'ಸೆಕ್ಸ್​ಪರ್ಟ್'​ ಇನ್ನಿಲ್ಲ: ಇವರಿದ್ದಾಗ ಸಿಕ್ಕಿತ್ತು ಅದೆಷ್ಟೋ ಮಂದಿಗೆ ಸಾಂತ್ವನ-ಸಮಾಧಾನ...

Untitled-1
Published on

ಮುಂಬೈ: ಯಾರಿಂದಲೂ ಸಿಗದ ಸಮಾಧಾನ-ಸಾಂತ್ವನ ಇವರಿದ್ದಾಗ ಅದೆಷ್ಟೋ ಮಂದಿಗೆ ಸಿಕ್ಕಿತ್ತು. ಯಾರಲ್ಲೂ ಹೇಳಲಾಗದ, ಕೇಳಲಾಗದ ಪ್ರಶ್ನೆಗಳಿಗೆ ಇವರಿಂದ ಸಮರ್ಪಕ-ಸಮಂಜಸ ಉತ್ತರ ಸಿಗುತ್ತಿತ್ತು. ಅದೆಷ್ಟೋ ಮಂದಿಯ ವಿಶ್ವಾಸ ಗಳಿಸಿದ್ದ, ಅದೆಷ್ಟೋ ಜನರಲ್ಲಿ ವಿಶ್ವಾಸ ಮೂಡಿಸಿದ್ದ ಇವರು ಖ್ಯಾತ ಸೆಕ್ಸ್​ಪರ್ಟ್. 'ಆಸ್ಕ್​ ದಿ ಸೆಕ್ಸ್​ಪರ್ಟ್​' ಎನ್ನುತ್ತಿದ್ದ ಇವರಲ್ಲಿ ಏನನ್ನೂ ಕೇಳಿದರೂ ಅದಕ್ಕೊಂದು ಪರಿಹಾರ ಸಿಗುತ್ತಿತ್ತು. ಆದರೆ ಇನ್ನಿವರಲ್ಲಿ ಯಾರೂ ಏನನ್ನೂ ಕೇಳುವಂತಿಲ್ಲ. ಏಕೆಂದರೆ ಸೆಕ್ಸ್​ಪರ್ಟ್​ ಇನ್ನಿಲ್ಲ.

ಹೌದು.. 'ಸೆಕ್ಸ್​ಪರ್ಟ್​' ಎಂದೇ ಖ್ಯಾತರಾಗಿದ್ದ ಡಾ. ಮಹಿಂದರ್ ವತ್ಸ (96) ಸೋಮವಾರ ನಿಧನರಾದರು. ಸ್ತ್ರೀ-ಪುರುಷರೆನ್ನದೆ ಎಲ್ಲರಿಗೂ ಮುಕ್ತವಾಗಿ ಲೈಂಗಿಕ ಸಮಸ್ಯೆಗಳಿಗೆ, ಗೊಂದಲಗಳಿಗೆ ಉತ್ತರ ನೀಡುತ್ತಿದ್ದ ಇವರು ಇಂದು ಮುಂಬೈನಲ್ಲಿ ಕೊನೆಯುಸಿರೆಳೆದರು. ಇವರು ಆಂಗ್ಲ ಪತ್ರಿಕೆಯೊಂದರಲ್ಲಿ 'ಆಸ್ಕ್​ ದಿ ಸೆಕ್ಸ್​ಪರ್ಟ್​' ಎಂಬ ಅಂಕಣದ ಮೂಲಕ ಹೀಗೆ 15 ವರ್ಷಗಳ ಕಾಲ ಜನರಿಗೆ ಉತ್ತರ-ಉಪಾಯ ಹೇಳಿದ್ದರು. ಸೆಕ್ಸ್​ ಬಗ್ಗೆ ಮಾತನಾಡುವುದೇ ಮುಜುಗರ ಅಥವಾ ಅಪರಾಧ ಎಂಬಂತಿದ್ದ ಸಮಯದಲ್ಲೇ ಇವರು ಅದರ ಬಗ್ಗೆ ಮುಕ್ತವಾಗಿ ಮಾತನಾಡುವಂಥ ವಾತಾವರಣ ಕಲ್ಪಿಸಿದ್ದಲ್ಲದೆ, ಲೈಂಗಿಕ ವಿಷಯಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದರು.

ಮಿಲಿಟರಿ ವೈದ್ಯರೊಬ್ಬರ ಪುತ್ರರಾಗಿದ್ದ ಇವರು ಸುಮಾರು ನಾಲ್ಕು ದಶಕಗಳ ಕಾಲ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರಾಗಿ ಕಾರ್ಯನಿರ್ವಹಿಸಿದ್ದರು. ಭಾರತದ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಷನ್​ನ ಸಲಹಾಗಾರರಾಗಿಯೂ ಕೆಲಸ ಮಾಡಿದ್ದ ಇವರು, ಲೈಂಗಿಕ ಆಪ್ತಸಮಾಲೋಚನೆ ಹಾಗೂ ಶಿಕ್ಷಣ ಕಾರ್ಯಕ್ರಮಕ್ಕೆ ಒತ್ತು ನೀಡಿದ್ದರು. ಇವರಿಂದಾಗಿಯೇ ಈ ಸಂಸ್ಥೆ 1974ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಲೈಂಗಿಕ ಶಿಕ್ಷಣ ಹಾಗೂ ಸಮಾಲೋಚನಾ ಕೇಂದ್ರವನ್ನು ಸ್ಥಾಪಿಸಿತು. ಲೈಂಗಿಕ ಸಮಾಲೋಚನೆ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಲೆಂದೇ ಇವರು 1980ರಲ್ಲಿ ತಮ್ಮ ಪ್ರ್ಯಾಕ್ಟಿಸ್​ ತೊರೆದಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net