ಕತ್ರಿನಾಗಿಂತ ಹೆಚ್ಚು ಗಮನ ಸೆಳೆಯಿತು ವಿಜಯ್​ ಸೇತುಪತಿ ಚಪ್ಪಲಿ: ಎಂಥಾ ಸರಳತೆ ಅಂದ್ರು ನೆಟ್ಟಿಗರು!

Vijay Setupathi
Published on

ಚೆನ್ನೈ: ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ವಿಜಯ್​ ಸೇತುಪತಿ ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದಲೇ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಮಾಜದ ಬಗೆಗಿನ ಅವರ ಚಿಂತನೆ ಹಾಗೂ ಸಮಾಜಮುಖಿ ಕೆಲಸಗಳಿಂದಲೂ ಸೇತುಪತಿ ಮಾದರಿಯಾಗಿದ್ದಾರೆ. ಒಬ್ಬ ನಟನಾಗಿ ಯಾವುದೇ ಪಾತ್ರವನ್ನು ಕೊಟ್ಟರು ನಿಭಾಯಿಸುವ ಸೇತುಪತಿ ತಮ್ಮ ಪಾತ್ರದ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುಬೇಕೆಂಬುದೇ ಅವರ ಉದ್ದೇಶವಾಗಿರುತ್ತದೆ. ವಿಜಯ್​ ಅವರ ನಡೆ-ನುಡಿಯಲ್ಲೂ ತುಂಬಾ ಸರಳತೆ ಇದೆ. ಸ್ಟಾರ್​ ನಟ ಎಂಬ ಬಿರುದನ್ನು ಪಕ್ಕಕ್ಕಿಟ್ಟು ಎಷ್ಟೋ ಬಾರಿ ಸರಳತೆಯಿಂದ ನಡೆದುಕೊಂಡ ಉದಾಹರಣೆ ಇದೆ. ಇದೀಗ ಮತ್ತೊಮ್ಮೆ ವಿಜಯ್​ ಅವರು ತಮ್ಮ ಸರಳತೆಯಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ.

ವಿಜಯ್​ ಸೇತುಪತಿ ಮತ್ತು ಬಾಲಿವುಡ್​ ಬ್ಯೂಟಿ ಕತ್ರಿನಾ ಕೈಫ್​ ನಟಿಸಿರುವ ಮೇರಿ ಕ್ರಿಸ್​ಮಸ್​ ಸಿನಿಮಾ ಜನವರಿ 12ರಂದು ಬಿಡುಗಡೆಯಾಗಲಿದೆ. ಬಿಡುಗಡೆ ಸಮಯ ಹತ್ತಿರ ಇರುವುದರಿಂದ ಚಿತ್ರತಂಡ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಇತ್ತೀಚೆಗೆ ಚಿತ್ರತಂಡ ಮುಂಬೈನಲ್ಲಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತ್ತು. ಈ ವೇಳೆ ನಟಿ ಕತ್ರಿನಾ ಕೈಫ್​ ಹೈ ಹೀಲ್ಸ್​ ಚಪ್ಪಲಿ ಧರಿಸಿದರೆ, ಚಿತ್ರತಂಡದ ಇನ್ನಿತರ ಸದಸ್ಯರು ದುಬಾರಿ ಶೂಗಳನ್ನು ಧರಿಸಿದ್ದರು. ಆದರೆ, ಎಲ್ಲರ ಗಮನ ಸೆಳೆದದ್ದು ಮಾತ್ರ ವಿಜಯ್​ ಸೇತುಪತಿ ಅವರು. ಏಕೆಂದರೆ, ವಿಜಯ್​ ಓರ್ವ ಸ್ಟಾರ್​ ನಟರಾಗಿದ್ದರೂ ಸಾಮಾನ್ಯ ಜನರು ಧರಿಸುವ ಚಪ್ಪಲಿ ಹಾಕಿಕೊಂಡು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಚಿತ್ರದ ಬಗ್ಗೆ ಮಾತನಾಡಿದರು. ಅಲ್ಲದೆ, ವಿಜಯ್​ ಅವರು ಧರಿಸಿದ್ದ ಶರ್ಟ್ಸ್​ ಮತ್ತು ಪ್ಯಾಂಟ್​ ಕೂಡ ಸಾಮಾನ್ಯರ ವೇಷಭೂಷಣದಂತೆ ಇತ್ತು.

ತಮ್ಮ ಸರಳತೆಯಿಂದ ವಿಜಯ್​ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿಜಯ್​ ಸರಳತೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಇದೇ ಪ್ರತಿಕಾಗೋಷ್ಠಿಯಲ್ಲಿ ಕತ್ರಿನಾ ಅವರು ಕೆಂಪು ಬಣ್ಣದ ಡ್ರೆಸ್​ನೊಂದಿಗೆ ಎಲ್ಲರ ಕಣ್ಣು ಕುಕ್ಕಿದರು. ಕತ್ರಿನಾಗೆ ವಯಸ್ಸು ರಿವರ್ಸ್​ ಗೇರ್​ನಲ್ಲಿ ಹೋಗುತ್ತಿದೆ ಎಂದು ನೆಟ್ಟಿಗರು ಪ್ರಶಂಸಿಸಿದ್ದಾರೆ. ಪತ್ರಿಕಾಗೋಷ್ಠಿಯ ಬಳಿಕ ಕತ್ರಿನಾ ಮತ್ತು ವಿಜಯ್​, ಪಾಪರಾಜಿಗಳಿಗೆ ಪೋಸ್​ ನೀಡಿದರು.

ಇದೇ ಮೊದಲ ಬಾರಿಗೆ ಕತ್ರಿನಾ ಮತ್ತು ವಿಜಯ್​ ಒಟ್ಟಿಗೆ ನಟಿಸಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕತ್ರಿನಾ, ನಾನು, ವಿಜಯ್ ಮತ್ತು ಶ್ರೀರಾಮ್ ಒಂದು ಕೊಠಡಿಯಲ್ಲಿ ಮೊದಲ ಬಾರಿಗೆ ಭೇಟಿಯಾದೆವು. ಈ ವೇಳೆ ಬಿಳಿ ಕೂದಲು ಮತ್ತು ಬಿಳಿ ಗಡ್ಡದೊಂದಿಗೆ ಬಂದಿದ್ದ ವಿಜಯ್ ಅವರನ್ನು ನೋಡಿ, ವಾವ್​, ಇದು ನಿಜವಾಗಿಯೂ ವಿಭಿನ್ನ ಲುಕ್​ ಎಂದು ಹೇಳಿದ್ದೆ. ವಿಜಯ್ ಮತ್ತು ಶ್ರೀರಾಮ್ ಸರ್​ ಜತೆ ಕೆಲಸ ಮಾಡಿದ್ದು, ಉತ್ತಮ ಅನುಭವ ಎಂದು ಕತ್ರಿನಾ ಹೇಳಿದ್ದಾರೆ.

ಅಂದಹಾಗೆ ಮೇರಿ ಕ್ರಿಸ್‌ಮಸ್ ಸಿನಿಮಾ ಶ್ರೀರಾಮ್ ರಾಘವನ್ ನಿರ್ದೇಶನದ ಚಿತ್ರವಾಗಿದೆ. ಜನವರಿ 12ರಂದು ಹಿಂದಿ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

(ವಿಡಿಯೋ ಕೃಪೆ: ಎಕೆ ಪಾಪ್ಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net