ಸೆಪ್ಟಂಬರ್ 3ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆ ಬೀಳುವ ಸಾಧ್ಯತೆ, ಗಾಳಿ ಸಹಿತ ಪ್ರವಾಹ ಭೀತಿ

r1
Published on

ಕರುನಾಡ ಜನತೆಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಮುಂದಿನ 4 ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿದುಬಂದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ ತತ್ತರಿಸುತ್ತಿದೆ.


ಜುಲೈ ತಿಂಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಅಬ್ಬರಿಸಿದ್ದ ಮಳೆರಾಯ ಆಗಸ್ಟ್ ತಿಂಗಳಲ್ಲಿ ಪತ್ತೆಯೇ ಇಲ್ಲದಂತಾಗಿದ್ದ. ಇನ್ನು ಕೆಲವೆಡೆ ಜಿಟಿ ಜಿಟಿ ಮಳೆಯೂ ಕಂಡು ಬಂದಿತ್ತು.


ಭಾರತೀಯ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದ್ದು, ಅದರ ಮುನ್ಸೂಚನೆ ಪ್ರಕಾರ, ಸೆಪ್ಟಂಬರ್ 3ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಭಾರೀ ಮಳೆ ಜೊತೆ ಗಾಳಿಯ ತೀವ್ರತೆ ಹೆಚ್ಚಿರಲಿದೆ ಎಂದು ಹೇಳಿದೆ.


ಆಗಸ್ಟ್ 31ರಿಂದ ನಾಲ್ಕು ದಿನಗಳ ಕಾಲ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ಕೊಪ್ಪಳ, ಗದಗ, ಬೀದರ್, ಯಾದಗಿರಿ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಮಳೆ ಬೀಳುವ ನಿರೀಕ್ಷೆಯ ಸುದ್ದಿ ತಿಳಿದ ರೈತರು ಸಂತಸದಲ್ಲಿದ್ದಾರೆ.


ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಐದು ದಿನಗಳ ಕಾಲ ಮಳೆಯಾಗಲಿದೆ. ಇದರ ಜೊತೆಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು, ಮಂಡ್ಯ, ರಾಮನಗರ, ಮೈಸೂರು, ಹಾಸನ, ಚಿಕ್ಕಮಗಳೂರು, ದಾವಣಗೆರೆ, ವಿಜಯನಗರ, ಬಳ್ಳಾರಿ, ತುಮಕೂರು, ಶಿವಮೊಗ್ಗ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮಳೆ ಬೀಳುವ ಸಂಭವವಿದೆ ಎಂದು ಇಲಾಖೆ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net