ಕೃತಿ ಶೆಟ್ಟಿ ಬೇಡ ಬೇರೆ ಹೀರೋಯಿನ್ ಇದ್ರೆ ನೋಡಿ: ಸಿನಿಮಾ ತಿರಸ್ಕರಿಸಲು ಕಾರಣ ಕೊಟ್ಟ ವಿಜಯ್​ ಸೇತುಪತಿ

Krithi Vijay Setjupathy (1)
Published on

ಚೆನ್ನೈ: ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ವಿಜಯ್​ ಸೇತುಪತಿ ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದಲೇ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಮಾಜದ ಬಗೆಗಿನ ಅವರ ಚಿಂತನೆ ಹಾಗೂ ಸಮಾಜಮುಖಿ ಕೆಲಸಗಳಿಂದಲೂ ಸೇತುಪತಿ ಮಾದರಿಯಾಗಿದ್ದಾರೆ. ಒಬ್ಬ ನಟನಾಗಿ ಯಾವುದೇ ಪಾತ್ರವನ್ನು ಕೊಟ್ಟರು ನಿಭಾಯಿಸುವ ಸೇತುಪತಿ ತಮ್ಮ ಪಾತ್ರದ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುಬೇಕೆಂಬುದೇ ಅವರ ಉದ್ದೇಶವಾಗಿರುತ್ತದೆ. ಇತ್ತೀಚೆಗೆ ಅವರು ಖಳನಾಯಕನಾಗಿ ನಟಿಸಿದ ಜವಾನ್​ ಸಿನಿಮಾ ಭರ್ಜರಿ ಯಶಸ್ಸು ದಾಖಲಿಸಿದೆ. ಇದರ ನಡುವೆ ವಿಜಯ್ ಅವರ ಹಳೆಯ ಸಂದರ್ಶನದ ವಿಡಿಯೋ ತುಣುಕು ವೈರಲ್ ಆಗಿದೆ.

ಕೃತಿ ಶೆಟ್ಟಿ ತೆಲುಗಿನ ಉಪ್ಪೇನಾ ಚಿತ್ರದ ಮೂಲಕ ಟಾಲಿವುಡ್​ಗೆ ಪದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ವಿಜಯ್​ ಸೇತುಪತಿ ಅವರು ನಾಯಕಿ ಕೃತಿ ಶೆಟ್ಟಿ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಕೃತಿಯ ನಟನೆಯನ್ನು ನೋಡಿ ಸೇತುಪತಿ ಮನಸಾರೆ ಹೊಗಳಿದ್ದರು. ಅಲ್ಲದೆ, ಕೃತಿಯೊಂದಿಗೆ ತಮಿಳು ಚಿತ್ರವೊಂದರಲ್ಲಿ ನಟಿಸಲು ನಿರಾಕರಿಸಿದ್ದಕ್ಕೆ ಕಾರಣ ನೀಡಿರುವ ವಿಡಿಯೋ ತುಣುಕು ವೈರಲ್​ ಆಗಿದೆ. ಇದು ಸೇತುಪತಿ ನಟನೆಯ “ಲಾಭಂ” ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಸಂದರ್ಶನವೊಂದರ ವಿಡಿಯೋ ತುಣುಕಾಗಿದೆ.

ವಿಡಿಯೋದಲ್ಲಿ ಮಾತನಾಡಿರುವ ಸೇತುಪತಿ, ನಾನು ಉಪ್ಪೇನಾ ಚಿತ್ರದಲ್ಲಿ ಕೃತಿಗೆ ತಂದೆಯಾಗಿ ಅಭಿನಯಿಸಿದ್ದೇನೆ ಎಂಬುದು ಚಿತ್ರತಂಡಕ್ಕೆ ಗೊತ್ತಿರಲಿಲ್ಲ. ನನ್ನ ಮಗಳೆಂದು ಭಾವಿಸಿದ ಮೇಲೆ ಅವಳೊಂದಿಗೆ ನಾನ್ಹೇಗೆ ರೊಮ್ಯಾನ್ಸ್​ ಮಾಡಲು ಸಾಧ್ಯ ಎಂದು ಹೇಳಿದ್ದಾಗಿ ತಿಳಿಸಿದೆ. ಉಪ್ಪೇನಾ ಚಿತ್ರದ ಕ್ಲೈಮ್ಯಾಕ್ಸ್​ ಚಿತ್ರೀಕರಣದ ವೇಳೆ ನನ್ನನ್ನು ನಿನ್ನ ತಂದೆಯಂದೇ ಭಾವಿಸು. ನನ್ನ ಮಗನಿಗೆ ಸುಮಾರು 15 ವರ್ಷ. ಆತ ಕೃತಿಗಿಂತ ಸ್ವಲ ಚಿಕ್ಕವನು. ಕೃತಿಯನ್ನು ಕೂಡ ನಾನು ಮಗಳಂತೆ ಭಾವಿಸುತ್ತೇನೆ. ಆದ್ರೆ ತೆರೆಯ ಮೇಲೆ ನಾನು ಹೇಗೆ ಅವಳೊಂದಿಗೆ ರೊಮ್ಯಾನ್ಸ್​ ಮಾಡಲು ಸಾಧ್ಯ. ಹೀಗಾಗಿ ಚಿತ್ರದ ನಾಯಕಿಯಾಗಿ ಅವಳ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದೇನೆಂದು ಹೇಳಿದ್ದರು.

ವಿಜಯ್​ ಸೇತುಪತಿ ಅವರ ನಿರ್ಧಾರಕ್ಕೆ ಆ ಸಂದರ್ಭದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜವಾನ್​ ಚಿತ್ರದ ಚರ್ಚೆ ಜೋರಾಗಿದ್ದು, ಇದರ ನಡುವೆ ವಿಜಯ್​ ಸೇತುಪತಿ ವಿಡಿಯೋ ಮತ್ತೆ ಸದ್ದು ಮಾಡುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net