ವಿದ್ಯಾವಂತರ ಊರು ನಂಬಿನಾಯಕಹಳ್ಳಿ

3 Min Read
ವಿದ್ಯಾವಂತರ ಊರು ನಂಬಿನಾಯಕಹಳ್ಳಿ
ನಂಬಿನಾಯಕನಹಳ್ಳಿ ಗ್ರಾಮದ ಹೊರ ನೋಟ.

ಮದ್ದೂರು: ತಾಲೂಕಿನ ಕೊಪ್ಪ ಹೋಬಳಿಯ ನಂಬಿನಾಯಕಹಳ್ಳಿ ಹಲವಾರು ವೈಶಿಷ್ಟೃಗಳನ್ನು ಹೊಂದುವ ಮೂಲಕ ಗಮನ ಸೆಳೆದಿದೆ.

ಗ್ರಾಮದ ಸುತ್ತಲೂ ಸುಂದರ ಪರಿಸರ, ಕೆರೆ-ಕಟ್ಟೆಗಳನ್ನು ಹೊಂದಿದೆ. ಹಲವಾರು ವರ್ಷಗಳ ಹಿಂದೆ ಗ್ರಾಮದಲ್ಲಿ ತಿಮ್ಮನಾಯಕ ಹಾಗೂ ನಂಬಿನಾಯಕ ಎಂಬ ಸಹೋದರರು ಆಳ್ವಿಕೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ನಂಬಿನಾಯಕನಹಳ್ಳಿ ಎಂಬ ಹೆಸರು ಬಂತು. ಒಕ್ಕಲಿಗರು ಗ್ರಾಮದ ಮೂಲ ನಿವಾಸಿಗಳು. ಇವರೊಂದಿಗೆ ಎಲ್ಲ ಸಮುದಾಯದವರು ಶಾಂತಿ-ಸೌಹಾರ್ದದಿಂದ ಜೀವನ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಬ್ಬು, ಭತ್ತ, ಹಿಪ್ಪುನೇರಳೆ ಬೇಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜತೆಗೆ ವಿದ್ಯಾವಂತರ ಸಂಖ್ಯೆಯೂ ಹೆಚ್ಚಿನ ಸಂಖ್ಯೆಯಲ್ಲಿದೆ.

ಗ್ರಾಮದಲ್ಲಿ ನಂಜುಂಡೇಶ್ವರಸ್ವಾಮಿ ದೇವರ ಒಕ್ಕಲು (ಹಳೇಪಾಲು), ವೆಂಕಟಪ್ಪ ದೇವರು ಒಕ್ಕಲು (ಪಾರೇಗೌಣರ ಪಾಲು) ಹಾಗೂ ಚಲುವರಾಯಸ್ವಾಮಿ ಒಕ್ಕಲಿನವರು (ಹೊಸಪಾಲು) ಇದ್ದಾರೆ. ಶಕ್ತಿ ದೇವತೆಗಳಾದ ಪಟ್ಟಲದಮ್ಮ, ಆಂಜನೇಯ ಹಾಗೂ ಬಸವನಪ್ಪ, ಮಾರಮ್ಮ ಬೋರೇದೇವರು, ಕಾಡುಬಸವಪ್ಪ, ಮಂಚಮ್ಮ, ಲಕ್ಷ್ಮೀದೇವಿ, ಚಿಕ್ಕಮ್ಮ ಸೇರಿದಂತೆ ಹಲವಾರು ದೇವಾಲಯಗಳಿವೆ. ಇದರೊಂದಿಗೆ ಮಹಾತ್ಮಗಾಂಧಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿ ನಿರ್ಮಾಣ ಮಾಡಿರುವುದು ವಿಶೇಷ.

ಗ್ರಾಮದ ಇತಿಹಾಸ ರೋಚಕ: ತಿಮ್ಮನಾಯಕ ಹಾಗೂ ನಂಬಿನಾಯಕರ ಆಳ್ವಿಕೆ ಅವನತಿ ಹೊಂದಿದ ನಂತರ ಗ್ರಾಮಕ್ಕೆ ನಂಜನಗೂಡು ಸಮೀಪದ ಬದನವಾಳು ಗ್ರಾಮದಿಂದ ಒಕ್ಕಲಿಗರು ಇಲ್ಲಿನ ಪಟ್ಟಲದಮ್ಮ ದೇವಸ್ಥಾನದಲ್ಲಿ ತಂಗಿದ್ದ ಸಂದರ್ಭ ವಸ್ತುಗಳನ್ನು ಇಡುತ್ತಾರೆ. ಈ ವೇಳೆ ಆಶ್ಚರ್ಯವೆಂಬಂತೆ ಹುತ್ತ ಮೂಡುತ್ತದೆ. ನಂತರ ಈ ಸ್ಥಳದಲ್ಲೇ ಅವರು ಜೀವನ ಸಾಗಿಸುತ್ತಾರೆ. ಕಾಲ ಕಳೆದಂತೆ ಅವರೂ ಅವನತಿ ಹೊಂದುತ್ತಾರೆ. ಏತನ್ಮಧ್ಯೆ ಇವರ ಜತೆಯಲ್ಲಿದ್ದ ಒಬ್ಬ ಯುವಕ ಮಾತ್ರ ಹುರಗಲವಾಡಿಯಲ್ಲಿರುವ ಅಕ್ಕನ ಮನೆಗೆ ಹೋಗಿ ಸೇರಿಕೊಳ್ಳುತ್ತಾನೆ ಎಂಬ ಬಗ್ಗೆ ಮಾಹಿತಿ ಇದೆ. ಪರಿಣಾಮ ಗ್ರಾಮ ಖಾಲಿ ಖಾಲಿಯಾಗುತ್ತದೆ.

See also  ಅಭಿವೃದ್ಧಿಗಾಗಿ ಹೊಸ ನಾಯಕತ್ವ ಬೇಕು: ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿಕೆ

ದಿನ ಕಳೆದಂತೆ ಪಟ್ಟಲದಮ್ಮ ದೇವಾಲಯಕ್ಕೆ ಚಂದಗಾಲು, ಬಿದರಕೋಟೆ, ಚಲ್ಲಕನಹಳ್ಳಿ ಗ್ರಾಮಸ್ಥರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ದಿನಗಳಲ್ಲಿ ತಮ್ಮ ಗ್ರಾಮಗಳಲ್ಲೇ ಪಟ್ಟಲದಮ್ಮ ದೇವಸ್ಥಾನ ನಿರ್ಮಿಸಿ ಪೂಜೆ ಮಾಡಲು ಆರಂಭಿಸುತ್ತಾರೆ. ಇನ್ನು ಚಂದಗಾಲು, ಬಿದರಕೋಟೆ, ಚಲ್ಲಕನಹಳ್ಳಿ ಹಾಗೂ ನಂಬಿನಾಯಕನಹಳ್ಳಿ ಗ್ರಾಮಸ್ಥರು ಸಹೋದರರಂತೆ ವಾಸಿಸುತ್ತಿದ್ದ ಕಾರಣ ಹೆಣ್ಣು ತರುವುದು ಮತ್ತು ಕೊಡುವುದು ಇರಲಿಲ್ಲ.

ಕೊಪ್ಪದಲ್ಲಿ ಕೊಪ್ಪಕೆರೆ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿ ನಂಬಿನಾಯಕನಹಳ್ಳಿಯಿಂದ ಹುರಗಲವಾಡಿಗೆ ಅಕ್ಕನ ಮನೆಗೆ ಹೋಗಿದ್ದ ಯುವಕ ನಿತ್ಯ ಕೆರೆ ನಿರ್ಮಾಣ ಕೆಲಸ ಮುಗಿಸಿ ನಂಬಿನಾಕಯನಹಳ್ಳಿಯತ್ತ ಮುಖ ಮಾಡಿ ನಮಸ್ಕಾರ ಮಾಡಿ ಮುಂದೆ ಸಾಗುತ್ತಿರುತ್ತಾನೆ. ಇದನ್ನು ಗಮನಿಸಿದ ಮೇಸ್ತ್ರಿ ಏಕೆ ನಮಸ್ಕಾರ ಮಾಡುತ್ತೀಯ ಎಂದು ಕೇಳಿದಾಗ ನಂಬಿನಾಯಕನಹಳ್ಳಿಯ ಕಥೆ ವಿವರಿಸುತ್ತಾನೆ. ಈತನಿಗೆ ತನ್ನ ಮಗಳನ್ನು ವಿವಾಹ ಮಾಡಿಕೊಟ್ಟರೆ ನಂಬಿನಾಯಕನಹಳ್ಳಿಯ ಆಸ್ತಿಯನ್ನು ತನ್ನದಾಗಿಸಿಕೊಳ್ಳಬಹುದು ಎಂಬ ದುರುದ್ದೇಶದಿಂದ ಮೇಸ್ತ್ರಿ ಮದುವೆ ಮಾಡುತ್ತಾನೆ. ದಿನ ಕಳೆದಂತೆ ತಂದೆಯ ದುರುದ್ದೇಶ ತಿಳಿದ ಮಗಳು ಗಂಡನ ಆಸ್ತಿಪತ್ರಗಳನ್ನು ಹರಿದು ಹಾಕುತ್ತಾಳೆ. ಇದರಿಂದ ಕೋಪಗಂಡ ತಂದೆ ಮಗಳಿಗೆ ಹೊಡೆದಾಗ, ಮಗಳು ಕೋಪಗೊಂಡು ತಂದೆಗೆ ಏನೋ ಶಾಪ ಕೊಡುತ್ತಾಳೆ ಎಂಬುದು ಈಗ ಇತಿಹಾಸ. ನಂತರ ದಿನಗಳಲ್ಲಿ ಗ್ರಾಮಕ್ಕೆ ಚಲುವರಾಯಸ್ವಾಮಿ, ವೆಂಕಟಪ್ಪ ಹಾಗೂ ನಂಜುಂಡೇಶ್ವರಸ್ವಾಮಿ ದೇವರ ಒಕ್ಕಲಿನವರು ಸೇರಿದಂತೆ ಎಲ್ಲ ವರ್ಗದವರು ನೆಲೆಯೂರಿದರು ಎಂಬ ಬಗ್ಗೆ ಮಾಹಿತಿ ಇದೆ.

ಗ್ರಾಮದಲ್ಲಿ ಪುರಾತನ ಕೊಳವಿದ್ದು ಸುಮಾರು 40 ವರ್ಷಗಳ ಹಿಂದೆಯೇ ಗ್ರಾಮದ ಜನರು ಈ ಕೊಳದ ನೀರನ್ನು ಕುಡಿಯಲು ಮತ್ತು ಅಡುಗೆಗೆ ಬಳಸುತ್ತಿದ್ದರು. ಗರ್ಭಿಣಿಯೊಬ್ಬಳು ಹೆರಿಗೆ ಸಂದರ್ಭ ಈ ನೀರನ್ನು ಕುಡಿದು ಮಗುವಿಗೆ ಜನ್ಮ ನೀಡಿದಳು ಎಂಬ ಬಗ್ಗೆ ಮಾಹಿತಿ ಇದೆ. ಕಾಲ ಕ್ರಮೇಣ ಗ್ರಾಮದಲ್ಲಿ ಬೋರ್‌ವೆಲ್, ಬಾವಿಯನ್ನು ತೆರೆದ ನಂತರ ಕೊಳದಲ್ಲಿ ನೀರು ಕುಡಿಯುವುದನ್ನು ನಿಲ್ಲಿಸಿದರು. ಇಂದಿಗೂ ಕೂಡ ಗಾಮದಲ್ಲಿ ಕೊಳ ಇದೆ.

See also  ಅಪಘಾತದಲ್ಲಿ ಹೋಂಗಾರ್ಡ್ ದಾರುಣ ಸಾವು: ಡಿಕ್ಕಿಯ ರಭಸಕ್ಕೆ ಛಿದ್ರಗೊಂಡ ದೇಹ

ಗ್ರಾಮಕ್ಕೆ ತನ್ನದೆಯಾದ ಇತಿಹಾಸವಿದ್ದು, ಹೆಮ್ಮೆ ಎನಿಸುತ್ತದೆ. ಇಲ್ಲಿ ಎಲ್ಲ ಜನಾಂಗದವರು ಶಾಂತಿ ಮತ್ತು ಸೌಹಾರ್ದದಿಂದ ಜೀವನ ನಡೆಸುತ್ತಿದ್ದೇವೆ.
ಎಂ.ಸಿ.ಸಿದ್ದಯ್ಯ ಗ್ರಾಪಂ ಮಾಜಿ ಅಧ್ಯಕ್ಷ ನಂಬಿನಾಯಕನಹಳ್ಳಿ

ಗ್ರಾಮದಲ್ಲಿ ಈ ಹಿಂದೆ ಪೌರಾಣಿಕ ನಾಟಕ, ರಂಗಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿತ್ತು. ಹಲವು ಜನರು ಪೌರಾಣಿಕ ನಾಟಕವಾ ಡಿಸಲು ಮನೆ, ಹಣ ಕಳೆದುಕೊಂಡಿದ್ದಾರೆ. ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ ಗ್ರಾಮದ ನಮ್ಮದು. ಇದು ನಮಗೆ ಹೆಮ್ಮೆಯ ವಿಷಯ.
ನಂದೀಶ್ ಸಮಾಜ ಸೇವಕ, ನಂಬಿನಾಯಕನಹಳ್ಳಿ

ಗ್ರಾಮದಲ್ಲಿ ಹಲವಾರು ದೇವಾಲಯಗಳಿದ್ದು, ಧಾರ್ಮಿಕ ಕಾರ್ಯಕ್ರಮ ವಿಚಾರದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಆಚರಣೆ ಮಾಡುತ್ತೇವೆ. ಗ್ರಾಮದಲ್ಲಿ ಎಲ್ಲ ಸಮುದಾಯದವರು ಶಾಂತಿ-ಸೌಹಾರ್ದ ಮತ್ತು ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದೇವೆ. ಇದೆ ನಮಗೆ ಖುಷಿ ಮತ್ತು ಹೆಮ್ಮೆಯ ವಿಷಯ.
ರಂಜಿತಾ ಗ್ರಾಪಂ ಮಾಜಿ ಅಧ್ಯಕ್ಷೆ ನಂಬಿನಾಯಕನಹಳ್ಳಿ

Share This Article