ಮೇಲ್ಮನೆ ಹಣದ ಮೇಲಾಟ: ಚುನಾವಣೆ ವೆಚ್ಚಕ್ಕೆ ಮಿತಿ ಇಲ್ಲ; ಮದ್ಯ, ಆಮಿಷಗಳ ಸುರಿಮಳೆ

Front
Published on

| ವಿಲಾಸ ಮೇಲಗಿರಿ ಬೆಂಗಳೂರು

‘ಚಿಂತಕರ ಚಾವಡಿ’ ಎಂದೇ ಕರೆಯಲ್ಪಡುವ ವಿಧಾನ ಪರಿಷತ್ ಸೋತ ರಾಜಕಾರಣಿಗಳಿಗೆ ಆಶ್ರಯತಾಣವಾಗುತ್ತಿದೆ. ಸಾಹಿತಿಗಳು, ಚಿಂತಕರು, ಕಲಾವಿದರು, ಸಾಮಾಜಿಕ ಹೋರಾಟಗಾರರ ಕಲರವ ಇರಬೇಕಾದ ಮೇಲ್ಮನೆಯಲ್ಲಿ ಹಣಬಲ, ತೋಳ್ಬಲ, ಜಾತಿಬಲದ ಮೇಲಾಟ ನಡೆಯುತ್ತಿರುವುದು ಪ್ರಜ್ಞಾವಂತರನ್ನು ಕಳವಳಕ್ಕೀಡುಮಾಡಿದೆ.

ಕಳೆದ ಬಾರಿ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ 30-40 ಕೋಟಿ ರೂ.ವರೆಗೆ ಖರ್ಚು ಮಾಡಿದ್ದು ಗಂಭೀರ ಚರ್ಚೆಗೆ ಗ್ರಾಸವಾಗಿತ್ತು. ಜೂನ್ 13ರಂದು ನಡೆಯಲಿರುವ ನಡೆಯುತ್ತಿರುವ ಎರಡು ಶಿಕ್ಷಕರ ಹಾಗೂ ಎರಡು ಪದವೀಧರರ ಕ್ಷೇತ್ರದ ಚುನಾವಣೆಗಳೂ ಅದಕ್ಕಿಂತ ಭಿನ್ನವಾಗೇನೂ ಇಲ್ಲ. ಹಣ, ಹೆಂಡದ ಹೊಳೆ ಹರಿಯುತ್ತಿದೆ. ಆಮಿಷಗಳ ಸುರಿಮಳೆಯಾಗುತ್ತಿದೆ. ಡಿಜಿಟಲ್ ವ್ಯಾಲೆಟ್ ಮೂಲಕ ಹಣ ವರ್ಗಾವಣೆಯಾಗುತ್ತಿದೆ. ಹಳ್ಳಿಹಳ್ಳಿಗಳಲ್ಲೂ ಪದವೀಧರರು, ಶಿಕ್ಷಕರು ಚುನಾವಣಾ ಕಣವನ್ನು ರಂಗೇರಿಸಿದ್ದಾರೆ. ಅಭ್ಯರ್ಥಿಗೆ ಫೋನ್ ಮಾಡಿ ಹಣ, ಹೆಂಡ, ಗಿಫ್ಟ್​ಗಳನ್ನು ಕೇಳಿ ಪಡೆಯುವ ಶಿಕ್ಷಕರು/ಪದವೀಧರರಿಗೇನೂ ಕೊರತೆ ಇಲ್ಲ.

ವಿಧಾನಸಭೆ ಮೀರಿಸುವ ಚುನಾವಣೆ: ಇತ್ತೀಚಿನ ವರ್ಷಗಳಲ್ಲಿ ಮೇಲ್ಮನೆ ಚುನಾವಣೆ ಹಣಬಲವುಳ್ಳವರ ಮೇಲಾಟವಾಗುತ್ತಿದೆ. ರಾಜಕೀಯ ಪಕ್ಷಗಳಲ್ಲಿ ಕೂಡ 15-20 ಕೋಟಿ ರೂ. ಖರ್ಚು ಮಾಡುವ ಶಕ್ತಿ ಇದ್ದವರಿಗೆ ಮಾತ್ರ ಟಿಕೆಟ್ ನೀಡುವ ಪರಿಪಾಠ ಬೆಳೆದಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತವರು, ರಾಜ್ಯಸಭೆಯಲ್ಲಿ ಅವಕಾಶ ಸಿಗದವರು, ಕೇಂದ್ರದ ಮಾಜಿ ಮಂತ್ರಿಗಳು ಮೇಲ್ಮನೆ ಪ್ರವೇಶಿಸಲು ದುಂಬಾಲು ಬೀಳುತ್ತಾರೆ. ಹೀಗಾಗಿ ಮೇಲ್ಮನೆ ಈಗ ರಾಜಕಾರಣಿಗಳಿಗೆ ಒಳದಾರಿಯಲ್ಲಿ ಅಧಿಕಾರದ ಕೇಂದ್ರವಾಗಿ ಮಾರ್ಪಾಡಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ರಿಯಲ್ ಎಸ್ಟೇಟ್ ಕುಳಗಳು ಕೂಡ ಮೇಲ್ಮನೆಗೆ ಸುಲಭವಾಗಿ ಆಯ್ಕೆಯಾಗುತ್ತಿರುವುದು ಪ್ರಾಜ್ಞರ ಕಳವಳಕ್ಕೆ ಕಾರಣವಾಗಿದೆ.

ಕೋಟ್ಯಂತರ ರೂಪಾಯಿ ಖರ್ಚು: ಚುನಾವಣಾ ಆಯೋಗ ಮೇಲ್ಮನೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ವೆಚ್ಚ ಮಿತಿ ನಿಗದಿಪಡಿಸಿಲ್ಲ. ಲಕ್ಷಾಂತರ ಮತದಾರರನ್ನು ಹೊಂದಿರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳು ಮಾಡುವ ಖರ್ಚನ್ನು ಕೆಲವು ಸಾವಿರ ಸಂಖ್ಯೆಯಲ್ಲಿರುವ ಮೇಲ್ಮನೆ ಮತದಾರರಿಗೆ ವೆಚ್ಚ ಮಾಡಬೇಕಿದೆ.

ಡಿಜಿಟಲ್ ವ್ಯಾಲೆಟ್​ನಲ್ಲಿ ವರ್ಗಾವಣೆ: ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಮೂಲಕ ಮತದಾರರಿಗೆ ಡಿಜಿಟಲ್ ವ್ಯಾಲೆಟ್ ಬಳಸಿ 1000-2000 ರೂ.ಗಳವರೆಗೆ ಹಣ ವರ್ಗಾವಣೆ ಮಾಡುತ್ತಿದ್ದಾರೆ ಎಂದ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.

ನಾಲ್ಕು ಕ್ಷೇತ್ರಗಳಲ್ಲಿ ಚುನಾವಣೆ: ವಾಯವ್ಯ ಪದವೀಧರ ಕ್ಷೇತ್ರ, ವಾಯವ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರ ಹಾಗೂ ದಕ್ಷಿಣ ಪದವೀಧರರ ಕ್ಷೇತ್ರಗಳ ಚುನಾವಣೆ ನಡೆಯುತ್ತಿದ್ದು, ಹಣ, ಹೆಂಡದ ಹೊಳೆ ಹರಿಯುತ್ತಿದೆ. ನಿತ್ಯ ಪಾರ್ಟಿಗಳು ನಡೆಯುತ್ತಿವೆ. ಭರ್ಜರಿ ಗಿಫ್ಟ್ ಕೊಡಲಾಗುತ್ತದೆ. ಮೋಜು ಮಸ್ತಿಗೆ ಬರವಿಲ್ಲ. ಮತದಾರರ ಆಸೆಗೆ ಕೊನೆಯೇ ಇಲ್ಲ ಎಂಬ ಪರಿಸ್ಥಿತಿ ನಿರ್ವಣವಾಗಿದೆ.

ಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳು

  • ಪಶ್ಚಿಮ ಶಿಕ್ಷಕರ ಕ್ಷೇತ್ರ: ಧಾರವಾಡ, ಹಾವೇರಿ, ಗದಗ ಮತ್ತು ಉತ್ತರಕನ್ನಡ.
  • ವಾಯವ್ಯ ಶಿಕ್ಷಕರ ಕ್ಷೇತ್ರ : ವಿಜಯಪುರ, ಬಾಗಲಕೋಟೆ, ಬೆಳಗಾವಿ.
  • ದಕ್ಷಿಣ ಪದವೀಧರ ಕ್ಷೇತ್ರ: ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ.
  • ವಾಯವ್ಯ ಪದವೀಧರ ಕ್ಷೇತ್ರ: ವಿಜಯಪುರ, ಬಾಗಲಕೋಟೆ, ಬೆಳಗಾವಿ.

ಆಯೋಗದಿಂದ ವೀಕ್ಷಕರೂ ಇಲ್ಲ!: ದೂರದ ಊರುಗಳಿಂದ ಮತ ಚಲಾವಣೆಗೆ ಬರಲು ವಾಹನ ವ್ಯವಸ್ಥೆ ಮಾಡುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಕ್ರಮಕ್ಕೆ ಕಾಯ್ದೆಯಲ್ಲಿ ಅವಕಾಶವಿಲ್ಲದಿರುವುದರಿಂದ ಇದೆಲ್ಲ ಗೊತ್ತಿದ್ದೂ ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ. ಅಭ್ಯರ್ಥಿಗಳಿಗೆ ವೆಚ್ಚದ ಮಿತಿ ಇಲ್ಲದೇ ಇರುವುದರಿಂದ ವೆಚ್ಚ ವೀಕ್ಷಕರೂ ಇಲ್ಲ, ಚೆಕ್ ಪೋಸ್ಟ್ ತಪಾಸಣೆಯಂತೂ ಇಲ್ಲವೇ ಇಲ್ಲ!

ಸಾಮಾಜಿಕ ಜಾಲತಾಣ ಬಳಕೆ: ಕ್ಷೇತ್ರ ವ್ಯಾಪ್ತಿ ಹೆಚ್ಚಿರುವುದರಿಂದ ಹಾಗೂ ಮತದಾರರ ಸಂಖ್ಯೆ ಕಡಿಮೆ ಇರುವ ಕಾರಣ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ಬಹುತೇಕ ಸಾಮಾಜಿಕ ಜಾಲತಾಣವನ್ನೇ ಅವಲಂಬಿಸಿದ್ದಾರೆ. ಆಡಿಯೋ, ವೀಡಿಯೋ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.

ಯಾವ ಕ್ಷೇತ್ರದಲ್ಲಿ ಎಷ್ಟು ಅಭ್ಯರ್ಥಿಗಳು

ಪಶ್ಚಿಮ ಶಿಕ್ಷಕರ ಕ್ಷೇತ್ರ:(ಒಟ್ಟು ಅಭ್ಯರ್ಥಿಗಳು 7)

  • ಬಿಜೆಪಿ: ಬಸವರಾಜ ಹೊರಟ್ಟಿ
  • ಕಾಂಗ್ರೆಸ್: ಬಸವರಾಜ ಗುರಿಕಾರ
  • ಜೆಡಿಎಸ್: ಶ್ರೀಶೈಲ ಗಡದಿನ್ನಿ

ವಾಯವ್ಯ ಶಿಕ್ಷಕರ ಕ್ಷೇತ್ರ (ಒಟ್ಟು ಅಭ್ಯರ್ಥಿಗಳು 12)

  • ಬಿಜೆಪಿ: ಅರುಣ ಶಹಾಪೂರ
  • ಕಾಂಗ್ರೆಸ್: ಪ್ರಕಾಶ್ ಬಾಬಣ್ಣ ಹುಕ್ಕೇರಿ
  • ಜೆಡಿಎಸ್: ಚಂದ್ರಶೇಖರ ಲೋಣಿ

ವಾಯವ್ಯ ಪದವೀಧರ ಕ್ಷೇತ್ರ: (ಒಟ್ಟು ಅಭ್ಯರ್ಥಿಗಳು 11)

  • ಬಿಜೆಪಿ: ನಿರಾಣಿ ಹಣಮಂತ ರುದ್ರಪ್ಪ
  • ಕಾಂಗ್ರೆಸ್: ಸುನೀಲ್ ಅಣ್ಣಪ್ಪ ಸಂಕ

ದಕ್ಷಿಣ ಶಿಕ್ಷಕರ ಕ್ಷೇತ್ರ: (ಒಟ್ಟು ಅಭ್ಯರ್ಥಿಗಳು 20)

  • ಬಿಜೆಪಿ: ಮೈ.ವಿ.ರವಿಶಂಕರ್
  • ಕಾಂಗ್ರೆಸ್: ಮಧು ಮಾದೇಗೌಡ
  • ಜೆಡಿಎಸ್: ಎಚ್.ಕೆ.ರಾಮು

ವೆಬ್ ಕಾಸ್ಟಿಂಗ್/ವೀಡಿಯೋ ಚಿತ್ರೀಕರಣ: ಆಯಾ ಕ್ಷೇತ್ರದ ಸ್ಥಿತಿ-ಗತಿ, ಚುನಾವಣೆ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ ಆಯುಕ್ತರು ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳನ್ನು ನಿರ್ಧರಿಸುತ್ತಾರೆ. ಈ ಮತಗಟ್ಟೆಗಳ ಮೇಲೆ ವಿಶೇಷ ನಿಗಾ ಇರಿಸಲಾಗುತ್ತದೆ. ಅತಿ ಸೂಕ್ಷ್ಮ ಮತಗಟ್ಟೆಗಳನ್ನು ವೆಬ್ ಕಾಸ್ಟಿಂಗ್ ಮೂಲಕ ನಿರ್ವಹಿಸಲಾಗುತ್ತದೆ. ಸೂಕ್ಷ್ಮ ಮತ್ತಿತರ ಮತಗಟ್ಟೆಗಳಲ್ಲಿ ಮತದಾನದ ವೀಡಿಯೋ ಚಿತ್ರೀಕರಣ ನಡೆಯಲಿದೆ.

ಮತದಾನದ ಸಮಯ ವಿಸ್ತರಣೆ: ಜೂ.13 ರಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ. ಈ ಮೊದಲು ಬೆಳಗ್ಗೆ 8 ರಿಂದ ಸಂಜೆ 4ರ ವರೆಗೆ ಸಮಯ ನಿಗದಿಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net