More

    ಬಿಸಿಲಲ್ಲಿ ಜಲದಾಹ ನೀಗಿಸದ ಘಟಕಗಳು

    ಕೆಟ್ಟುನಿಂತ ನೀರಿನ ಯಂತ್ರ — ಉಡುಪಿಯಲ್ಲಿ ಯಾತ್ರಿಕರು, ಪ್ರವಾಸಿಗರು ಅತಂತ್ರ

    ಪ್ರಶಾಂತ ಭಾಗ್ವತ, ಉಡುಪಿ
    ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಅಳವಡಿಸಿರುವ ಅನೇಕ ಕುಡಿಯುವ ನೀರಿನ ಘಟಕಗಳು ಕೆಟ್ಟುನಿಂತಿದ್ದು, ವಿಪರೀತ ಬಿಸಿಲ ಝಳದ ದಾಹ ನೀಗಿಸಿಕೊಳ್ಳಲು ತೊಡಕಾಗಿದೆ.

    ಪ್ರತಿಷ್ಠಿತ ಧಾರ್ಮಿಕ ಕ್ಷೇತ್ರ ಹಾಗೂ ಪ್ರಮುಖ ಪ್ರವಾಸೀ ತಾಣವೂ ಆಗಿರುವ ಉಡುಪಿಗೆ ಬೇಸಿಗೆ ರಜಾ ದಿನದ ಹಿನ್ನೆಲೆಯಲ್ಲಿ ನಿತ್ಯವೂ ಸಹಸ್ರ ಸಂಖ್ಯೆಯಲ್ಲಿ ಹೊರ ರಾಜ್ಯ ಹಾಗೂ ಜಿಲ್ಲೆಯ ಯಾತ್ರಿಕರು, ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

    ದಿನವಿಡೀ ಬಿಸಿಲ ಧಗೆ

    ಕಳೆದ ಎರಡು ವಾರದಿಂದ ಕರಾವಳಿ ಪ್ರದೇಶಗಳಲ್ಲಿ ವಿಪರೀತ ಬಿಸಿಲಿನಿಂದಾಗಿ ದೈಹಿಕವಾಗಿ ಬಳಲುವಂತಾಗುತ್ತಿದೆ. ಬೆಳಗ್ಗೆ ಸೂರ್ಯೋದಯವಾಗುತ್ತಲೇ 34 ಡಿಗ್ರಿ ಸೆ. ಉಷ್ಣಾಂಶ ಇರುತ್ತಿದ್ದು, ಸೂರ್ಯ ನೆತ್ತಿಗೆ ಬರುವ ಹೊತ್ತಿಗೆ 36 ಡಿಗ್ರಿ ಸೆ. ತಾಪಮಾನ ದಾಖಲಾಗುತ್ತಿದೆ. ಮಧ್ಯಾಹ್ನ 1 ರಿಂದ 3 ಗಂಟೆಯ ವೇಳೆಗೆ 40 ಡಿಗ್ರಿ ಸೆ. ತಾಪಮಾನದ ಅನುಭವ ಆಗುತ್ತಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಬಿಸಿಲ ಧಗೆಗೆ ಜನ ಹೈರಾಣಾಗುವಂತಾಗಿದೆ.

    ಕೆಟ್ಟುನಿಂತ ಯಂತ್ರ, ನಿರಾಸೆ

    ಬಿಸಿಲ ತೀವ್ರತೆಯಿಂದಾಗಿ ಪದೇಪದೆ ಕುಡಿಯಲು ನೀರು ಬೇಕೆನಿಸುತ್ತದೆ. ಅಂತಹ ಧಗೆಯ ವಾತಾವರಣದಲ್ಲಿ ಉಡುಪಿಗೆ ಆಗಮಿಸುವ ಪ್ರವಾಸಿಗರಿಗೆ ಸಮರ್ಪಕವಾಗಿ ಕುಡಿಯಲು ನೀರು ಲಭಿಸುತ್ತಿಲ್ಲ. ಬಸ್ ನಿಲ್ದಾಣ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಕುಡಿಯುವ ನೀರಿನ ಘಟಕಗಳು ಕೆಟ್ಟುನಿಂತು ವರ್ಷಗಳೇ ಉರುಳಿದೆ. ಯಂತ್ರ ಹಾಳಗಿರುವ ಸಂಗತಿ ಅರಿಯದ ಅನೇಕ ಪ್ರವಾಸಿಗರು ಖಾಲಿ ಬಾಟಲಿಯೊಂದಿಗೆ ನೀರು ತುಂಬಿಸಿಕೊಳ್ಳಲು ನೀರಿನ ಯಂತ್ರ ಅಥವಾ ಘಟಕಗಳ ಬಳಿ ಬಂದು ನಿರಾಸೆಗೊಳ್ಳುವಂತಾಗಿದೆ.

    ಪ್ರವಾಸಿಗರ ಅಸಮಾಧಾನ

    ಉತ್ತರ ಕರ್ನಾಟಕದ ಭಾಗಗಳಿಂದ ಈ ಭಾಗದಲ್ಲಿರುವ ಧಾರ್ಮಿಕ ಕ್ಷೇತ್ರಗಳ ಭೇಟಿಗೆ ದಿನವೂ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅನೇಕರು ಕುಟುಂಬ ಸಮೇತ ಸರ್ಕಾರಿ ಬಸ್‌ಗಳ ಮೂಲಕ ಉಡುಪಿಗೆ ಬರುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿರುವ ಕುಡಿಯುವ ನೀರಿಲ್ಲದ್ದರಿಂದ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ದಿನವೂ ಒಬ್ಬರಿಗೆ ಕನಿಷ್ಠ 8-10 ಲೀಟರ್ ನೀರು ಕುಡಿಯಲು ಬೇಕು. ನಾವು ಕುಟುಂಬ ಸಮೇತ ವಿಜಯಪುರದಿಂದ ಉಡುಪಿಗೆ ಬಂದಿದ್ದು, ಕುಡಿಯುವ ನೀರು ಖರೀದಿಸಲು ಸಾವಿರಾರು ರೂಪಾಯಿ ಖರ್ಚು ಮಾಡುವಂತಾಗಿದೆ. ಹೋಟೆಲ್‌ನವರ ಬಳಿ ನೀರು ಕೊಡಿ ಎಂದರೆ, ದುಡ್ಡು ಕೊಟ್ಟು ಲೀಟರ್ ಬಾಟಲಿ ತಗೊಳ್ಳಿ ಎನ್ನುತ್ತಾರೆ. ಹೊರಗಿನಿಂದ ಬಂದ ಪ್ರವಾಸಿಗರಿಗೆ ಕುಡಿಯಲು ನೀರಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸುತ್ತಾಳೆ ಹುಬ್ಬಳ್ಳಿಯ ರುಕ್ಮವ್ವ ಮಜ್ಜಿಗಿ.

    ಜಿಲ್ಲಾಡಳಿತ, ನಗರಸಭೆಗೆ ಶೋಭಾಯಮಾನವೇ?

    ಉಡುಪಿಯ ಹಳೆಯ ಸರ್ಕಾರಿ ಬಸ್ ನಿಲ್ದಾಣ, ಉಡುಪಿ ಸರ್ವೀಸ್ ಬಸ್ ನಿಲ್ದಾಣ, ಗಡಿಯಾರ ಗೋಪುರ ಸಮೀಪದ ಪೊಲೀಸ್ ಚೌಕಿ ಸೇರಿದಂತೆ ಇನ್ನಿತರ ಕೆಲ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿರುವ ನೀರಿನ ಘಟಕ ಕೆಟ್ಟಿದೆ. ಶೀತಲೀಕರಣ ಘಟಕ ಇದ್ದರೂ ಸರಿಯಾದ ನಿರ್ವಹಣೆ ಕಾಣದೆ ಕೆಟ್ಟುನಿಂತಿದೆ. ಶ್ರೀಕೃಷ್ಣ ಮಠಕ್ಕೆ ಬರುವ ಯಾತ್ರಿಕರ ವಾಹನ ಪಾರ್ಕಿಂಗ್ ಸ್ಥಳದಲ್ಲಿರುವ ಘಟಕವೂ ಕೆಟ್ಟಿದ್ದು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹೊರ ಜಿಲ್ಲೆಯಿಂದ ಬರುವ ಪ್ರವಾಸಿಗರಿಗೆ ಉಡುಪಿಯ ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರು ಲಭಿಸುತ್ತಿಲ್ಲ ಎನ್ನುವ ವಿಚಾರ ಇಲ್ಲಿನ ಜಿಲ್ಲಾಡಳಿತ ಅಥವಾ ನಗರಸಭೆಗೆ ಶೋಭಾಯಮಾನವೇ? ಕೂಡಲೇ ಸಂಬಂಧಿತ ಅಧಿಕಾರಿಗಳು ಸಾರ್ವಜನಿಕ ಸ್ಥಳದಲ್ಲಿರುವ ಕುಡಿಯುವ ನೀರಿನ ಘಟಕ ರಿಪೇರಿ ಮಾಡಿಸಿ, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕೆಂದು ತಾರಾನಾಥ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

    ಉಡುಪಿಯಂತಹ ನಗರದಲ್ಲಿ ಪ್ರವಾಸಿಗರಿಗೆ ಕುಡಿಯಲು ನೀರು ಸಿಗದಿರುವುದು ನಿಜಕ್ಕೂ ಖೇದಕರ ಸಂಗತಿ. ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ಘಟಕ ಇದ್ದರೂ ಅದು ಊಟಕ್ಕಿಲ್ಲದ ಉಪ್ಪಿನಕಾಯಿ ಎನ್ನುವಂತಾಗಿದೆ. ಇದೀಗ ವಿಪರೀತ ಸೆಕೆ ಇದ್ದು, ಕುಡಿಯುವ ನೀರಿನ ಅಗತ್ಯತೆ ಹೆಚ್ಚಿದೆ. ಶೀತಲೀಕೃತ ನೀರಿನ ಘಟಕ ಇದ್ದರೂ ಹನಿ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದ್ದು, ಪ್ರವಾಸಿಗರು ಬೇಸರಗೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು.

    ನಿತ್ಯಾನಂದ ಒಳಕಾಡು. ಉಡುಪಿ ಜಿಲ್ಲಾ ನಾಗರಿಕ ಸಮಿತಿ ಕಾರ್ಯಕರ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts