ಆಟದ ವಸ್ತು ಎಂದು ಮೈದಾನದಲ್ಲಿ ಬಿದ್ದಿದ್ದ ಬಾಂಬ್ ಎತ್ಕೊಂಡ 2ನೇ ತರಗತಿ ವಿದ್ಯಾರ್ಥಿ: ನಂತ್ರ ನಡೆದಿದ್ದು ದುರಂತ

Boy
Published on

ಕೋಲ್ಕತ : ಶಾಲಾ ಆವರಣದಲ್ಲಿ ಬಾಂಬ್​ ಸ್ಫೋಟಗೊಂಡು ಎರಡನೇ ತರಗತಿ ವಿದ್ಯಾರ್ಥಿ ಮೃತಪಟ್ಟಿದ್ದು ಹಲವು ವಿಧ್ಯಾರ್ಥಿಗಳು ಗಾಯಗೊಂಡಿರುವ ದುರಂತ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ವರದಿಯಾಗಿದೆ.

ಮೃತ ವಿದ್ಯಾರ್ಥಿಯನ್ನು ಮುಕ್ಲೇಸೂರ್​ ರೆಹಮಾನ್ (7)​ ಎಂದು ಗುರುತಿಸಲಾಗಿದೆ. ಈ ಘಟನೆ ಮುರ್ಷಿದಾಬಾದ್​ ಜಿಲ್ಲೆಯ ದೌಲತಾಬಾದ್ ಪೊಲೀಸ್​ ಠಾಣೆ ವ್ಯಾಪ್ತಿಯ ಚೋಯಾದಂಗದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿ ಎಂದಿನಂತೆ ದೌಲತಾಬಾದ್​ನ ಚೋಯಾದಂಗ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಾಂಗಕ್ಕೆ ತೆರಳಿದ್ದ, ಮಧ್ಯಾಹ್ನ ಊಟ ಮುಗಿಸಿ ಮಕ್ಕಳೊಂದಿಗೆ ಶಾಲೆಯ ಮೈದಾನದಲ್ಲಿ ಆಟ ಆಡಲು ತೆರಳಿದ್ದ. ಮೈದಾನದಲ್ಲಿ ಬಾಲ್​ ಕಣ್ಣಿಗೆ ಬಿದ್ದಿದೆ ಅದನ್ನು ತೆಗೆದುಕೊಂಡು ಗೋಡೆಗೆ ಎಸೆದಿದ್ದೇ ತಡ ಬಾಂಬ್​ ಸ್ಫೋಟವಾಗಿದೆ. ಇದರಿಂದ ಮುಕ್ಲೇಸೂರ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತನ ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಬ್​ ಸ್ಫೋಟದ ಶಬ್ಧಕ್ಕೆ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಥಳದಲ್ಲೇ ಅಸುನೂಗಿದ್ದ ಮುಕ್ಲೇಸೂರು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ದೌಲತಾಬಾದ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮುಗ್ಧ ಮಕ್ಕಳು ಓದುತ್ತಿರುವ ಶಾಲೆಯಲ್ಲಿ ಬಾಂಬ್​ ಸ್ಫೋಟ​ ಆಗಿರುವುದಕ್ಕೆ ತೀವ್ರ ನೋವು ವ್ಯಕ್ತಪಡಿಸಿದ ಸ್ಥಳೀಯರು, ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಮೃತ ಶವವನ್ನು ಮುರ್ಷಿದಾಬಾದ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ ಎಂದು ವರಿದಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net