

Mohanlal: ಮಲಯಾಳಂ ನಟ ಮೋಹನ್ ಲಾಲ್, ಭಾರತೀಯ ಚಿತ್ರರಂಗಕ್ಕೆ ನೀಡಿದ ನಾಲ್ಕು ದಶಕಗಳ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಅತ್ಯುನ್ನತ ಗೌರವವಾದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶನಿವಾರ(ಸೆ 20) ಅಧಿಕೃತವಾಗಿ ಈ ವಿಷಯವನ್ನು ಬಹಿರಂಗಗೊಳಿಸಿದೆ.
ಈ ಗೌರವಕ್ಕೆ ಪ್ರತಿಕ್ರಿಯಿಯೆ ನೀಡಿರುವ ನಟ ಮೋಹನ್ ಲಾಲ್, ತಮ್ಮ ಎಕ್ಸ್ ಖಾತೆಯಲ್ಲಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದು, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಲು ನಿಜಕ್ಕೂ ವಿನೀತನಾಗಿದ್ದೇನೆ, ಈ ಗೌರವ ನನಗೊಬ್ಬನಿಗಲ್ಲ, ಈ ಸುಧೀರ್ಘ ಪ್ರಯಾಣದಲ್ಲಿ ನನ್ನೊಂದಿಗೆ ಹೆಜ್ಜೆ ಹಾಕಿದ ಪ್ರತಿಯೊಬ್ಬ ವ್ಯಕ್ತಿಗೂ ಸೇರಿದೆ. ನನ್ನ ಕುಟುಂಬ, ಪ್ರೇಕ್ಷಕರು, ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಹಿತೈಷಿಗಳಿಗೆ, ನಿಮ್ಮ ಪ್ರೀತಿ, ನಂಬಿಕೆ ಮತ್ತು ಪ್ರೋತ್ಸಾಹವು ನನ್ನ ದೊಡ್ಡ ಶಕ್ತಿಯಾಗಿದೆ ಮತ್ತು ಇಂದು ಈ ಪ್ರಶಸ್ತಿ ನಾನು ಯಾರೆಂದು ತಿಳಿಸಿಕೊಟ್ಟಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಕೂಡ ಹಿರಿಯ ನಟನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಭಿನಂದಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮೋಹನ್ ಲಾಲ್, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ತುಂಬಾ ವಿನಮ್ರತೆ ಮತ್ತು ಗೌರವವಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದಯೆಯ ಮಾತುಗಳು ಮತ್ತು ಆಶೀರ್ವಾದಗಳಿಗಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಎಂದಿದ್ದಾರೆ.
ಹಿನ್ನಲೆ..
ಮೋಹನ್ ಲಾಲ್ ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತುಡರಂ, ದೃಶ್ಯಂ, ವಾನಪ್ರಸ್ತಂ ಮತ್ತು ಪುಲಿಮುರುಗನ್‌ನಂತಹ ಹಲವಾರು ಚಿತ್ರಗಳು ಜನಮನ್ನಣೆ ಗಳಿಸಿವೆ.(ಏಜೆನ್ಸೀಸ್)