ರೈತರ ಹೋರಾಟಕ್ಕೆ ನೈತಿಕ ಬೆಂಬಲ; ಪಂಜಾಬ್, ಹರಿಯಾಣ, ದೆಹಲಿಯಲ್ಲಿ ತೀವ್ರ

Farmers Protest
Published on

ನವದೆಹಲಿ: ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಮಂಗಳವಾರದ ಭಾರತ ಬಂದ್​ಗೆ ದೇಶದಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರತಿಭಟನೆಗಳು ಶಾಂತಿಯುತವಾಗಿ ನಡೆದವು. ಪಂಜಾಬ್, ಹರಿಯಾಣ ಮತ್ತು ದೆಹಲಿಯಲ್ಲಿ ಬಂದ್ ಕಾವು ತೀವ್ರವಾಗಿತ್ತು. ವಿಪಕ್ಷ ಆಡಳಿತವಿರುವ ಕೇರಳ, ಪಶ್ಚಿಮ ಬಂಗಾಳ, ಒಡಿಶಾದಲ್ಲಿಯೂ ಬಂದ್​ಗೆ ಉತ್ತಮ ಸ್ಪಂದನೆ ದೊರಕಿತು. ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳ ಆಡಳಿತದ ರಾಜ್ಯಗಳಲ್ಲಿ ನೀರಸವಾಗಿತ್ತು. ಆದರೆ, ಹರಿಯಾಣ ಇದಕ್ಕೆ ಅಪವಾದವಾಗಿತ್ತು.

ಕೃಷಿಗೆ ಸಂಬಂಧಿಸಿದ ಮೂರೂ ಹೊಸ ಕಾನೂನುಗಳನ್ನು ಸಂಪೂರ್ಣವಾಗಿ ವಾಪಸ್ ಪಡೆಯಬೇಕೆಂದು ಅನ್ನದಾತರ ಆಕ್ರೋಶ ಭುಗಿಲೆದ್ದಿದ್ದರಿಂದ ದೇಶದ ಹಲವು ಭಾಗದಲ್ಲಿ ಜನಜೀವನ ಸ್ತಬ್ಧಗೊಂಡಿತು. ಸಾರಿಗೆ ಸಂಚಾರ ಅಸ್ತವ್ಯಸ್ತವಾಗಿದ್ದು ಅಂಗಡಿ ಮುಂಗಟ್ಟು, ವಾಣಿಜ್ಯ ಸಂಕೀರ್ಣಗಳು ಮುಚ್ಚಿದ್ದವು. ಕಾಂಗ್ರೆಸ್, ಆಪ್, ಡಿಎಂಕೆ, ಟಿಆರ್​ಎಸ್, ಕಮ್ಯುನಿಸ್ಟ್ ಪಕ್ಷಗಳು, ಟಿಎಂಸಿ, ಎನ್​ಸಿಪಿ, ಎನ್​ಸಿ ಸೇರಿ 20ಕ್ಕೂ ಹೆಚ್ಚು ಪಕ್ಷಗಳು ಹಾಗೂ 10ಕ್ಕೂ ಹೆಚ್ಚು ಕಾರ್ವಿುಕ ಸಂಘಟನೆಗಳು, ವಿವಿಧ ಸಂಘ-ಸಂಸ್ಥೆಗಳು ಬಂದ್​ಗೆ ಬೆಂಬಲ ಘೋಷಿಸಿದ್ದವು.

ಕೇಜ್ರಿವಾಲ್​ಗೆ ಗೃಹಬಂಧನ?

ಪ್ರತಿಭಟನೆ ನಿರತ ರೈತರನ್ನು ಸೋಮವಾರ ಭೇಟಿ ಮಾಡಿದಾಗಿನಿಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ರನ್ನು ದೆಹಲಿ ಪೊಲೀಸರು ಗೃಹ ಬಂಧನಕ್ಕೆ ಒಳಪಡಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (ಆಪ್) ಆರೋಪಿಸಿದೆ. ಆದರೆ ದೆಹಲಿ ಪೊಲೀಸರು ಅದನ್ನು ತಳ್ಳಿ ಹಾಕಿದ್ದಾರೆ. ಕೇಜ್ರಿವಾಲ್ ವಿವಾಹವೊಂದರಲ್ಲಿ ಪಾಲ್ಗೊಂಡ ವಿಡಿಯೋಅನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಸಿಎಂ ಭೇಟಿಗೆ ಪಕ್ಷದ ಕಾರ್ಯಕರ್ತರಿಗೂ ಅವಕಾಶ ನೀಡಿಲ್ಲ ಎಂದು ಆಪ್ ವಕ್ತಾರ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಧ್ಯಾಹ್ನದ ಹೊತ್ತಿಗೆ ಕೇಜ್ರಿವಾಲ್ ಮನೆಯಿಂದ ಹೊರ ಬಂದರು. ಪ್ರತಿಭಟನೆ ನಿರತ ರೈತರನ್ನು ಬಂಧಿಸಿಡಲು ಕ್ರೀಡಾಂಗಣಗಳನ್ನು ಬಳಸಲು ದೆಹಲಿ ಸರ್ಕಾರ ಅನುಮತಿ ನಿರಾಕರಿಸಿದ್ದರಿಂದ ಕೇಂದ್ರ ಸರ್ಕಾರ ಕೇಜ್ರಿವಾಲ್​ರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂದು ಸಿಸೋಡಿಯಾ ಆಪಾದಿಸಿದರು. ನಂತರ ಅವರು ಕೇಜ್ರಿವಾಲ್​ರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಪಕ್ಷದ ಕಾರ್ಯಕರ್ತರೊಂದಿಗೆ ರಸ್ತೆಯಲ್ಲಿ ಧರಣಿ ನಡೆಸಿದರು.

ನಾನು ಕೇಂದ್ರ ಕೃಷಿ ಸಚಿವನಾಗಿದ್ದಾಗ ಎಪಿಎಂಸಿ ಕಾಯ್ದೆಯಲ್ಲಿ ಸುಧಾರಣೆ ತರುವ ಬಗ್ಗೆ ಸಿಎಂಗಳಿಗೆ ಪತ್ರ ಬರೆದಿದ್ದೆ. ಈಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾಯ್ದೆಗಳಲ್ಲಿನ ಅಂಶ ಅದರಲ್ಲಿ ಇರಲಿಲ್ಲ.| ಶರದ್ ಪವಾರ್ ಎನ್​ಸಿಪಿ ಮುಖ್ಯಸ್ಥ25 ರಾಜ್ಯಗಳ 10 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತಿಭಟನೆ ಶಾಂತಿಯುತವಾಗಿ ನಡೆದಿದ್ದು, ಬಂದ್ ಯಶಸ್ವಿಯಾಗಿದೆ.| ಯೋಗೇಂದ್ರ ಯಾದವ್ ಸ್ವರಾಜ್ ಇಂಡಿಯಾ ಮುಖಂಡ

ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ, ಕನ್ನಡಿಗ ಬಿ.ವಿ. ಶ್ರೀನಿವಾಸ್ ನೇತೃತ್ವದಲ್ಲಿ ಯುವ ಕಾಂಗ್ರೆಸ್ಸಿಗರು ದೆಹಲಿಯ ಸಿಂಘು ಗಡಿಯಲ್ಲಿ ನಿತ್ಯ 20 ಸಾವಿರ ಮಂದಿಗೆ ಊಟ ನೀಡುತ್ತಿದ್ದಾರೆ.
  • ಬಂದ್ ವ್ಯಾಪಕ: ಪಂಜಾಬ್, ಹರಿಯಾಣ, ದೆಹಲಿ, ಕೇರಳ, ಪಶ್ಚಿಮ ಬಂಗಾಳ, ಛತ್ತೀಸ್​ಗಢ, ಒಡಿಶಾ.
  • ಮಿಶ್ರ ಪ್ರತಿಕ್ರಿಯೆ: ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ.
  • ನೀರಸ: ತಮಿಳುನಾಡು, ಗೋವಾ, ಅಂಡಮಾನ್, ನಿಕೋಬಾರ್, ಹಿಮಾಚಲ ಪ್ರದೇಶ, ಗುಜರಾತ್, ತ್ರಿಪುರಾ, ಅರುಣಾಚಲ ಪ್ರದೇಶ.
  • ರೈಲು ತಡೆ: ಪಶ್ಚಿಮ ಬಂಗಾಳ, ಒಡಿಶಾ ಮತ್ತು ಬಿಹಾರದ ಹಲವೆಡೆ ಪ್ರತಿಭಟನೆಕಾರರಿಂದ ರೈಲು ತಡೆ.
  • ದೆಹಲಿ-ಮೇರಠ್ ಹೆದ್ದಾರಿಯಲ್ಲಿ ಕೆಲವು ತಾಸು ರಸ್ತೆ ತಡೆ.
  • ದೆಹಲಿಯ ಟಿಕ್ರಿ ಗಡಿ ಸೇರಿ ಕೆಲವು ಕಡೆ ರಕ್ತದಾನ ಶಿಬಿರ ಮತ್ತು ಕವಿಗೋಷ್ಠಿ ಏರ್ಪಡಿಸುವ ಮೂಲಕ ಚಳವಳಿ.
  • ದೇಶದ ಬಹುತೇಕ ಭಾಗಗಳಲ್ಲಿ ಬಂದ್​ನಿಂದ ಯಾವುದೇ ಪರಿಣಾಮ ಉಂಟಾಗಲಿಲ್ಲ ಎಂದು ಅಖಿಲ ಭಾರತ ವರ್ತಕರ ಮಹಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್​ವಾಲ್ ಹೇಳಿದ್ದಾರೆ.
  • ರೈತರ ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಪುಣೆಯಲ್ಲಿ ಮಂಗಳವಾರ ಉಪವಾಸ ಸತ್ಯಾಗ್ರಹ ನಡೆಸಿದರು.
  • ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಭೀಮ್ ಆರ್ವಿು ಅಧ್ಯಕ್ಷ ಚಂದ್ರಶೇಖರ್ ಆಜಾದ್​ರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು.
  • ಗಾಜಿಯಾಬಾದ್ ಕಡೆ ಸಾಗುತ್ತಿದ್ದ ಭೀಮ್ ಆರ್ವಿು ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರಿಂದ ಮೂವರಿಗೆ ಗಾಯ.
  • ಬಂದ್​ನಿಂದಾಗಿ ಸಾರಿಗೆ ಉದ್ಯಮವು ಕಾರ್ಯಾಚರಣೆ ಸ್ಥಗಿತಗೊಳಿಸಿದ ಕಾರಣ ಸುಮಾರು -2 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಖಿಲ ಭಾರತ ಮೋಟಾರ್ ಸಾರಿಗೆ ಕಾಂಗ್ರೆಸ್ (ಎಐಎಂಟಿಸಿ) ತಿಳಿಸಿದೆ.

ತಾಸಿಗೆ 2 ಸಾವಿರ ಚಪಾತಿ ತಯಾರಿಸುವ ಮಷಿನ್

ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನಾಸ್ಥಳದಲ್ಲಿ ಚಪಾತಿ ತಯಾರಿಸುವ ಯಂತ್ರ ಗಮನಸೆಳೆದಿದೆ. ಆಹಾರ ಸಾಮಗ್ರಿ, ಪಾತ್ರೆ, ಒಲೆಗಳೊಂದಿಗೆ ಬೀಡು ಬೀಟ್ಟಿರುವ ರೈತರು, ರಸ್ತೆ ಮಧ್ಯದಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡುತ್ತ ಹೋರಾಟವನ್ನು ನಿರಂತರವಾಗಿಟ್ಟಿದ್ದಾರೆ. ಪ್ರತಿಭಟನಾಕಾರರ ಸಂಖ್ಯೆ ಹೆಚ್ಚುತ್ತಿರುವುದರಿಂದ ಅವರೆಲ್ಲರಿಗೂ ಆಹಾರ ಪೂರೈಸಲು ಚಪಾತಿ ತಯಾರಿಸುವ ಯಂತ್ರವನ್ನು ಸ್ಥಾಪಿಸಿದ್ದಾರೆ. ಇದರ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರತಿ ತಾಸಿಗೆ ಸುಮಾರು 2 ಸಾವಿರ ಚಪಾತಿಗಳನ್ನು ಈ ಮಷಿನ್ ತಯಾರಿಸಿಕೊಡುತ್ತದೆ. ಈ ಯಂತ್ರ ಸಾಮಾನ್ಯವಾಗಿ ಗುರುದ್ವಾರಗಳಲ್ಲಿ, ಹೆಚ್ಚು ಜನರಿಗೆ ಆಹಾರ ತಯಾರಿಸುವ ಸ್ಥಳ, ದೇವಸ್ಥಾನಗಳಲ್ಲಿ ಬಳಸಲಾಗುತ್ತದೆ. ಈಗ ಪ್ರತಿಭಟನಾನಿರತ ಮಹಿಳೆಯರಿಗೆ ದೊಡ್ಡ ಪ್ರಮಾಣದಲ್ಲಿ ಆಹಾರ ತಯಾರಿಸುವಲ್ಲಿ ಚಪಾತಿ ಮಷಿನ್ ಸಹಾಯವಾಗಿದೆ. ಇದರ ಜತೆಗೆ ಖಾಲ್ಸಾ ಏಡ್ ಫೌಂಡೇಷನ್ ಚಹಾ, ತಿಂಡಿ, ಕೀರು, ನೀರಿನ ಬಾಟಲ್​ಗಳನ್ನು ರೈತರಿಗೆ ವಿತರಿಸುತ್ತಿದೆ. ಇದರ ಜತೆಗೆ ಅಲ್ಲಲ್ಲಿ ಸುಮಾರು 20 ಮೊಬೈಲ್ ಶೌಚಗೃಹಗಳನ್ನು ಸ್ಥಾಪಿಸಲಾಗಿದೆ.

ರೈತರೊಂದಿಗೆ ಅಮಿತ್ ಷಾ ಮಹತ್ವದ ಸಭೆ

ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಯ್ದ ರೈತ ಮುಖಂಡರ ಜತೆ ಮಂಗಳವಾರ ರಾತ್ರಿ ಮಹತ್ವದ ಸಭೆ ನಡೆಸಿದ್ದಾರೆ. ಭಾರತ್ ಕಿಸಾನ್ ಸಭಾದ ಹನ್ನನ್ ಮೊಲ್ಲಾ ಮತ್ತು ಭಾರತೀಯ ಕಿಸಾನ್ ಯುನಿಯನ್ (ಬಿಕೆಯು)ನ ರಾಕೇಶ್ ಸೇರಿ ಸಭೆಯಲ್ಲಿ ಒಟ್ಟು 13 ರೈತ ಮುಖಂಡರು ಭಾಗಿಯಾಗಿದ್ದು, ಅದರಲ್ಲಿ ಪಂಜಾಬ್​ನ 8 ಹಾಗೂ ದೇಶದ ವಿವಿಧ ಭಾಗದ ಐವರು ಮುಖಂಡರಿದ್ದರು. ಜತೆಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡ ಭಾಗಿಯಾಗಿದ್ದು, ರಾತ್ರಿ 8 ಗಂಟೆಯ ಬಳಿಕ ಸಭೆ ಪ್ರಾರಂಭವಾಗಿತ್ತು. ಸಭೆಯನ್ನು ಮೊದಲು ಅಮಿತ್ ಷಾ ನಿವಾಸದಲ್ಲಿ ನಡೆಸಲು ತೀರ್ವನಿಸಲಾಗಿತ್ತಾದರೂ, ಮಾಧ್ಯಮಗಳನ್ನು ನಿರ್ಬಂಧಿಸುವ ಸಲುವಾಗಿ ಅವರ ನಿವಾಸದಿಂದ ಕೆಲ ಕಿ.ಮೀ ದೂರವಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಅತಿಥಿ ಗೃಹಕ್ಕೆ ಸ್ಥಳಾಂತರಿಸಲಾಯಿತು.

ರೈತ ಸಂಘಟನೆಗಳ ಮುಖಂಡರು ಹಾಗೂ ಕೇಂದ್ರ ಸಚಿವರ ಮಧ್ಯೆ ಬುಧವಾರ 6ನೇ ಸುತ್ತಿನ ಸಭೆ ನಡೆಯಲಿದೆ. ಈ ಹಿಂದಿನ ಐದು ಸಭೆಗಳಲ್ಲಿ ಸಮಸ್ಯೆಗಳನ್ನು ಗುರುತಿಸಲು ಸಮಿತಿ ರಚನೆ, ನೂತನ ಕಾಯ್ದೆಗಳಲ್ಲಿ ಕೆಲ ನಿಯಮಗಳನ್ನು ಕೈಬಿಡುವುದು ಸೇರಿದಂತೆ ಕೇಂದ್ರ ಸರ್ಕಾರ ನೀಡಿದ್ದ ಹಲವು ಪ್ರಸ್ತಾಪಗಳನ್ನು ರೈತ ಮುಖಂಡರು ತಿರಸ್ಕರಿಸಿದ್ದರು. ನೂತನ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಪಟ್ಟು ಹಿಡಿದಿರುವ ರೈತರು ತಮ್ಮ ಬೇಡಿಕೆಗೆ ಹೌದು ಅಥವಾ ಇಲ್ಲ ಎಂಬ ಉತ್ತರವನ್ನು ಮಾತ್ರ ನೀಡಿ ಎಂದು ಕೇಳುತ್ತಿದ್ದಾರೆ. ಕಳೆದ 13 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬುರಾರಿ ಪ್ರದೇಶದ ಸಂತ ನಿರಂಕಾರಿ ಸಮಾಗಮ ಮೈದಾನಕ್ಕೆ ಪ್ರತಿಭಟನೆ ಸ್ಥಳಾಂತರಿಸಲು ಸರ್ಕಾರದ ಪ್ರಸ್ತಾಪವನ್ನೂ ರೈತರು ನಿರಾಕರಿಸಿದ್ದು, ರಾಮಲೀಲಾ ಮೈದಾನಕ್ಕೆ ಪ್ರತಿಭಟನೆಯನ್ನು ಸ್ಥಳಾಂತರಿಸುವ ಬೇಡಿಕೆ ಇರಿಸಿದ್ದಾರೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net