

ಬೆಂಗಳೂರು: ರಾಜ್ಯದಲ್ಲಿ ದುರ್ಬಲಗೊಂಡಿದ್ದ ಮುಂಗಾರು ಸೋಮವಾರದಿಂದ ಚುರುಕುಗೊಳ್ಳಲಿದೆ.
ಭಾನುವಾರ ಬೆಳಗ್ಗೆಯಿಂದಲೇ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿದೆ. ಕರಾವಳಿ ಸೇರಿ ರಾಜ್ಯದ ವಿವಿಧೆಡೆ ವರ್ಷಧಾರೆಯಾಗಿದ್ದು, ಇದರಿಂದಾಗಿ ಮುಂಗಾರು ಚುರುಕುಗೊಳ್ಳುವ ಲಕ್ಷಣ ಗೋಚರಿಸಿದೆ.
ಬಿಪರ್‌ಜಾಯ್ ಚಂಡಮಾರುತವು ತೇವಾಂಶ ಭರಿತ ಮೋಡಗಳನ್ನು ಸೆಳೆದುಕೊಂಡ ಪರಿಣಾಮ ರಾಜ್ಯದಲ್ಲಿ ವಾಡಿಕೆಗಿಂತ ತಡವಾಗಿ ಪ್ರವೇಶಿಸಿದ್ದ ಮಾರುತಗಳು ದುರ್ಬಲಗೊಂಡಿತ್ತು. ಗುಜರಾತ್‌ನ ಕರಾವಳಿ ಭಾಗಕ್ಕೆ ಅಪ್ಪಳಿಸಿದ್ದ ಸೈಕ್ಲೋನ್, ಈಗ ದುರ್ಬಲಗೊಂಡ ಪರಿಣಾಮ ನಿಧಾನವಾಗಿ ಮುಂಗಾರು ಮಾರುತಗಳು ಪ್ರಬಲಗೊಳ್ಳುತ್ತಿವೆ.
ಇದನ್ನೂ ಓದಿ: ಅವರಿಬ್ಬರ ನಡುವೆ ಅವಳು ಬಂದಾಗ.. ಕಿತ್ತಾಟ-ರಂಪಾಟ; ಕೊನೆಗೆ ಮೂವರನ್ನೂ ವಶಕ್ಕೆ ಪಡೆದ ಪೊಲೀಸ್
ಹೀಗಾಗಿ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಮೈಸೂರು ಹಾಗೂ ಚಾಮರಾಜನಗರ ಸೇರಿ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಏಳು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ವಾರದಲ್ಲಿ ಉತ್ತರ ಕರ್ನಾಟಕ ಭಾಗದಾದ್ಯಂತ ಮಾರುತಗಳು ಆವರಿಸಲಿವೆ.
ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಬೀಳುವ ಮುಂಗಾರು ಪೂರ್ವ ಮಳೆಯಿಂದಾಗಿ ಜಮೀನು ಹದಗೊಳಿಸಿ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಂಡಿದ್ದರು. ಕೆಲವಡೆ ಮೆಕ್ಕೆಜೋಳ ಸೇರಿ ಇತರೆ ಬೀಜಗಳನ್ನು ಬಿತ್ತಲಾಗಿದೆ. ಆದರೆ, ವಾಡಿಕೆಗಿಂತ ತಡವಾಗಿ ಆಗಮನಿಸಿದ್ದ ಮುಂಗಾರು ಆರಂಭದಲ್ಲೇ ಕೈಕೊಟ್ಟಿತ್ತು. ಇದರಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿತ್ತು.
ಜತೆಗೆ ದಿನದಿಂದ ದಿನಕ್ಕೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರು ಬರಿದಾಗುತ್ತಿದೆ. ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನಿರೀಕ್ಷೆ ತಕ್ಕಂತೆ ಮಳೆ ಸುರಿದರೆ, ಕುಂಠಿತಗೊಂಡಿದ್ದ ಕೃಷಿ ಚಟುವಟಿಕೆಗಳು ಬಿರುಸುಗೊಳ್ಳಲಿದ್ದು ಜಲಾಶಯಗಳು ತುಂಬಲಿವೆ.
ಇದನ್ನೂ ಓದಿ: ತುಂಡುಡುಗೆ ಧರಿಸಿ ಬರುವ ಭಕ್ತರಿಗೆ ಇನ್ನು ಮುಂದೆ ಈ ದೇವಸ್ಥಾನ ಪ್ರವೇಶಕ್ಕೆ ಅವಕಾಶವಿಲ್ಲ!
ಮಳೆ ಕುಂಠಿತ:
ಆರಂಭದಲ್ಲಿ ಮಾನ್ಸೂನ್ ದುರ್ಬಲಗೊಂಡ ಪರಿಣಾಮ ಪ್ರಸಕ್ತ ತಿಂಗಳಲ್ಲಿ ಮಳೆ ಕೊರತೆಯಾಗಿದೆ. ಜೂ 1ರಿಂದ ಜೂ 18ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 109 ಮಿಮೀ ಮಳೆ ಆಗಬೇಕಿತ್ತು. ಆದರೆ 32 ಮಿ.ಮೀ. ಮಳೆಯಾಗಿದ್ದು, ಶೇ.71 ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಮೂರ‌್ನಾಲ್ಕು ವರ್ಷಗಳಿಂದ ಮಳೆ ದಿನಗಳು ಬದಲಾಗುತ್ತಿರುವ ಕಾರಣ 2020 ಮತ್ತು 2022ರ ಜೂನ್‌ನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿದೆ. 2021ರ ಜೂನ್‌ನಲ್ಲಿ ಮಾತ್ರ ವಾಡಿಕೆಯಷ್ಟೇ ಮಳೆ ಸುರಿದಿದೆ.
ಆದರೆ, ಮೂರು ವರ್ಷಗಳಿಂದಲೂ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕುಂಠಿತವಾಗುತ್ತಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ತುಸು ಹೆಚ್ಚು ಮಳೆ ಸುರಿದಿದ್ದರೂ ಸರಿಯಾಗಿ ಸಮಯಕ್ಕೆ ಮಳೆ ಬರದಂತಾಗಿದೆ.(ಏಜೆನ್ಸೀಸ್)