

ತಿರುವನಂತಪುರ: ನೈಋತ್ಯ ಮಾನ್ಸೂನ್ ಮಾರುತಗಳು ಇಂದು ಕೇರಳ ತಲುಪಿವೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಜೂನ್ ತಿಂಗಳ ಆರಂಭದಲ್ಲೇ ಆಗಮಿಸಬೇಕಾದ ಮಾನ್ಸೂನ್ ಈ ಬಾರಿ ಕೊಂಚ ತಡವಾಗಿ ಆಗಮಿಸಿದೆ.
ನೈಋತ್ಯ ಮಾನ್ಸೂನ್ ಆಗಮನ ಹಿನ್ನೆಲೆಯಲ್ಲಿ ಕೇರಳದ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ. ಮಾನ್ಸೂನ್ ಮಾರುತಗಳು ರಾಜ್ಯಕ್ಕೆ ಅಪ್ಪಳಿಸುತ್ತಿದ್ದಂತೆ ಹವಾಮಾನ ಇಲಾಖೆ ಮಳೆಯ ಎಚ್ಚರಿಕೆ ನೀಡಿದೆ. ಮಾನ್ಸೂನ್ ಮಾರುತಗಳು ನಿನ್ನೆಯೇ ಲಕ್ಷದ್ವೀಪ ತಲುಪಿದ್ದವು. ಆದರೆ, ಸೈಕ್ಲೋನ್ ಬಿಪರ್ಜೋಯ್ ಕಾರಣದಿಂದಾಗಿ ಬೇಗ ಕೇರಳ ತಲುಪಲು ಸಾಧ್ಯವಾಗಲಿಲ್ಲ.
ಅರೆಬಿಯನ್ ಸಮುದ್ರದಿಂದ ಸೈಕ್ಲೋನ್ ಉತ್ತರಕ್ಕೆ ಚಲಿಸಿದರಿಂದ ಮಾನ್ಸೂನ್ ಮಾರುತಗಳು ಕೇರಳ ಕಡೆಗೆ ಚಲಿಸಲು ಆರಂಭಿಸಿತು. ಅಂತಿಮವಾಗಿ ಇಂದು ಕೇರಳಕ್ಕೆ ಮಾನ್ಸೂನ್ ಆಗಮಿಸಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ತಮಿಳುನಾಡು ಮತ್ತು ಕರ್ನಾಟಕಕ್ಕೂ ಮಾನ್ಸೂನ್ ಮಾರುಗಳು ಅಪ್ಪಳಿಸಲಿವೆ. ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಇದೆ.
ಮುಂದಿನ ಕೆಲವೇ ಗಂಟೆಗಳಲ್ಲಿ ಕೇರಳ ರಾಜ್ಯದ ಒಂಟಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೊಯಿಕ್ಕೋಡ್ಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ಮಲಪ್ಪುರಂ ಮತ್ತು ಕಣ್ಣೂರಿಗೆ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸೋಮವಾರದವರೆಗೂ ಯೆಲ್ಲೋ ಅಲರ್ಟ್ ವಿವಿಧ ಜಿಲ್ಲೆಗಳಲ್ಲಿ ಮುಂದುವರಿಯಲಿದೆ.
ಜೂ. 9: ಕೊಯಿಕ್ಕೋಡ್, ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ಮಲಪ್ಪುರಂ ಮತ್ತು ಕಣ್ಣೂರು.
ಜೂ. 10: ಪಟ್ಟಣಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ಇಡುಕ್ಕಿ.
ಜೂ. 11: ಪಟ್ಟಣಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ಇಡುಕ್ಕಿ.
ಜೂ. 12: ಪಟ್ಟಣಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ಇಡುಕ್ಕಿ.