

Mohanlal: ಭಾರತೀಯ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆಗಾಗಿ ಕೇಂದ್ರ ಸರ್ಕಾರ ನೀಡಲಿರುವ 2023ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಹೆಸರನ್ನು ಶನಿವಾರ (ಸೆ. 20) ಘೋಷಣೆ ಮಾಡಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಪ್ರಸಾರ ಮತ್ತು ಮಾಹಿತಿ ಸಚಿವಾಲಯ, ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ಭಾರತ ಸರ್ಕಾರವು ನಟ ಶ್ರೀ ಮೋಹನ್ ಲಾಲ್ ಅವರಿಗೆ 2023ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಘೋಷಿಸಲು ಸಂತೋಷವಾಗುತ್ತಿದೆ ಎಂದು ಬರೆದುಕೊಂಡಿದೆ.
ಈ ವಿಷಯವಾಗಿ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, "ಶ್ರೀ ಮೋಹನ್ ಲಾಲ್ ಜಿ ಶ್ರೇಷ್ಠತೆ ಮತ್ತು ಬಹುಮುಖ ಪ್ರತಿಭೆಯ ಪ್ರತಿರೂಪ, ದಶಕಗಳ ಕಾಲ ತಮ್ಮ ಶ್ರೀಮಂತ ಕಾರ್ಯವೈಖರಿಯೊಂದಿಗೆ ಮಲಯಾಳಂ ಸಿನಿಮಾ, ರಂಗಭೂಮಿಯ ಪ್ರಮುಖ ಜ್ಯೋತಿಯಾಗಿ ಬೆಳಗುತ್ತಿದ್ದಾರೆ. ಕೇರಳದ ಸಂಸ್ಕೃತಿಯ ಬಗ್ಗೆ ತೀವ್ರ ಒಲವು ಹೊಂದಿದ್ದಾರೆ. ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿಯೂ ಗಮನಾರ್ಹ ಅಭಿನಯ ಸಲ್ಲಿಸಿದ್ದು, ಅವರ ಸಿನಿಮೀಯ ಮತ್ತು ರಂಗಭೂಮಿ ಪ್ರತಿಭೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರ ಸಾಧನೆಗಳು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲಿ. ಎಂದು ಪ್ರಧಾನಿ ಬರೆದಿದ್ದಾರೆ.(ಏಜೆನ್ಸೀಸ್)