More

    ಬಿಳಿಗಿರಿರಂಗನಬೆಟ್ಟಕ್ಕೆ ಹರಿದು ಬಂದ ಭಕ್ತರ ದಂಡು

    ಯಳಂದೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಪ್ರವಾಸಿ ತಾಣವಾಗಿರುವ ಬಿಳಿಗಿರಿರಂಗನಬೆಟ್ಟಕ್ಕೆ ಶನಿವಾರ ಭಕ್ತರ ದಂಡೇ ಆಗಮಿಸಿತ್ತು.

    ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿನ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಏ.23ರಂದು ಇಲ್ಲಿ ದೊಡ್ಡ ರಥೋತ್ಸವ ನಡೆದಿತ್ತು. ಇದಾದ ಬಳಿಕ ಇಷ್ಟೊಂದು ದೊಡ್ಡ ಸಂಖ್ಯೆಯ ಭಕ್ತರು ಕಾಣಸಿಗಲಿಲ್ಲ. ಶನಿವಾರ ಬಿಳಿಗಿರಿರಂಗನಾಥಸ್ವಾಮಿಗೆ ವಿಶೇಷ ಪೂಜೆ ನಡೆಯುವುದು, ವಾರದ ದಿನವೂ ಆಗಿರುವುದಲ್ಲದೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅನೇಕ ಭಕ್ತರು ರಥೋತ್ಸವಕ್ಕೆ ಆಗಮಿಸಲು ಸಾಧ್ಯವಾಗಿರಲಿಲ್ಲ.

    ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ದೇವರ ಮೊರೆ: ಇದರಲ್ಲಿ ಅನೇಕ ಭಕ್ತರು ರಾಷ್ಟ್ರೀಯ ಪಕ್ಷಗಳ, ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ದೇವರ ದರ್ಶನ ಪಡೆದು ತಮ್ಮ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲಲಿ ಎಂದು ದೇವರಿಗೆ ಮೊರೆ ಇಟ್ಟರು. ಚುನಾವಣೆಯ ಬಳಿಕ ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ಪಕ್ಷದ ಕಾರ್ಯಕರ್ತರ ದಂಡೇ ದೊಡ್ಡದಾಗಿತ್ತು. ಬೆಟ್ಟದಲ್ಲಿ ಈ ಬಾರಿ ಇದೂವರೆಗೂ ಮಳೆಯಾಗದ ಕಾರಣ ಬಿಸಿಲಿನ ಝಳವೂ ಹೆಚ್ಚಾಗಿತ್ತು. ಇದರ ನಡುವೆಯೂ ಸರತಿ ಸಾಲಿನಲ್ಲಿ ನಿಂತ ಭಕ್ತರು ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲು ರಂಗನಾಯಕಿ ಅಮ್ಮನವರ ದರ್ಶನ ಪಡೆದರು. ದೇವರ ದೊಡ್ಡ ಪಾದುಕೆಗಳಿಂದ ತಲೆಗೆ ಹೊಡೆಯಿಸಿಕೊಂಡರು. ದೇಗುಲದ ವತಿಯಿಂದ ದಾಸೋಹದಲ್ಲಿ ನೆರೆದಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಖಾಸಗಿ ವಾಹನಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ಇಲ್ಲಿನ ಕಿರಿದಾದ ಹಾಗೂ ಕಡಿದಾದ ರಸ್ತೆಯ ಮೂಲಕ ತೆರಳಲು ಪ್ರಯಾಸ ಪಡುತ್ತಿದ್ದ ದೃಶ್ಯ ಅಲ್ಲಲ್ಲಿ ಕಾಣಸಿಕ್ಕಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts