

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಶುರುವಾದ ತಾಯಿ, ಮಗಳ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದುಕೊಂಡಿದ್ದು, ಪುತ್ರಿ ಸಾವನ್ನಪ್ಪಿದ್ದಾಳೆ. ವೃದ್ಧೆ ತಾಯಿ, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬನಶಂಕರಿಯ ಶಾಸಿನಗರದ ನಿವಾಸಿ ಸಾಹಿತಿ (17) ಮೃತ ಬಾಲಕಿ. ಈಕೆಯ ತಾಯಿ ಪದ್ಮಜಾ (60), ತೀವ್ರ ಗಾಯದಿಂದ ಪ್ರಜ್ಞೆ ತಪ್ಪಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ರಾತ್ರಿ 7.30ರಲ್ಲಿ ಘಟನೆ ನಡೆದಿದೆ ಎಂದು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಭರಮಪ್ಪ ಜಗಲಾಸರ್ ತಿಳಿಸಿದ್ದಾರೆ.
ಪದ್ಮಜಾ ದಂಪತಿ ಸ್ವಂತ ಮನೆಯಲ್ಲಿ ಪುತ್ರಿ ಸಾಹಿತಿ ಜೊತೆಗೆ ನೆಲೆಸಿದ್ದರು. 3 ತಿಂಗಳ ಹಿಂದೆಯಷ್ಟೇ ಪದ್ಮಜಾ ಪತಿ ಸಾವನ್ನಪ್ಪಿದ್ದರು. ತಾಯಿ ಮತ್ತು ಮಗಳು ವಾಸವಾಗಿದ್ದು, ಇತ್ತೀಚೆಗೆ ಸಾಹಿತಿ, ಪಿಯುಸಿ ಮುಗಿಸಿದ್ದಳು. ತಾಯಿ ಮತ್ತು ಮಗಳ ನಡುವೆ ಸಂಜೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಇಬ್ಬರು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ. ಆನಂತರ ಪದ್ಮಜಾ, ತಮ್ಮ ಸಂಬಂಧಿಕರಿಗೆ ಕರೆ ಮಾಡಿ ನೋವು ಹಂಚಿಕೊಂಡಿದ್ದಾರೆ.
ಗಾಬರಿಗೊಂಡು ಸಂಬಂಧಿಕರು ಬರುವಷ್ಟರಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ಸಾಹಿತಿ, ಮನೆಯಲ್ಲಿಯೇ ಸಾವನ್ನಪ್ಪಿದ್ದರು. ಪ್ರಜ್ಞೆ ತಪ್ಪಿದ್ದ ಪದ್ಮಜಾ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಕ್ಕೂ ಮೊದಲು ಸಂಬಂಧಿಕರ ಬಳಿ ಪದ್ಮಜಾ, ಪರಸ್ಪರ ಜಗಳ ಮಾಡಿಕೊಂಡು ಚಾಕುವಿನಿಂದ ಇರಿದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಪದ್ಮಜಾ ಆರೋಗ್ಯದಲ್ಲಿ ಸುಧಾರಣೆ ಕಂಡ ಮೇಲೆ ಹೆಚ್ಚಿನ ಮಾಹಿತಿ ಕಲೆ ಹಾಕಬೇಕಾಗಿದೆ ಎಂದು ಡಿಸಿಪಿ ಲೋಕೇಶ್ ಭರಮಪ್ಪ ಜಗಲಾಸರ್ ಮಾಹಿತಿ ನೀಡಿದ್ದಾರೆ.