ದೇವರ ಕೃಪೆಯಿಲ್ಲದೆ ನಮ್ಮ ಬದುಕಿನ ಆಟ ಯಾವುದು ನಡೆಯದು; ಮಹಾಕುಂಭಮೇಳ ಕುರಿತು ನಟ Jaggesh ವರ್ಣನೆ

Jaggesh
Published on

ಪ್ರಯಾಗ್​ರಾಜ್: ಫೆಬ್ರವರಿ 26ರಂದು ಸಂಪನ್ನಗೊಳ್ಳಲಿರುವ ಕುಂಭಮೇಳಕ್ಕೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದು, ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್​ (Jaggesh) ಕೂಡ ಕುಂಭಮೇಳಕ್ಕೆ ಭೇಟಿ ನೀಡಿ ಪುಣ್ಯಸ್ನಾನ ಮಾಡಿದ್ದು, ತಮ್ಮ ಅನುಭವವನ್ನು ವಿಡಿಯೋ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ಧಾರೆ.

ಕಳೆದಬಾರಿ 1880 ರಲ್ಲಿ ನಡೆದದ್ದು ಈ ಮಹಾಕುಂಭಮೇಳ. ನನ್ನ ತಾತನ ಜನನ ಆದದ್ದು 1896ರಲ್ಲಿ. ಅಂದರೆ ನಮ್ಮ ತಾತ ಹುಟ್ಟುವ 16ವರ್ಷದ ಹಿಂದೆ. ನಮ್ಮ ತಾತನಿಂದ ನನ್ನ ಮೊಮ್ಮಗ ಅರ್ಜುನ 5ನೇ ತಲೆಮಾರಿಗೆ ಬಂದಿದೆ. ಮುಂದಿನ ಬಾರಿ ಈ ಮಹಾಕುಂಭ ಬರೋದು 2170 ಇಸವಿಯಲ್ಲಿ. ಅಂದರೆ ನಮ್ಮ ಮುಂದಿನ 5 ತಲೆಮಾರಿನ ಬದುಕು ಇಲ್ಲವಾಗಿರುತ್ತದೆ.

ನಾನು ನನ್ನದು ನನ್ನ ಹಣ ನನ್ನ ಮನೆ ನನ್ನ ಹೆಂಡತಿ ನನ್ನ ಮಕ್ಕಳು ನನ್ನ ಪರಿವಾರ ಎನ್ನುವ ಕಥೆ ಏನಾಗಿರುತ್ತದೆಯೋ ದೇವರೆ ಬಲ್ಲ. ಕಡೆಯಪಕ್ಷ ನಮ್ಮ ಚಿತ್ರಪಟವು ಗೋಡೆಯಿಂದ ಮರೆಯಾಗಿ ಹಟ್ಟಸೇರುತ್ತೆ ಇಲ್ಲ ಕಸದ ಜೊತೆ ಲೀನ. ನಾವು ದುಡಿದದ್ದು ಮುಂದಿನವರು ಉಳಿಸಿಕೊಂಡಿದ್ದರೆ ಅಲ್ಪಸ್ವಲ್ಪ ಹರಟೆಯಲ್ಲಿ ನಮ್ಮ ಹೆಸರು ಬಂದುಹೋಗಬಹುದು. ಆದರೆ ಯಾರು ಹೋದರು ಒಬ್ಬರು ನೆನಪಲ್ಲಿ ಉಳಿದೆ ಇರುತ್ತಾರೆ ಅವರೆ ಶಾರದಾಸುತರು ಅಂದರೆ ಗಾಯಕರು ನಟರು ನಟಿಯರು ಸಂಗೀತ ವಿದ್ವಾಂಸರು ಹಾಗು ಲೇಖಕರು.

ಅಲ್ಲಿಗೆ ಯಾವ ಪುರುಷಾರ್ಥಕ್ಕೆ ಮನುಷ್ಯರು ನಾವು ನಾವೆ,ನಮ್ಮದೆ,ನಂದೆ, ನಾನಿಲ್ಲದೆ, ಎಂಬ ಅಙ್ನಾನ ಬೇರೂರಿದೆ ಒಳಗೆ ಈ ಮಹಾಕುಂಭಕ್ಕೆ ಆಧ್ಯಾತ್ಮಿಕ ಸಾಧನೆಗೆ ಹೋದವರಿಗೆ ನಾನು ಮೇಲೆ ಹೇಳಿದ್ದ ಎಲ್ಲಾ ಮಾತುಗಳು ಮಾನಸದಲ್ಲಿ ಮಜ್ಜನವಾಗಿ ನಾನು ದೇಹವಲ್ಲಾ ಮುಂದೆ ಮಣ್ಣು ಎಂಬ ಅರಿವು ಮನದ ಆಳಕ್ಕೆ ಹೋಗಿ ಮನನವಾಗಿ ಮೌನವಾಗಿ ಅಹಂಕಾರ ಅಡಗಿ ಶಾಂತವಾಗುತ್ತದೆ ಮನಸ್ಸು.

ನಾನು ಹೋದೆ ನೋಡಿದೆ ಬಂದೆ ಎನ್ನುವವರಿಗೆ ಅವರ ಬದುಕಿನ ಮತ್ತೊಂದು ಪ್ರವಾಸ ಅನ್ನಿಸುತ್ತದೆ. ನಾನು ಭಾವುಕನಾದೆ ನನ್ನ ವಂಶದ ಎಲ್ಲಾ ಹಿರಿಯರ ನೆನೆದೆ ಮುಂದಿನ ಪೀಳಿಗೆಯ ಮಕ್ಕಳಿಗೆ ಶುಭಕೋರಿದೆ. ನನಗನ್ನಿಸಿದ್ದು ದೇವರ ಕೃಪೆಯಿಲ್ಲದೆ ನಮ್ಮ ಬದುಕಿನ ಆಟ ಯಾವುದು ನಡೆಯದು. ಇನ್ನು ಸಮಯವಿದೆ ಹೋಗುವವರು ಹೋಗಿಬನ್ನಿ ಮತ್ತೆ ನೋಡಲಾಗದು ಈ ಮಹಾಕುಂಭ ಸರ್ವೇಜನಾಃಸುಖಿನೋಭವಂತು ಎಂದು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್​ (Jaggesh) ಪೋಸ್ಟ್ ಮಾಡಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net