

ಎನ್.ಎಲ್. ಶಿವಮಾದು
ಬೆಂಗಳೂರು: ಸಮಾಜಕಲ್ಯಾಣ ಇಲಾಖೆಯ ವಿದ್ಯಾರ್ಥಿವೇತನ ಬಳಸಿಕೊಂಡು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಲ್ಲಿ ಬೆಂಗಳೂರಿಗರೇ ಮುಂದಿದ್ದು, ಯೋಜನೆ ಬಗ್ಗೆ ಜಾಗೃತಿ ಇಲ್ಲದ ಪರಿಣಾಮ ಗ್ರಾಮೀಣ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಲು ವರ್ಷಕ್ಕೆ ಎರಡು ಬಾರಿ ವಿಶೇಷ ಅಭಿಯಾನ ಕೈಗೊಳ್ಳಲು ಸಮಾಜ ಕಲ್ಯಾಣ ಇಲಾಖೆ ನಿರ್ಧರಿಸಿದೆ.
ಪ್ರಸ್ತುತ ಯೋಜನೆ ಸದ್ಬಳಕೆಯಲ್ಲಿ ರಾಜಧಾನಿ ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳು ಹಿಂದುಳಿದಿವೆ. ವಿದ್ಯಾರ್ಥಿಗಳು ಹಿಂದುಳಿದಿರುವ ಜತೆಗೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂಬ ಅಂಶ ಸಮಾಜಕಲ್ಯಾಣ ಇಲಾಖೆಯ ನೀಡಿರುವ ದತ್ತಾಂಶದಿಂದ ತಿಳಿದುಬಂದಿದೆ.
ಕಳೆದ ಮೂರು ವರ್ಷಗಳಲ್ಲಿ (2019-22) ಒಟ್ಟಾರೆ 163 ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಿದ್ದಾರೆ. ಈ ಪೈಕಿ 94 ಮಂದಿ ಬೆಂಗಳೂರಿನವರೇ ಆಗಿದ್ದಾರೆ. ಮೈಸೂರು-14 ಮತ್ತು ಬೆಳಗಾವಿಯಲ್ಲಿ 10 ಮಂದಿ ಇದ್ದು, ಉಳಿದ ಜಿಲ್ಲೆಗಳಲ್ಲಿ ಒಂದಂಕಿಗೆ ಸೀಮಿತವಾಗಿವೆ. ಬಾಗಲಕೋಟೆ, ಚಿತ್ರದುರ್ಗ, ಗದಗ, ಹಾವೇರಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಯಾವೊಬ್ಬ ವಿದ್ಯಾರ್ಥಿಗಳು ಕೂಡ ಈ ಸೌಲಭ್ಯ ಬಳಸಿಕೊಂಡಿಲ್ಲ.
ಟಾಪ್ 5 ರಾಷ್ಟ್ರಗಳು, 51 ಕೋಟಿ ರೂ: ವಿದ್ಯಾರ್ಥಿಗಳು ವಿದೇಶಿ ವ್ಯಾಸಂಗಕ್ಕೆ ಆಯ್ಕೆ ಮಾಡಿಕೊಂಡಿರುವ ರಾಷ್ಟ್ರಗಳಲ್ಲಿ ಮೊದಲ ಎರಡು ಆದ್ಯತೆ ಅಮೆರಿಕ ಮತ್ತು ಇಂಗ್ಲೆಂಡ್ ಆಗಿದೆ. ನಂತರ ಆಸ್ಟ್ರೇಲಿಯಾ, ಜರ್ಮನಿ ಮತ್ತು ಇಟಲಿಯಾಗಿದೆ. ಅದೇ ರೀತಿ 2019ರಲ್ಲಿ 23 ಕೋಟಿ ರೂ., 2020ರಲ್ಲಿ 10 ಕೋಟಿ ರೂ. ಮತ್ತು 2021-22ರಲ್ಲಿ 18 ಕೋಟಿ ರೂ. ಅನುದಾನ ನೀಡಲಾಗಿದೆ.
ಇಂಜಿನಿಯರಿಂಗ್ ಫೇವರಿಟ್: ಬಹುತೇಕರಿಗೆ ಇಂಜಿನಿಯರಿಂಗ್ ಕೋರ್ಸ್ ಫೇವರಿಟ್ ಆಗಿದೆ. 163ರಲ್ಲಿ 103 ಮಂದಿ ಇಂಜಿನಿಯರಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. 28 ಮಂದಿ ಮ್ಯಾನೇಜ್ವೆುಂಟ್, 21 ಮಂದಿ ಮೂಲ ವಿಜ್ಞಾನ ಮತ್ತು ಅನ್ವಯಿಕ ವಿಜ್ಞಾನ, ಒಬ್ಬ ವಿದ್ಯಾರ್ಥಿ ಕೃಷಿ ವಿಜ್ಞಾನ ಆಯ್ಕೆ ಮಾಡಿಕೊಂಡಿದ್ದಾನೆ.
ಸಿಗದ ಸಮರ್ಪಕ ಮಾಹಿತಿ: ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿಯೇ ಇರುವುದರಿಂದ ವಿದ್ಯಾರ್ಥಿಗಳು ಲಭ್ಯವಾಗುವ ಯೋಜನೆಗಳ ಮಾಹಿತಿ ಪಡೆದುಕೊಳ್ಳಲು ಕಚೇರಿಯನ್ನು ಸಂರ್ಪಸುತ್ತಿದ್ದಾರೆ. ಆಲ್ಲದೆ, ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳಿಗೆ ಮಾಹಿತಿ ದೊರೆತು ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಉಳಿದ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ಮಾಹಿತಿ ದೊರೆಯದಿರುವುದರಿಂದ ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಗ್ರಾಮೀಣ ವಿದ್ಯಾರ್ಥಿಗಳು ಬೆಂಗಳೂರಿಗೇ ಬರಲು ಹಿಂದೇಟು ಹಾಕುತ್ತಾರೆ. ಇನ್ನು ವಿದೇಶಕ್ಕೆ ತೆರಳುವುದು ಅಷ್ಟೊಂದು ಸುಲಭವಲ್ಲ ಎನ್ನುತ್ತಾರೆ.
ಎರಡು ಅವಧಿಯಲ್ಲಿ ಜಾಗೃತಿ ಅಭಿಯಾನ
ಪ್ರಸಕ್ತ ವರ್ಷದಿಂದ ಎರಡು ಅವಧಿಯಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲು ನಿರ್ಧರಿಸಲಾಗಿದೆ, ಎಲ್ಲ ಶಾಲಾ- ಕಾಲೇಜುಗಳಲ್ಲಿ ಅಭಿಯಾನ ಕೈಗೊಂಡು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುವುದು. ಈ ಸಂಬಂಧ ಸದ್ಯದಲ್ಲಿಯೇ ಸೂಚನೆ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಡಾ.ಕೆ. ರಾಕೇಶ್ಕುಮಾರ್ ತಿಳಿಸಿದ್ದಾರೆ.
ಇಲಾಖೆ ಯೋಜನೆಯನ್ನು ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ತಲುಪದಿರುವುದು ತಿಳಿದುಬಂದಿದೆ. ಇದೇ ಡಿಸೆಂಬರ್ನಿಂದ ವರ್ಷದಲ್ಲಿ 2 ಬಾರಿ ವಿಶೇಷ ಅಭಿಯಾನ ಕೈಗೊಳ್ಳಲು ನಿರ್ಧರಿಸಲಾಗಿದೆ.
| ಡಾ. ಕೆ. ರಾಕೇಶ್ಕುಮಾರ್
ಸಮಾಜ ಕಲ್ಯಾಣ ಇಲಾಖೆ ಆಯುಕ್ತ