

ಸಿಂಗಾಪುರ: ಕರೊನಾ ಲಾಕ್ಡೌನ್ ಓಪನ್ ಆದರೆ ಸಾಕು ಎಂದು ಕಾದು ಕುಳಿತಿರುವವರೇ ಹೆಚ್ಚು. ಕೊಂಚ ಸಡಿಲಿಕೆಯಿಂದಲೇ ಇಷ್ಟೊಂದು ಸಂಭ್ರಮಿಸುವವರು ಸಂಪೂರ್ಣ ಲಾಕ್ಡೌನ್ ತೆರವಾದರೆ ಹಬ್ಬವೇ ಮಾಡುತ್ತಾರೆ. ಅಂತಹದರಲ್ಲಿ ಸಿಂಗಾಪುರದ 9 ವರ್ಷದ ಬಾಲಕನೊಬ್ಬ ಲಾಕ್ಡೌನ್ ತೆರವಾದ ತಕ್ಷಣವೇ ಗಳಗಳನೇ ಕಣ್ಣೀರಿಟ್ಟಿದ್ದಾನೆ.
ಅಯ್ಯೋ ಇವನ್ಯಾರಪ್ಪ ಪುಣ್ಯಾತ್ಮ ನಾವೆಲ್ಲಾ ಲಾಕ್ಡೌನ್ ಯಾವಾಗ ಓಪನ್ ಆಗುತ್ತದೆ ಎಂದು ಬಕಪಕ್ಷಿಗಳ ರೀತಿ ಕಾಯುತ್ತಿದ್ದರೆ, ಈತ ಕಣ್ಣೀರಿಡುತ್ತಿದ್ದಾನಾ ಎಂಬ ಪ್ರಶ್ನೆ ಮೂಡಬಹುದು. ಆದರೆ ಇಲ್ಲಿ ಬಾಲಕ ಕಣ್ಣೀರಿಟ್ಟಿರುವುದು ಬೇರೆಯೇ ಉದ್ದೇಶಕ್ಕಾಗಿ. ಸಿಂಗಾಪುರದಲ್ಲಿ ಲಾಕ್ಡೌನ್ನಿಂದಾಗಿ ಹಲವು ದಿನಗಳವರೆಗೆ ಮ್ಯಾಕ್ಡೊನಾಲ್ಡ್ ತೆರೆದಿರಲಿಲ್ಲ. ಇಷ್ಟು ದಿನಗಳವರೆಗೆ ಮ್ಯಾಕ್ ಡೊನಾಲ್ಡ್ ಮಿಸ್ ಮಾಡಿಕೊಂಡಿದ್ದ ಬಾಲಕನಿಗೆ ಇದೀಗ ಮತ್ತೆ ತೆರೆದಿರುವ ಕಣ್ಣೀರಿಗೆ ಕಾರಣವಾಗಿದೆ. ಅಂದಹಾಗೆ ಈ ಕಣ್ಣೀರು ಸಂತೋಷದ ಕಣ್ಣೀರಾಗಿದೆ. ಇದುವರೆಗೂ ನೀವಂದುಕೊಂಡಿದ್ದ ಕಣ್ಣೀರಲ್ಲ.
ಹಲವು ದಿನಗಳ ನಂತರ ಮೇ 10ರಂದು ಮ್ಯಾಕ್ ಡೊನಾಲ್ಡ್ ಓಪನ್ ಆಗಿದೆ. ಮೇ 18ರಂದು ಸಿಂಗಾಪುರ ನಿವಾಸಿ ಮಮ್ ವಾಟಿ ತನ್ನ ಮಗ ಆ್ಯಡಮ್ ಬಿನ್ ಮೊಹಮ್ಮದ್ ಇರ್ವಾನ್ಗಾಗಿ ಮ್ಯಾಕ್ ಡೊನಾಲ್ಡ್ನಿಂದ ಇಷ್ಟವಾದ ಆಹಾರವನ್ನು ಕೊಂಡುತಂಡು ಸರ್ಪ್ರೈಸ್ ನೀಡಿದ್ದಾಳೆ. ಅದನ್ನು ವಿಡಿಯೋ ಸಹ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ.
ಹಲವು ದಿನಗಳವರೆಗೆ ಮಿಸ್ ಮಾಡಿಕೊಂಡಿದ್ದ ತನ್ನಿಷ್ಟದ ಆಹಾರವನ್ನು ನೋಡುತ್ತಿದ್ದಂತೆಯೇ ಬಾಲಕ ಭಾವುಕನಾಗಿ ಕಣ್ಣೀರಿಟ್ಟಿದ್ದಾನೆ. ಅಲ್ಲದೆ, ತಾಯಿಯನ್ನು ತಬ್ಬಿಕೊಂಡು ಧನ್ಯವಾದಗಳನ್ನು ತಿಳಿಸಿದ್ದಾನೆ. ಅಂದಹಾಗೆ ಇರ್ವಾನ್ ತಿಂದಿದ್ದು, ಫೇವರೀಟ್ ಚಿಕನ್ ನಗ್ಗೆಟ್ಸ್. ಅಲ್ಲದೆ, ಐಸ್ ಕ್ರೀಮ್ ಸಹ ಆತನಿಗೆ ಇಷ್ಟವಂತೆ.
ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋವನ್ನು ಈವರೆಗೂ 73 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.
ಇನ್ನು ಭಾರತದಲ್ಲೂ ಸಹ ಪಾನಿಪುರಿ ಹಾಗೂ ಗೋಬಿ ಮಂಚೂರಿಯನ್ ಮಿಸ್ ಮಾಡಿಕೊಂಡ ಅನೇಕರು ಮನೆಯಲ್ಲೇ ತಯಾರಿಸಿ, ಅದನ್ನು ವಿಡಿಯೋ ಮಾಡಿ ಬಿಟ್ಟ ಎಷ್ಟೋ ಉದಾಹರಣೆಗಳನ್ನು ನೋಡಿದ್ದೇವೆ. (ಏಜೆನ್ಸೀಸ್)