ಮುಡಾದಲ್ಲಿ ನೂರಕ್ಕೂ ಹೆಚ್ಚು ಕಡತ ನಾಪತ್ತೆ?

muda
Published on

ವಿಜಯವಾಣಿ ಸುದ್ದಿಜಾಲ ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಒಳಸುಳಿಗಳು ಬೆಳಕಿಗೆ ಬರಲಾರಂಭಿಸಿದೆ. 50:50ರ ಅನá-ಪಾತದ ಸೈಟ್ ಹಂಚಿಕೆಗೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಕಡತಗಳು ನಾಪತ್ತೆ ಆಗಿದೆ ಎಂಬ ವಿಚಾರ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಮುಡಾ ಭ್ರಷ್ಟಾಚಾರದ ತನಿಖೆ ಚುರುಕುಗೊಳಿಸಿರುವ ಅಧಿಕಾರಿಗಳು ಪ್ರಾಧಿಕಾರದಲ್ಲಿನ 50:50ರ ಅನá-ಪಾತ, ಬದಲಿ ನಿವೇಶನ ಹಂಚಿಕೆ ಸಂಬಂಧಿಸಿದ ಕಡತ ಪರಿಶೀಲಿಸುತ್ತಿದ್ದಾರೆ. ಪ್ರಾಧಿಕಾರದ ಬಹುತೇಕ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿದಾಗ ನಿವೇಶನ ಹಂಚಿಕೆಗೆ ಸಂಬಂಧಿಸಿದ ಅನೇಕ ಕಡತಗಳು ಹಾಗೂ ಕೆಲ ಕಡತಗಳಲ್ಲಿನ ಪ್ರಮುಖ ಪುಟಗಳೇ ನಾಪತ್ತೆ ಆಗಿರುವ ಮಾತು ಕೇಳಿಬರುತ್ತಿದೆ. ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ನಿರ್ವಣವಾಗುವ ಬಡಾವಣೆಗಳಿಗೆ ಜಮೀನು ನೀಡಿದ ರೈತರಿಗೆ ಈ ಮೊದಲು 60:40ರ ಅನುಪಾತದಲ್ಲಿ ನಿವೇಶನ ನೀಡಲಾಗುತ್ತಿತ್ತು.

ಸಿಎಂ ಆಪ್ತರದ್ದೂ ಸೇರಿ 20 ನಿವೇಶನ ಹಂಚಿಕೆಗೆ ತಡೆ: ಸಿಎಂ ಸಿದ್ದರಾಮಯ್ಯ ಆಪ್ತ ಹಿನಕಲ್ ಪಾಪಣ್ಣ ಎಂಬುವವರಿಂದ ಹಿನಕಲ್ ಗ್ರಾಮದ ಸರ್ವೆ ನಂ.211ರಲ್ಲಿ 3.05 ಎಕರೆ ಜಮೀನನ್ನು 1981ರಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಬಳಿಕ 1984ರಲ್ಲಿ ಕೈ ಬಿಡಲಾಗಿತ್ತು. ಆದರೆ ಬರೋಬ್ಬರಿ 40 ವರ್ಷದ ಬಳಿಕ ಅಂದರೆ 2024ರ ಜೂ.12 ರಂದು 36,753 ಚದರ ಅಡಿಗೆ ಪರಿಹಾರ ಕೊಡಲಾಗಿದೆ. ಇದಕ್ಕಾಗಿ ವಿಜಯನಗರದ ವಿವಿಧ ಬಡಾವಣೆಗಳಲ್ಲಿ 20 ನಿವೇಶನ ಹಂಚಿಕೆ ಮಾಡಿ ಆದೇಶಿಸಲಾಗಿತ್ತು. ಇದೀಗ ಕಳೆದ ತಿಂಗಳ ಆದೇಶ ತಡೆ ಹಿಡಿಯಲಾಗಿದೆ ಎಂದು ಮುಡಾ ಅಧ್ಯಕ್ಷ ಕೆ. ಮರೀಗೌಡ ತಿಳಿಸಿದ್ದಾರೆ.

ಗವರ್ನರ್, ಸಿಜೆಗೆ ಪತ್ರ

ಮೈಸೂರು: ಮುಡಾ ಹಗರಣ ಸಂಬಂಧ ಶಾಸಕ ಟಿ.ಎಸ್.ಶ್ರೀವತ್ಸ ರಾಜ್ಯಪಾಲರು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ. ಕೂಡಲೇ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ. ಮುಡಾದಲ್ಲಿ ಸಾವಿರಾರು ಕೋಟಿ ರೂ. ಹಗರಣ ನಡೆದಿದೆ ಎಂದು ಸಾರ್ವಜನಿಕರಿಂದ ಅನಾಮಧೇಯ ಪತ್ರಗಳು ಮತ್ತು ದಾಖಲೆ ಬಂದಿವೆ. ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆ ಅಪರ ಕಾರ್ಯರ್ದಗೆ ಪತ್ರ ಬರೆದಿದ್ದೆ. ಆದರೆ ಅವರಿಂದ ನ್ಯಾಯ ನಿರೀಕ್ಷಣೆ ಸಾಧ್ಯವಿಲ್ಲದ ಕಾರಣ ನಿಮಗೆ ಪತ್ರ ಬರೆದಿದ್ದು, ತಾವು ಕೂಲಂಕಷವಾಗಿ ಪ್ರಕರಣವನ್ನು ಪರಿಶೀಲಿಸಿ ನ್ಯಾಯವನ್ನು ಎತ್ತ ಹಿಡಿಯಬೇಕಾಗಿ ಮನವಿ ಮಾಡುವೆ. ಜತೆಗೆ ನನ್ನ ಬಳಿ ಇರುವ ಅಗತ್ಯ ಮಾಹಿತಿ ಮತ್ತು ದಾಖಲೆಯನ್ನು ತನಿಖೆಗೆ ಒದಗಿಸಲು ಸಿದ್ಧನಿದ್ದೇನೆಂದು ಶ್ರೀವತ್ಸ ಹೇಳಿದ್ದಾರೆ.

ಭೂಸ್ವಾಧೀನವಾದ ಜಮೀನಿಗೆ ಹಣದ ರೂಪದಲ್ಲಿ ಪರಿಹಾರ ನೀಡದಿದ್ದಲ್ಲಿ, ಸಂತ್ರಸ್ತರಿಗೆ ಒಟ್ಟು ಅಭಿವೃದ್ಧಿಪಡಿಸಲಾದ ನಿವೇಶನಗಳ ಪೈಕಿ ಶೇ. 40 ನಿವೇಶನ ಸಿಗುತ್ತಿತ್ತು. 2020ರಲ್ಲಿ ಬಿಜೆಪಿ ಸರ್ಕಾರ ಅದನ್ನು 50:50ರ ಅನುಪಾತಕ್ಕೆ ಮರುನಿಗದಿಪಡಿಸಿ, ಸಂತ್ರಸ್ತರಿಗೆ ಒಟ್ಟು ನಿವೇಶನದ ಶೇ.50ರಷ್ಟನ್ನು ಬಿಟ್ಟುಕೊಡುವ ನಿಯಮ ರೂಪಿಸಿತು.

2020ರ ನಂತರದಲ್ಲಿ ಹಂಚಿಕೆಯಾಗುವ ನಿವೇಶನಗಳಿಗೆ ಮಾತ್ರ ನಿಯಮ ಇರಬೇಕಿತ್ತು. ಆದರೆ, ಮುಡಾ ಅಧಿಕಾರಿಗಳು 30-40 ವರ್ಷದ ಹಿಂದೆ ಜಮೀನು ಕೊಟ್ಟವರಿಗೂ ಅದೇ ನಿಯಮದ ಅಡಿ ನಿವೇಶನ ಹಂಚಿಕೆ ಮಾಡಿ ಲಾಭ ಮಾಡಿಕೊಂಡಿದ್ದಾರೆ.

ಕಡ್ಲಿಪುರಿಯಂತೆ ಹಂಚಿಕೆ! : ಮುಡಾದಿಂದ ಒಂದೇ ದಿನ ನೂರಕ್ಕೂ ಹೆಚ್ಚು ನಿವೇಶನ ಹಂಚಿಕೆ ಆಗಿದೆ ಎಂಬ ಮಾತು ಕೇಳಿಬಂದಿದೆ. ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲನೆ ಮಾಡುವಾಗ ಈ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಮುಖ್ಯವಾಗಿ ಪ್ರಭಾವಿಗಳಿಗೆ ಪ್ರತಿಷ್ಠಿತ ಬಡಾವಣೆಗಳಲ್ಲಿ ಬದಲಿ ನಿವೇಶನ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಅಕ್ರಮದ ಘಾಟು ಬಡಿದಿರುವುದಾಗಿ ಹೇಳಲಾಗುತ್ತಿದೆ. 50:50 ಅನುಪಾತದ ಆದೇಶಕ್ಕೆ ಸಂಬಂಧಿಸಿದಂತೆ ಅಧಿಕೃತ ದಾಖಲಾತಿಗಳೇ ಇಲ್ಲ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net