

ದಾವಣಗೆರೆ: ವಿದ್ಯಾರ್ಥಿಗಳಿಗೆ ಸಂಸ್ಕಾರ ಹಾಗೂ ಮಾನವೀಯ ಗುಣ ಬೆಳೆಸುವ ನೈತಿಕ ಶಿಕ್ಷಣ ನೀಡುವ ಅಗತ್ಯ ಇದೆ ಎಂದು ಸಂಸದರ ಆಪ್ತ ಕಾರ್ಯದರ್ಶಿ ಸಿ.ಎಚ್. ದೇವರಾಜ್ ಹೇಳಿದರು.
ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಗುರುವಾರ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ, ವಿದ್ಯಾರ್ಥಿ-ಉಪನ್ಯಾಸಕರ ವೇದಿಕೆ ಉದ್ಘಾಟನೆ, ಎಂಬಿ ಟ್ಯಾಲೆಂಟ್ ಹಂಟ್‌ನ ಪ್ರತಿಭೆಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಎಂದರೆ ಕೇವಲ ಪದವಿ ಪಡೆಯುವುದು ಮಾತ್ರವಲ್ಲ. ಮಾನವೀಯ ಮೌಲ್ಯಗಳನ್ನು ತಿಳಿಸುವಂತಹ ಸಂಗತಿ ಹಾಗೂ ನೀತಿಗಳು ಸಹ ಶಿಕ್ಷಣ. ವಿದ್ಯಾರ್ಥಿಗಳು ಮೆಡಿಕಲ್, ಇಂಜಿನಿಯರಿಂಗ್ ಯಾವುದೇ ಶಿಕ್ಷಣ ಪಡೆದರೂ ಮಾನವೀಯ ಮೌಲ್ಯಗಳನ್ನು ಮರೆಯಬಾರದು ಎಂದು ತಿಳಿಸಿದರು.
ಮನುಷ್ಯ ಗಳಿಸಿದ ಸಂಪತ್ತು ಖರ್ಚು ಮಾಡಿದಷ್ಟು ಕರಗುತ್ತದೆ. ಆದರೆ, ವಿದ್ಯೆ ವ್ಯಯ ಮಾಡಿದಷ್ಟು ವೃದ್ಧಿಯಾಗುತ್ತದೆ. ಪುಸ್ತಕಗಳು ಕೇವಲ ಅಲಂಕಾರಿಕ ವಸ್ತುಗಳಲ್ಲ, ಅವುಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.
ಮಾಗನೂರು ಬಸಪ್ಪ ಅವರಂತಹ ಸಾಧಕರ ಜೀವನ ಚರಿತ್ರೆಯನ್ನು ಓದಬೇಕು. ನಾಯಕತ್ವ ಗುಣ ಬೆಳೆಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಸಂಗಮೇಶ್ವರ ಗೌಡರು ಮಾತನಾಡಿ, ಎಲ್ಲ ವಿದ್ಯಾರ್ಥಿಗಳಲ್ಲೂ ಪ್ರತಿಭೆ ಇರುತ್ತದೆ, ಪರಿಶ್ರಮದಿಂದ ಮಾತ್ರ ಬೆಳಗಲು ಸಾಧ್ಯ.
ಡಾಕ್ಟರ್, ಇಂಜಿನಿಯರ್ ಆಗುವ ಜತೆಗೆ ಐ.ಎ.ಎಸ್ ಮತ್ತು ಐ.ಪಿ.ಎಸ್ ಅಧಿಕಾರಿಗಳಾಗಿಯೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕಾಲೇಜಿನ ನಿರ್ದೇಶಕ ಡಾ.ಜಿ.ಎನ್.ಎಚ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಮಯದ ಮಹತ್ವ ಅರಿತು ಶ್ರದ್ಧೆಯಿಂದ ಅಭ್ಯಾಸದಲ್ಲಿ ತೊಡಗಬೇಕು ಎಂದು ಹೇಳಿದರು.
ಪ್ರಾಚಾರ್ಯ ಡಾ.ಎಸ್. ಪ್ರಸಾದ್ ಬಂಗೇರ ಉಪನ್ಯಾಸಕರ ಸಮಿತಿಗಳನ್ನು ಪರಿಚಯಿಸಿದರು. ಮಮತಾ ರೊನಾಲ್ಡ್ ವಿದ್ಯಾರ್ಥಿ ಪ್ರತಿನಿಧಿಗಳನ್ನು ಪರಿಚಯಿಸಿದರು.
ಸುರೇಖಾ ಜಗದೀಶ್ ಪ್ರಮಾಣವಚನ ಬೋಧಿಸಿದರು. ಸಿ. ಪುಷ್ಪಲತಾ ಸ್ವಾಗತಿಸಿದರು, ಆಕಾಶ್ ರಾಜೀವ್ ಗಾಣಿಗರ್ ವಂದಿಸಿದರು. ಎಂ.ಕೆ. ಶ್ರೀದೇವಿ ನಿರೂಪಿಸಿದರು.