ಕಿಡ್ನಿ ಕೊಟ್ಟರು ಫಲಿಸಲಿಲ್ಲ... ಅಮ್ಮನ ತ್ಯಾಗ ಕಣ್ಣೀರಲ್ಲೇ ಅಂತ್ಯ

ವಿಜಯವಾಣಿ - 2024-11-16T190833.497
Published on

ಆಂಧ್ರಪ್ರದೇಶ: ಈ ಜಗತ್ತಿನಲ್ಲಿ ತಂದೆ-ತಾಯಿ ಪ್ರೀತಿ ಮುಂದೆ ಉಳಿದೆಲ್ಲವೂ ಶೂನ್ಯ. ಅದರಲ್ಲೂ ಅಮ್ಮನ ಪ್ರೀತಿಗಿಂತ ದೊಡ್ಡದು ಮತ್ತೊಂದಿಲ್ಲ. ಮಗಳಿರಲಿ, ಮಗನೇ ಇರಲಿ, ತಾಯಿಯ ಮಡಿಲು ಬೇಕೇ ಬೇಕು. ಬಹುತೇಕರು ತಮ್ಮ ಪೋಷಕರನ್ನು ಜಗತ್ತು ಎಂದು ಭಾವಿಸಿ, ಅವರನ್ನು ಅತ್ಯಂತ ಪ್ರೀತಿಯಿಂದ ಜತೆಗಿಟ್ಟುಕೊಂಡು ನೋಡಿಕೊಂಡರೆ, ಕೆಲವರು ಮಾತ್ರ ಅವರನ್ನು ಅನಾಥಾಶ್ರಮ, ಪ್ರತ್ಯೇಕ ಮನೆಯಲ್ಲಿರಿಸಿ, ಚಪ್ಪಲಿಗಿಂತ ಕಡೆಯಾಗಿ ಕಾಣುತ್ತಾರೆ. ಅಂತಹ ಹೃದಯ ಹಿಂಡುವ ಘಟನೆಗಳು, ದೃಶ್ಯಗಳು ಕಣ್ಮರೆಯಾಗಲಿ. ಕೇವಲ 9 ತಿಂಗಳು ತನ್ನ ಗರ್ಭದಲ್ಲಿ ಹೊತ್ತು ಸಾಕದ ಅಮ್ಮ, ತನ್ನ ಕೊನೆಯುಸಿರು ಇರುವವರೆಗೂ ಪ್ರೀತಿ, ತ್ಯಾಗಗಳನ್ನು ಮಕ್ಕಳಿಗಾಗಿ ಮಾಡಿಕೊಂಡು ಬರುತ್ತಾಳೆ. ಅದಕ್ಕೆ ಇಂದು ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಸದ್ಯ ಇಲ್ಲೊಂದು ಘಟನೆ ಕೂಡ ಇದೇ ಸಾಲಿಗೆ ಸೇರುತ್ತದೆ.

ಪೆದ್ದಪಲ್ಲಿ ಜಿಲ್ಲೆಯ ಪಾಲಕುರ್ತಿ ಮಂಡಲದ ಪುಟ್ನೂರು ಗ್ರಾಮದ ಲಕ್ಷ್ಮಯ್ಯ ಮತ್ತು ಸತ್ತೆಮ್ಮ ದಂಪತಿಯ ಮುದ್ದಿನ ಪುತ್ರ ರಾಮು (35) ಆರೋಗ್ಯದಲ್ಲಿ ವಿಪರೀತ ಬದಲಾವಣೆ ಕಂಡುಬಂದ ಬೆನ್ನಲ್ಲೇ ಅವರ ತಾಯಿ, ಮಗನ ಅನಾರೋಗ್ಯದ ಹಿಂದಿರುವ ಕಾರಣವೇನು? ಎಂದು ತಿಳಿದುಕೊಳ್ಳಲು ಹತ್ತಿರದ ಆಸ್ಪತ್ರೆಯ ವೈದ್ಯರಲ್ಲಿ ಪ್ರಶ್ನಿಸಿದ್ದಾರೆ. ಈ ವೇಳೆ ಮಗ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ ಎಂಬುದು ಆಕೆ ಗೊತ್ತಾಗಿದೆ. ಮುಂದೇನು ಮಾಡೋದು ಎಂದು ತಿಳಿಯದ ಸತ್ತೆಮ್ಮ, ತನಗೆ ತಿಳಿದ ವೈದ್ಯರ ಮೊರೆ ಹೋಗಿ, ಅವರ ಬಳಿ ಅಂಗಲಾಚಿ ಪುತ್ರನನ್ನು ಉಳಿಸಿಕೊಡಿ, ಎಷ್ಟು ಹಣವಾದರೂ ಪರವಾಗಿಲ್ಲ ಎಂದು ಬೇಡಿಕೊಂಡಿದ್ದಾರೆ. ಆದರೆ, ದುರಾದೃಷ್ಟವಶಾತ್​ ತಾಯಿಯ ಕೂಗು ವೈದ್ಯರಿಗೆ ಕೇಳಿಸಿತೆ ಹೊರತು ಭಗವಂತನಿಗೆ ಕೇಳಿಸಲಿಲ್ಲ.

ನೋಡುವ ಆಸೆ ವ್ಯರ್ಥ

ತನ್ನ ಕಿಡ್ನಿ ಕೊಟ್ಟರೆ ಮಗನ ಜೀವ ಉಳಿಸಲು ಅವಕಾಶವಿದೆ ಎಂದು ಯಾರೋ ನೀಡಿದ ಸಲಹೆಯ ಮೇರೆಗೆ ಕಿಡ್ನಿ ದಾನ ಮಾಡಿದ ತಾಯಿಗೆ ಉಳಿದಿದ್ದು, ಕೇವಲ ಕಣ್ಣೀರು. ಹೈದರಾಬಾದ್‌ನ ನಿಮ್ಸ್ ಆಸ್ಪತ್ರೆಯಲ್ಲಿ ರಾಮು ಕೊನೆಯುಸಿರೆಳೆದರು. ಕಿಡ್ನಿ ದಾನ ಮಾಡಿದರೂ ಸಹ ಪುತ್ರನನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ತಾಯಿ ಕುಸಿದು ಹೋಗಿದ್ದಾಳೆ. ಮಗನನ್ನು ಮತ್ತೊಮ್ಮೆ ನೋಡುವ ಅವಳ ಆಸೆ ವ್ಯರ್ಥವಾಯಿತು. ಒಂದು ಕಿಡ್ನಿ ಕಳೆದುಕೊಂಡೆ ಎಂಬುದಕ್ಕೆ ಬೇಸರಗೊಳ್ಳದ ತಾಯಿ, ಮಗ ಬದುಕಲಿಲ್ಲವೇ ಎಂಬ ನೋವಿನಿಂದ ಕಣ್ಣೀರಿಟ್ಟ ಘಟನೆ ಎಂಥವರ ಹೃದಯ ಕಲಕುವಂತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net