ಮುತ್ತಿನ ನಗರಿಯಲ್ಲಿ ಮತ್ತೆ ಭಾರಿ ಮಳೆಯಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ..!

HYD
Published on

ಹೈದರಾಬಾದ್​: ಮೂರ್ನಾಲ್ಕು ದಿನಗಳ ಹಿಂದಷ್ಟೇ ಸುರಿದಿದ್ದ ಭಾರಿ ಮಳೆಗೆ ಪ್ರವಾಹ ಸೃಷ್ಟಿಯಾಗಿ ರಸ್ತೆಗಳೆಲ್ಲ ನದಿಯಂತಾಗಿ, ಕಾರುಗಳು ನೀರಲ್ಲಿ ಮುಳುಗಿ, ಕಟ್ಟಡಗಳೆಲ್ಲ ಸಂಪೂರ್ಣ ಜಲಾವೃತಗೊಂಡಿದ್ದಲ್ಲದೆ, 50 ಕ್ಕೂ ಹೆಚ್ಚು ಜನರ ಸಾವಿನಿಂದ ಕಂಗಾಲಾಗಿದ್ದ ಹೈದರಾಬಾದ್​ ಜನತೆಗೆ ಶನಿವಾರ ಸಂಜೆ ಮತ್ತೆ ಸುರಿದ ಭಾರಿ ಮಳೆ ಗಾಯದ ಮೇಲೆ ಬರೆ ಎಳೆದಿದೆ.

ಮುತ್ತಿನ ನಗರಿಯ ಕೆಲವು ಏರಿಯಾಗಳು ಮತ್ತೆ 150 ಮಿ. ಮೀಟರ್​ಗೂ ಅಧಿಕ ಮಳೆಯನ್ನು ಸುರಿದಿದೆ. ಮಂಗಳವಾರವಷ್ಟೇ ಬರೋಬ್ಬರಿ 190 ಮಿ. ಮೀ ಮಳೆಯಾಗಿತ್ತು. ನಿನ್ನೆ ಸುರಿದ ಮಳೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ರಸ್ತೆಗಳಲ್ಲಿ ಸುಮಾರು 2 ಅಡಿ ನೀರು ತುಂಬಿರುವುದು ಕಂಡುಬಂದಿದೆ.

ಗ್ರೇಟರ್​ ಹೈದರಾಬಾದ್​ ಮುನ್ಸಿಪಲ್​ ಕಾರ್ಪೋರೇಷನ್​ (ಜಿಎಚ್​ಎಂಸಿ) ನ ವಿಪತ್ತು ಪ್ರತಿಕ್ರಿಯೆ ಪಡೆ (ಡಿಆರ್​ಎಫ್​)ನಗರದಲ್ಲಿ ತುಂಬಿರುವ ಮಳೆ ನೀರನ್ನು ತೆರವುಗೊಳಿಸಲು ನಿರಂತರ ಶ್ರಮಿಸುತ್ತಿದೆ. ಸಾಧ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಜಿಎಚ್​ಎಂಸಿಯ ಜಾಗರೂಕತೆ ಮತ್ತು ವಿಪತ್ತು ನಿರ್ವಹಣೆಯ ನಿರ್ದೇಶಕರಾದ ವಿಶ್ವಜಿತ್​ ಕಂಪತಿ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ.

ಭಾನುವಾರವೂ ಕೂಡ ಹೈದರಾಬಾದಿನ ಕೆಲವು ಏರಿಯಾಗಳಲ್ಲಿ ಗುಡುಗು-ಮಿಂಚು ಸಹಿತ ಸಾಧಾರಣ ಮಳೆಯಾಗಲಿದ್ದು, ಒಂದು ಅಥವಾ ಎರಡು ಪ್ರದೇಶಗಳಲ್ಲಿ ತೀವ್ರ ಮಳೆಯಾಗಲಿದೆ ಎಂದು ಹೈದರಾಬಾದ್​ ಹವಮಾನ ಇಲಾಖೆ ಎಚ್ಚರಿಸಿದೆ. ಇನ್ನು ಭಾರಿ ಮಳೆಗೆ ಫಲಕ್ನುಮಾದ ರೈಲ್ವೆ ಸೇತುವೆ ಮೇಲೆ ದೊಡ್ಡ ರಂಧ್ರವೊಂದು ಕಾಣಿಸಿಕೊಂಡಿದ್ದು, ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.

ಗುರುವಾರವಷ್ಟೇ ಮಾಹಿತಿ ನೀಡಿದ್ದ ತೆಲಂಗಾಣ ಸರ್ಕಾರ, ಭಾರಿ ಮಳೆಯಿಂದ ಉಂಟಾದ ಪ್ರವಾಹ ಮತ್ತು ಹಾನಿಯಿಂದ ಸುಮಾರು 50 ಮಂದಿ ಜೀವ ಕಳೆದುಕೊಂಡಿದ್ದಾರೆಂದು ತಿಳಿಸಿದೆ. ಸುಮಾರು 6000 ಕೋಟಿ ರೂ. ನಷ್ಟವಾಗಿದೆ ಎಂದು ಸರ್ಕಾರ ಅಂದಾಜಿಸಿದೆ.

ಮಳೆ ಹಾನಿ ಪ್ರದೇಶಗಳಲ್ಲಿ ಅಧಿಕಾರಿಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಕೆಲವು ಪ್ರದೇಶಗಳು ಈಗಲೂ ಜಲಾವೃತಗೊಂಡಿದ್ದು, ನೀರಿನಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗೆ ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ತಂಡ ಮತ್ತು ಸೇನೆಯನ್ನು ನಿಯೋಜಿಸಲಾಗಿದೆ.

ಇನ್ನು ತೆಲಂಗಾಣ ಮಾತ್ರವಲ್ಲದೆ, ಪಕ್ಕದ ಆಂಧ್ರ ಪ್ರದೇಶ ಮತ್ತು ಕರ್ನಾಟಕವೂ ಸಹ ಭಾರಿ ಮಳೆಗೆ ತೀವ್ರ ಸಂಕಷ್ಟ ಎದುರಿಸಿವೆ. ಶನಿವಾರ ಮಾಧ್ಯಮ ಉದ್ದೇಶಿಸಿ ಮಾತನಾಡಿದ ತೆಲಂಗಾಣ ಸಚಿವ ಕೆ.ಟಿ. ರಾಮ ರಾವ್​, ಪ್ರವಾಹ ಪೀಡಿತ ಕುಟುಂಬಗಳಿಗೆ ಆಹಾರ ಕಿಟ್​ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರತಿ ಆಹಾರ ಕಿಟ್​ಗೆ 2,800 ವೆಚ್ಚವಾಗಲಿದ್ದು, ಒಂದು ಕಿಟ್​ನಲ್ಲಿ ಅಗತ್ಯ ಪಡಿತರ ಮತ್ತು ಮೂರು ಬ್ಲ್ಯಾಂಕೆಟ್ಸ್​ ಇರಲಿವೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net