ಎರಡನೇ ಪತಿಯೂ ಸಾವಿಗೀಡಾದ್ದರಿಂದ ನೊಂದು ಹೆಣ್ಣುಮಕ್ಕಳಿಬ್ಬರ ಜತೆ ಒಂದೇ ಕುಣಿಕೆಗೆ ಕೊರಳೊಡ್ಡಿದ ತಾಯಿ!

Crime Symbolic
Published on

ಮಂಗಳೂರು: ಈಕೆ ಬಾಳಲ್ಲಿ ದುರಂತದ ಮೇಲೆ ದುರಂತ ಎಂದರೂ ಸರಿಯೇ. ಏಕೆಂದರೆ ಮೊದಲ ಪತಿ ಸಾವಿಗೀಡಾದ ಬಳಿಕ ಇನ್ನೊಂದು ಮದುವೆಯಾದ ಈಕೆಗೆ ಮತ್ತೊಂದು ದುರಂತ ಕಾಡಿತ್ತು. ಎರಡನೇ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನೊಂದ ತಾಯಿ, ಮಕ್ಕಳಿಬ್ಬರೊಂದಿಗೆ ಒಂದೇ ಕುಣಿಕಿಗೆ ಕೊರಳೊಡ್ಡಿದ್ದಾಳೆ.

ಮಂಗಳೂರಿನ ಕೊಡಿಯಾಲ್​ಬೈಲಿನಲ್ಲಿ ಈ ಘಟನೆ ನಡೆದಿದೆ. ವಿಜಯಾ (33) ಆತ್ಮಹತ್ಯೆ ಮಾಡಿಕೊಂಡ ತಾಯಿ. ಈಕೆ ತನ್ನ ಮಕ್ಕಳಾದ ಶೋಭಿತಾ (4) ಹಾಗೂ ಯಜ್ಞಾ (12) ಜೊತೆ ಒಂದೇ ನೇಣಿಗೆ ಕೊರಳೊಡ್ಡಿದ್ದಳು. ಆದರೆ ಪುತ್ರಿ ಯಜ್ಞಾ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಪತಿ ಆರು ವರ್ಷಗಳ ಹಿಂದೆ ಮೃತಪಟ್ಟಿದ್ದರಿಂದ ವಿಜಯಾ ಇನ್ನೊಂದು ಮದುವೆಯಾಗಿದ್ದರು. ಆದರೆ ಎರಡನೇ ಪತಿ ಇತ್ತೀಚೆಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ನೊಂದಿದ್ದ ವಿಜಯಾ ಇಬ್ಬರು ಹೆಣ್ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಜ್ಞಾ ಕಾಲ ಬುಡದಲ್ಲಿ ಟೀಪಾಯಿ ಇದ್ದು ಆಕೆ ಅದರ ಆಧಾರ ಪಡೆದು ಜೀವರಕ್ಷಣೆಗಾಗಿ ಕೂಗಿಕೊಂಡಿದ್ದಳು. ತಕ್ಷಣ ಧಾವಿಸಿದ ಸ್ಥಳೀಯರು ಆಕೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಆದರೆ ತಾಯಿ ವಿಜಯಾ, ಮಗಳು ಶೋಭಿತಾ ಸಾವಿಗೀಡಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net