ಅಕ್ಕ-ಪಕ್ಕ ಮನೆಯವರ ನಡುವಿನ ಜಟಾಪಟಿ ಸಾವಿನಲ್ಲಿ ಅಂತ್ಯ! ಪೊಲೀಸರ ಅತಿಥಿಯಾದ ಅಮ್ಮ-ಮಗಳು

daughter and mother
Published on

ಚಾಮರಾಜನಗರ: ಕೊಳ್ಳೇಗಾಲದಲ್ಲಿ ಅಕ್ಕ-ಪಕ್ಕ ಮನೆಯವರ ಮಧ್ಯೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ತಮ್ಮ ಪಕ್ಕದ ಮನೆಯವನ ಮೇಲೆ ಹಲ್ಲೆಗೈದು ಆತನ ಸಾವಿಗೆ ಕಾರಣರಾದ ಆರೋಪದಲ್ಲಿ ಇದೀಗ ತಾಯಿ ಮತ್ತು ಮಗಳು ಅರೆಸ್ಟ್​ ಆಗಿದ್ದಾರೆ. ಜಟಾಪಟಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ಬಡಾವಣೆಯ ನಿವಾಸಿ ಮಹದೇವಸ್ವಾಮಿ(40) ಎಂದು ಗುರುತಿಸಲಾಗಿದೆ. ಪಕ್ಕದ ಮನೆಯ ಚಂದ್ರಮ್ಮ(50) ಮತ್ತು ಮಗಳು ಪ್ರೀತಿ(27) ಬಂಧಿತ (Mother & Daughter) ಆರೋಪಿಗಳು ಎಂದು ವರದಿ ಉಲ್ಲೇಖಿಸಿದೆ.

ಅಸಲಿಗೆ ನಡೆದಿದ್ದೇನು?

ಚಂದ್ರಮ್ಮ ಮತ್ತು ಮಹದೇವಸ್ವಾಮಿ ಮನೆ ಒಂದೇ ಬೀದಿಯಲ್ಲಿದೆ. ಇವರಿಬ್ಬರ ಕುಟುಂಬದ ನಡುವೆ ಎರಡು ವರ್ಷಗಳಿಂದ ಆಗಾಗ್ಗೆ ಜಗಳ ನಡೆಯುತ್ತಲೇ ಇತ್ತು. ಸೋಮವಾರ (ಸೆ.30) ಸಂಜೆ ಇವರ ಬೀದಿಯಲ್ಲಿ ಅಕ್ಕಿ ಮೂಟೆ ತುಂಬಿದ್ದ ಆಟೋ ಬರುತ್ತಿತ್ತು. ಆಟೋ ಬಂದರೆ ಪೈಪ್​ಲೈನ್ ಹೊಡೆದು ಹೋಗುತ್ತದೆ ಎಂದು ಮಹದೇವಸ್ವಾಮಿ ಅಣ್ಣನ‌ ಮಗ ರಮೇಶ್ ಆಟೋ ತಡೆದು ನಿಲ್ಲಿಸಿದ್ದಾನೆ. ಬಳಿಕ ವಿಚಾರಿಸಿದಾಗ ಅಕ್ಕಿ ಮೂಟೆಯನ್ನು ಚಂದ್ರಮ್ಮ ಮನೆಗೆ ಕೊಂಡೊಯ್ಯುತ್ತಿರುವುದಾಗಿ ಆಟೋ ಚಾಲಕ ಹೇಳಿದ್ದಾನೆ.

ಮನೆ ಮುಂದಕ್ಕೆ ಆಟೋ ಬಾರದಂತೆ ತಡೆದ ಕೋಪಕ್ಕೆ ಚಂದ್ರಮ್ಮ ಮತ್ತು ಮಗಳು ಪ್ರೀತಿ ಹೊರಬಂದು ಜಗಳವಾಡಿದ್ದಾರೆ. ಆಗ ತಾನು ಮನೆಯಿಂದ ಹೊರಬಂದ ಮಹದೇವಸ್ವಾಮಿ, ಅಮ್ಮ-ಮಗಳ ಜತೆ ಮಾತಿನ ಚಕಮಕಿ ನಡೆಸಿದ್ದಾರೆ. ಚಂದ್ರಮ್ಮ ಮತ್ತು ಪ್ರೀತಿ ಇಟ್ಟಿಗೆ ಮತ್ತು ಕಲ್ಲಿನಿಂದ ಮಹದೇವಸ್ವಾಮಿಗೆ ಹೊಡೆದಿದ್ದಾರೆ. ಈ ವೇಳೆ ಇಟ್ಟಿಗೆಯು ಮಹದೇವಸ್ವಾಮಿ ಎದೆಗೆ ಬಿದ್ದಿದೆ. ಮೊದಲೇ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಮಹದೇವಸ್ವಾಮಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾ‌‌ನೆ.

ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೃತ

ಗಾಯಾಳು ಮಹದೇವಸ್ವಾಮಿಯನ್ನು ಕೊಳ್ಳೇಗಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸುವಾಗ ದಾರಿ ಮಧ್ಯೆಯೇ ಮಹದೇವಸ್ವಾಮಿ ಮೃತಪಟ್ಟರು ಎಂದು ರಮೇಶ್ ದೂರು ನೀಡಿದ್ದಾನೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ, ಚಂದ್ರಮ್ಮ ಮತ್ತು ಮಗಳು ಪ್ರೀತಿಯನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net