Video| ಊಟ ಬಡಿಸಲು ತಡವಾಗಿದ್ದಕ್ಕೆ ಗಲಾಟೆ; ಕ್ಷಣಾರ್ಧದಲ್ಲಿ ರಣರಂಗವಾದ ಮದುವೆಮನೆ, ಇಬ್ಬರು ಗಂಭೀರ

Marriage Viral Fight
Published on

ಬಿಜ್ನೋರ್: ಇತ್ತೀಚಿನ ದಿನಗಳಲ್ಲಿ ಮದುವೆಗೆ ಸಂಬಂಧಿಸಿದ ಸುದ್ದಿಗಳು ಒಂದಿಲ್ಲೊಂದು ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕ್ಷುಲಕ ಕಾರಣಕ್ಕೆ ಮದುವೆ ಸಮಾರಂಭಗಳು ಮುರಿದು ಬೀಳುತ್ತಿರುವುದು ಕಳವಳಕಾರಿಯಾಗಿದೆ. ಇದೀಗ ಮದುವೆಯಲ್ಲಿ ಊಟ ಬಡಿಸುವುದು ತಡವಾಯಿತು ಎಂಬ ಕಾರಣಕ್ಕೆ ವರ ಹಾಗೂ ವಧುವಿನ ಕಡೆಯವರು ಹೊಡೆದಾಡಿಕೊಂಡಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಯು ಉತ್ತರಪ್ರದೇಶದ ಬಿಜ್ನೋರ್​ನಲ್ಲಿ ನಡೆದಿದ್ದು, ನೋಡನೋಡುತ್ತಿದ್ದಂತೆ ಮದುವೆಮನೆ ರಣರಂಗವಾಗಿ ಬದಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Video Viral) ಆಗಿದೆ. ಘಟನೆ ಸಂಬಂಧ ಅಫ್ಜಲ್‌ಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ಧಾರೆ.

ಘಟನೆ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​​ ಅಧಿಕಾರಿಯೊಬ್ಬರು, ಅಫ್ಜಲ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಗೋವರ್ಧನಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ನಿವಾಸಿ ಶಬೀರ್ ತಮ್ಮ ಮಗಳ ಮದುವೆಯನ್ನು ಸಿಪಾಹಿಯೋವಾಲಾ ನಿವಾಸಿಯೊಂದಿಗೆ ನಿಶ್ಚಯಿಸಿದ್ದರು.

ಮದುವೆ ದಿಬ್ಬಣವು ವಧುವಿನ ಮನೆ ತಲುಪುತ್ತಿದ್ದಂತೆ ವರನ ಕಡೆ ಹಾಜರಿದ್ದ ಕೆಲವು ಯುವಕರು ಕೂಡಲೇ ಊಟವನ್ನು ಬಡಿಸುವಂತೆ ಆಗ್ರಹಿಸಿದ್ದಾರೆ. ಈ ವೇಳೆ ವಧುವಿನ ತಂದೆ ಶಬೀರ್​ ವರನ ಕಡೆಯವರಿಗೆ ಸ್ವಲ್ಪ ಸಹಕರಿಸವಂತೆ ಹೇಳಿದ್ದು, ಇದಕ್ಕೆ ಸಿಟ್ಟಾದ ವರನ ಸಂಬಂಧಿಕರು ವಧುವಿನ ಕಡೆಯವರ ಜೊತೆ ಜಗಳವಾಡಲು ಶುರು ಮಾಡಿದ್ದಾರೆ. ಈ ವೇಳೆ ಉಭಯ ಕುಟುಂಬಸ್ಥರ ನಡುವೆ ಮಾತಿನ ಚಕಮಕಿಯಾಗಿದ್ದು, ಪರಸ್ಪರ ಹೊಡೆದಾಡಿಕೊಳ್ಳಲು ಶುರು ಮಾಡಿದ್ದಾರೆ.

ಹೊಡೆದಾಟದಲ್ಲಿ  ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈರಲ್ ವಿಡಿಯೋ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವರ ಹಾಗೂ ವಧುವಿನ ಕಡೆಯವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net