಾಳ ಕೋಣೆ ಒಳಗಿನಿಂದ ಬೀಗ ಹಾಕಿರುವುದು ಕಂಡುಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ.

"ನಾನು ಹಲವಾರು ಬಾರಿ ಬಾಗಿಲು ಬಡಿದರೂ ರಾಧಾ ಬಾಗಿಲು ತೆರೆಯಲಿಲ್ಲ. ಕಡೆಗೆ ನಾವು ಬಾಗಿಲು ಒಡೆದು ನೋಡಿದಾಗ ರಾಧಾ ಸೀಲಿಂಗ್‌ ಫ್ಯಾನ್​ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದಳು ಎಂದು ಮೂಲಚಂದ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.

ಮೂಲಚಂದ್ ಅವರ ಪತ್ನಿ ಸುಶೀಲಾ ಪ್ರಕಾರ, "ರಾಧಾ ತನ್ನ ಮೊಬೈಲ್ ಫೋನ್‌ನಲ್ಲಿ ಯಾವುದೋ ಆಟ ಆಡುತ್ತಿದ್ದಳು. ಆಗ ಅವಳ 8 ವರ್ಷದ ಮಗಳು ಶಿವಾನಿ ತನ್ನನ್ನು ಆಡಲು ಬಿಡುವಂತೆ ಒತ್ತಾಯಿಸಿದಳು. ಇದಕ್ಕೆ ಕುಪಿತಗೊಂಡ ರಾಧಾ ತನ್ನ ಮೊಬೈಲ್ ಅನ್ನು ಚೂರು ಮಾಡಿದಳು ಮತ್ತು ಮಗಳಿಗೆ ಹೊಡೆಯುತ್ತಾ ಕೋಣೆಯಿಂದ ಹೊರಬಂದಳು. ಇದಾದ ಬಳಿಕ ತನ್ನ ರೂಮ್ ಬಾಗಿಲು ಮುಚ್ಚಿ ನೇಣು ಬಿಗಿದುಕೊಂಡಿದ್ದಾಳೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net