

ಬೆಂಗಳೂರು: ಸಚಿವ ಸಂಪುಟ ರಚನೆಯ ಬಳಿಕ ಇದೀಗ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿಗಳ ನೇಮಕಕ್ಕೆ ಕಸರತ್ತು ನಡೆಯುತ್ತಿದೆ. ಜಿಲ್ಲೆಗಳ ಜವಾಬ್ದಾರಿ ಯಾರ ಹೆಗಲಿಗೆ ಬೀಳಲಿದೆ? ಸಚಿವರುಗಳಿಗೆ ತವರು ಕ್ಷೇತ್ರದ ಜವಾಬ್ದಾರಿಯನ್ನೇ ನೀಡುತ್ತಾರಾ? ಅಥವಾ ಬದಲಾವಣೆ ಮಾಡುತ್ತಾರಾ? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಇದರ ನಡುವೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುಳಿವೊಂದನ್ನು ನೀಡಿದ್ದಾರೆ. ಅಲ್ಲದೆ, ಉಸ್ತುವಾರಿ ನೇಮಕದಲ್ಲೂ ಅವರ ಪ್ರಭಾವವೇ ಹೆಚ್ಚಿರಲಿದೆ ಎಂಬ ಸುಳಿವು ದೊರಕಿದೆ.
ಡಿಸಿಎಂ ಡಿಕೆಶಿ ಇಂದು ಬಿಎಂಟಿಸಿ ಬಸ್ನಲ್ಲಿ ಬೆಂಗಳೂರು ನಗರ ಪ್ರದಕ್ಷಿಣೆ ಹಾಕಿದರು. ಯಮಲೂರು, ದೊಮ್ಮಲೂರು, ಬೆಳಂದೂರು ಹಾಗೂ ಸರ್ಜಾಪುರ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಡಿಕೆಶಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒತ್ತುವರಿಯಾದ ರಾಜಕಾಲುವೆ ಸ್ಥಳಗಳಿಗೂ ಭೇಟಿ ನೀಡಿದರು. ಮುಂಗಾರು ಆರಂಭದ ಹಿನ್ನಲೆ ಡಿಕೆಶಿ ಭೇಟಿ ಮಹತ್ವ ಪಡೆದುಕೊಂಡಿದೆ.
ಸಿಟಿ ರೌಂಡ್ಸ್ ನಡುವೆಯೇ ಜಿಲ್ಲಾ ಉಸ್ತುವಾರಿ ನೇಮಕ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಡಿಕೆಶಿ, ಫೋನ್ ಮೂಲಕವೇ ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ. ಕೋಲಾರಕ್ಕೆ ರಾಮಲಿಂಗಾರೆಡ್ಡಿ, ಉಡುಪಿಗೆ ದಿನೇಶ್ ಗುಂಡೂರಾವ್, ಮಂಗಳೂರಿಗೆ ಕೃಷ್ಣ ಬೈರೇಗೌಡ ಹಾಗೂ ರಾಮನಗರಕ್ಕೆ ಬೈರತಿ ಸುರೇಶ್ ನೇಮಕ ಮಾಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಬೆಂಗಳೂರು ನಗರದ ಸಚಿವರುಗಳನ್ನು ಬೇರೆ ಜಿಲ್ಲೆಗಳ ಉಸ್ತುವಾರಿಯಗಳನ್ನಾಗಿ ನೇಮಿಸಲು ಸಿಎಂಗೆ ಡಿಕೆಶಿ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಕಾಂಗ್ರೆಸ್ ಹೈಕಮಾಂಡ್ ಜತೆ ನಿಕಟ ಸಂಬಂಧ ಹೊಂದಿರುವ ಡಿಕೆಶಿ ಆರಂಭದಿಂದಲೂ ಸರ್ಕಾರದ ಮೇಲೆ ತಮ್ಮ ಪ್ರಭಾವ ಬೀರುತ್ತಾ ಬರುತ್ತಿದ್ದಾರೆ. ಒಂದೇ ಒಂದು ಡಿಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದು, ಅದನ್ನು ಸಾಧಿಸಿದರು. ಬೆಂಗಳೂರು ನಗರ ಜವಾಬ್ದಾರಿಯನ್ನೂ ಪಡೆದುಕೊಂಡರು. ಸಚಿವ ಸಂಪುಟ ವಿಸ್ತರಣೆಯಲ್ಲೂ ತಮ್ಮ ಪ್ರಭಾವ ಬೀರಿದರು. ಇದೀಗ ಉಸ್ತುವಾರಿ ನೇಮಕ ವಿಚಾರಲ್ಲೂ ತಮ್ಮ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗುತ್ತಿದೆ. ಉಸ್ತುವಾರಿಗಳ ರುವಾರಿ ಆಗಲಿದ್ದಾರಾ ಡಿಕೆಶಿ? ಡಿಕೆಶಿ ಹೇಳಿದವರನ್ನೇ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗುತ್ತಾ? ಎಂಬ ಕುತೂಹಲ ಮೂಡಿದೆ. ಸಿಎಂಗೆ ಸಿಟಿ ರೌಂಡ್ಸ್ ನಡುವೆ ಉಸ್ತುವಾರಿಗಳ ನೇಮಕ ಸಲಹೆಗಳನ್ನು ನೀಡಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ. (ದಿಗ್ವಿಜಯ ನ್ಯೂಸ್)