

ಬೆಂಗಳೂರು: ಖ್ಯಾತ ಕೊಳಲು ವಾದಕ ಮತ್ತು ಸಂಗೀತ ನಿರ್ದೇಶಕ ಪ್ರವೀಣ್ ಗೋಡ್ಖಿಂಡಿ ಸದ್ದಿಲ್ಲದೆ ಒಂದು ಹೊಸ ಸಂಶೋಧನೆ ಮಾಡಿದ್ದಾರೆ. ದಿವ್ಯ ಬಾನ್ಸುರಿ ಹೆಸರಿನ ಹೊಸದೊಂದು ಬಾನ್ಸುರಿಯನ್ನು ಅವರು ತಯಾರಿಸಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇತ್ತೀಚೆಗೆ ಗೋಕುಲಾಷ್ಟಮಿ ಅಂಗವಾಗಿ ಅದರ ಮೊದಲ ಫೋಟೋ ಬಿಡುಗಡೆಯಾಗಿದೆ. ಇಷ್ಟಕ್ಕೂ ಈ ದಿವ್ಯ ಬಾನ್ಸುರಿಯ ವಿಶೇಷತೆ ಏನು? ಇದು ಭಾರತದ ಮೊದಲ ವಿದ್ಯುದೀಕರಿಸಲಾಗಿರುವ ಮತ್ತು ಹೊಳೆಯುವ ಬಾನ್ಸುರಿ ಎನ್ನುತ್ತಾರೆ ಪ್ರವೀಣ್ ಗೋಡ್ಖಿಂಡಿ.
‘ಇದುವರೆಗೂ ಕಾರ್ಯಕ್ರಮಗಳಲ್ಲಿ ಕೊಳಲು ನುಡಿಸುವಾಗ ಬೇರೆ ಮೈಕ್ ಉಪಯೋಗಿಸಬೇಕಿತ್ತು. ಉಸಿರಿನ ವಾದ್ಯವಾದ್ದರಿಂದ ಜೋರಾಗಿ ನುಡಿಸಬೇಕಿತ್ತು. ಕೊಳಲಿನ ಒಳಗೇ ಮೈಕ್ ಹಾಕುವ ಹಾಗಾದರೆ, ಹೆಚ್ಚು ಉಸಿರು ಹಾಕದೆ, ಸಾಫ್ಟ್ ಆಗಿ ನುಡಿಸಿದರೂ, ಅದು ದೊಡ್ಡ ಮಟ್ಟದಲ್ಲಿ ಹೊರಹೊಮ್ಮುವ ಹಾಗೆ ಯಾಕೆ ಮಾಡಬಾರದು ಎಂದೆನಿಸಿತು. ಈ ನಿಟ್ಟಿನಲ್ಲಿ ನನ್ನ ಶಿಷ್ಯ ಗುರುಪ್ರಸಾದ್ ಹೆಗಡೆ ಜತೆಗೆ ಸೇರಿ ಈ ಕೊಳಲು ಡಿಸೈನ್ ಮಾಡುವುದರಲ್ಲಿ ತೊಡಗಿಸಿಕೊಂಡೆ. ಬಿದಿರನ ಕೊಳಲಿನಲ್ಲಿ ಒಂದು ಕಡೆ ಮುಚ್ಚಿರುವುದರಿಂದ ಮೈಕ್ ಹಾಕಿ ಪ್ರಯತ್ನ ಮಾಡಿದೆವಾದರೂ, ಅದು ಸರಿ ಹೋಗಲಿಲ್ಲ. ಕೊನೆಗೆ ಅಕ್ರಿಲಿಕ್ನಲ್ಲಿ ಕೊಳಲು ಮಾಡಿದಾಗ ಮೈಕ್ ಅಳವಡಿಸುವುದಕ್ಕೆ ಅವಕಾಶ ಸಿಕ್ಕಿತು. ಅದರ ಜತೆಗೆ, ಯಾಕೆ ಲೈಟ್ ಹಾಕಬಾರದು ಎಂಬ ಯೋಚನೆ ಬಂತು. ಬೇರೆಬೇರೆ ಎಲ್ಇಡಿ ಬಲ್ಬ್ಗಳನ್ನು ಹಾಕಿ, ಬಣ್ಣಗಳು ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ’ ಎನ್ನುತ್ತಾರೆ. ಈ ಬಾನ್ಸುರಿಯ ಟೆಸ್ಟಿಂಗ್ ಮುಗಿಯುತ್ತಾ ಬಂದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.