ಕರ್ನಾಟಕದಲ್ಲೇ ಅತೀ ಹೆಚ್ಚು ಶಿಕ್ಷಕ ಹುದ್ದೆ ಖಾಲಿ!

Teacher-2
Published on

ಜಯತೀರ್ಥ ಪಾಟೀಲ
ಕಲಬುರಗಿ: ಕರ್ನಾಟಕದಲ್ಲಿ ಅತಿ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿದ್ದು, ಶಿಕ್ಷಕರು ಮತ್ತು ಮಕ್ಕಳ ಅನುಪಾತದ ಸರಾಸರಿಯಲ್ಲೂ ರಾಜ್ಯ ಹಿಂದೆ ಬಿದ್ದಿರುವ ಅಚ್ಚರಿ ಸಂಗತಿ ಬೆಳಕಿಗೆ ಬಂದಿದೆ.

ಸಂಸತ್ ಅಧಿವೇಶನದಲ್ಲಿ ರಾಜ್ಯಸಭಾ ಸದಸ್ಯ ಸಂಜಯ್ಸಿಂಗ್ ಪ್ರಶ್ನೆಗೆ ಉತ್ತರ ನೀಡಿದ ಶಿಕ್ಷಣ ಸಚಿವರು, ಕರ್ನಾಟಕದಲ್ಲಿ 49,679 ಸರ್ಕಾರಿ ಶಾಲೆಗಳಿದ್ದು, 54,45,000 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 1.41 ಲಕ್ಷ ಶಿಕ್ಷಕರ ಹುದ್ದೆ ಖಾಲಿ ಇವೆ ಎಂದು ವಿವರಿಸಿದ್ದಾರೆ.

2021-22ರಲ್ಲಿ ಶೇ.37.07 ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಸೌಲಭ್ಯವಿದ್ದು, ಶೇ.24 ಶಾಲೆಗಳಿಗೆ ಇಂಟರ್​ನೆಟ್ ಸಂಪರ್ಕ ಕಲ್ಪಿಸಲಾಗಿದೆ. ಶೇ.91.3 ಶಾಲೆಗಳು ಗ್ರಂಥಾಲಯ, ಶೇ.72.6 ಶಾಲೆಗಳು ಆಟದ ಮೈದಾನ ಹೊಂದಿವೆ. ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಹೆಚ್ಚಳವಾಗಿದ್ದರೆ, ಖಾಸಗಿ ಶಾಲೆಗಳಲ್ಲಿ ಕಡಿಮೆ ಆಗಿದೆ. ಹತ್ತಿರದ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ, ಕಡ್ಡಾಯ ಶಿಕ್ಷಣ ನೀಡುವುದು ಆಯಾ ರಾಜ್ಯ ಸರ್ಕಾರಗಳ ಕರ್ತವ್ಯ. ಶಿಕ್ಷಕರ ಖಾಲಿ ಹುದ್ದೆ ಶೀಘ್ರ ಭರ್ತಿ ಮಾಡುವಂತೆ ಆಯಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಕಲ್ಯಾಣ ಕರ್ನಾಟಕದ ಎಂಟು ಶೈಕ್ಷಣಿಕ ಜಿಲ್ಲೆಗಳಿಗೂ ಶಿಕ್ಷಕರ ಖಾಲಿ ಹುದ್ದೆ ಸಮಸ್ಯೆಯಾಗಿ ಕಾಡುತ್ತಿದೆ. ಈ ಜಿಲ್ಲೆಗಳಲ್ಲಿ 15,253 ಹುದ್ದೆ ಖಾಲಿ ಇದ್ದುದರಿಂದ ಗುಣಾತ್ಮಕ ಶಿಕ್ಷಣ, ಪರಿಣಾಮಕಾರಿ ಕಲಿಕೆಗೆ ಹಿನ್ನಡೆಯಾಗುತ್ತಿದೆ.

2019-20ರಲ್ಲಿ 22,200 (ಶೇ.8.46) ಶಿಕ್ಷಕರ ಹುದ್ದೆ ಖಾಲಿ ಇದ್ದರೆ, 2020-21ರಲ್ಲಿ ಈ ಪ್ರಮಾಣ 34,079 (ಶೇ.14.62) ಹಾಗೂ 2021-22ರಲ್ಲಿ 1,41,358ಕ್ಕೆ (ಶೇ.57.57) ಏರಿದೆ. ನೆರೆಯ ಕೇರಳದಲ್ಲಿ ಬರಿ 1815 ಹುದ್ದೆ ಖಾಲಿ ಇದ್ದು, ಈ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ದಯನೀಯವಿದೆ.

ತಮಿಳುನಾಡಿನಲ್ಲಿ ಶೇ.2.19, ಮಹಾರಾಷ್ಟ್ರ ಶೇ.3.88, ತೆಲಂಗಾಣ ಶೇ.12.32, ಪಂಜಾಬ್ ಶೇ.0.88, ರಾಜಸ್ಥಾನ ಶೇ.8.11, ಉತ್ತರಪ್ರದೇಶ ಶೇ.39.13, ಗೋವಾ ಶೇ.7.4, ಜಮ್ಮು-ಕಾಶ್ಮೀರದಲ್ಲಿ ಶೇ.18.56 ಶಿಕ್ಷಕರ ಹುದ್ದೆ ಖಾಲಿ ಇದೆ.

ಶಿಕ್ಷಕರ ಖಾಲಿ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರ ಈಗಲೇ ಪ್ರಕ್ರಿಯೆ ಪ್ರಾರಂಭಿಸಿದೆ. ಹಿಂದಿನ ಸರ್ಕಾರದವರು ಗಮನಹರಿಸಬೇಕಿತ್ತು. ಆದರೆ ನಮ್ಮ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ.
| ಡಾ.ಉಮೇಶ ಜಾಧವ್, ಸಂಸದ, ಕಲಬುರಗಿ

ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇರುವುದು ಆತಂಕ ಮೂಡಿಸಿದೆ. ಕಡ್ಡಾಯ ಶಿಕ್ಷಣ, ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಎನ್ನುವ ಸರ್ಕಾರಗಳು ಹುದ್ದೆ ಭರ್ತಿಗೆ ಯಾಕೆ ಮುಂದಾಗುತ್ತಿಲ್ಲ? ದೇಶದಲ್ಲಿ ಕರ್ನಾಟಕದಲ್ಲೇ ಹೆಚ್ಚು ಹುದ್ದೆ ಖಾಲಿ ಇರುವುದು ಚಿಂತನಾರ್ಹ ಸಂಗತಿ. ಸರ್ಕಾರ ತಕ್ಷಣ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಬೇಕು. ಅದರಲ್ಲೂ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡಬೇಕು.
| ಸುನೀಲ್ ಕುಲಕರ್ಣಿ
ಅಧ್ಯಕ್ಷ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ವೇದಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net