

ಕೊಚ್ಚಿ: ದೃಶ್ಯಂ ಭಾಗ-1 ಹಾಗೂ ಭಾಗ-2 (Drishyam 1&2) ಮಾಲಿವುಡ್ ಸೂಪರ್ಸ್ಟಾರ್ ಮೋಹನ್ಲಾಲ್ ಅವರ ವೃತ್ತಿಜೀವನಕ್ಕೆ ಬಿಗ್ ಟ್ವಿಸ್ಟ್ ನೀಡಿದ ಸಿನಿಮಾ ಎಂದರೆ ತಪ್ಪಾಗಲಾರದು. ಇದೀಗ ಈ ಸಿನಿಮಾದ ಮೂರನೇ ಭಾಗದ ಕುರಿತು ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದ್ದು, ಈ ಬಗ್ಗೆ ನಟ ಮೋಹನ್ಲಾಲ್ ಅಧಿಕೃತವಾಗಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಮೋಹನ್ಲಾಲ್ ಇತಿಹಾಸ ಎಂದಿಗೂ ಸುಮ್ಮನಿರಲಾರದು. ದೃಶ್ಯಂ-3 (Drishyam-3) ಕನ್ಫರ್ಮ್ ಎಂದು ನಿರ್ದೇಶಕ ಹಾಗೂ ನಿರ್ಮಾಪಕರ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೀತು ಜೋಸೆಫ್ ಮೊದಲ ಹಾಗೂ ಎರಡನೇ ಭಾಗವನ್ನು ನಿರ್ದೇಶಿಸಿದ್ದರು.
2013ರಲ್ಲಿ ತೆರೆಕಂಡು ಮಾಲಿವುಡ್ನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ದೃಶ್ಯಂ ಚಿತ್ರವು ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಬೇರೆ ದೇಶಗಳ ಭಾಷೆಗಳಿಗೂ ರಿಮೇಕ್ ಆಗಿತ್ತು. ಚಿತ್ರದ ಎರಡನೇ ಭಾಗವು 2021ರಲ್ಲಿ ತೆರೆ ಕಂಡಿತ್ತು. ಇದೀಗ ಮೂರನೇ ಭಾಗ ತೆರೆಗೆ ಬರಲು ಸಜ್ಜಾಗಿದ್ದು, ಸಿನಿರಸಿಕರು ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.