

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಂಟಾದ ಆಘಾತದಿಂದ ತತ್ತರಿಸಿದ್ದ ರಾಜ್ಯ ಬಿಜೆಪಿಗೆ ನವ ಚೈತನ್ಯ ತಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಸಕ್ತ ಲೋಕಸಭಾ ಚುನಾವಣೆ ಕುರಿತಾಗಿ ಬಿಜೆಪಿ ತಂತ್ರಗಾರಿಕೆ, ಚುನಾವಣೆ ಸಿದ್ಧತೆಗಳ ಕುರಿತಂತೆ ವಿಜಯವಾಣಿ ಜತೆ ಮಾತನಾಡಿದ್ದಾರೆ.
ಶ್ರೀಕಾಂತ್ ಶೇಷಾದ್ರಿ, ಬೆಂಗಳೂರು
‘ಮೋದಿ ಅಲೆ ಕಂಡು ರಾಜ್ಯದ ಕಾಂಗ್ರೆಸ್ ನಾಯಕರಿಗೆ ನಡುಕು ಶುರುವಾಗಿದೆ. ಭಯ, ಆತಂಕದಲ್ಲಿ ಗಾಬರಿಗೊಂಡಿರುವುದರಿಂದ ಮೋದಿ ಅಲೆಯೇ ಇಲ್ಲ ಎಂದು ಪ್ರಚಾರ ಸಭೆಗಳಲ್ಲಿ ಹೇಳುತ್ತಿದ್ದಾರೆ..’ ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವ್ಯಾಖ್ಯಾನ. ಲೋಕಸಭೆ ಚುನಾವಣೆಯ ಜಿದ್ದಾಜಿದ್ದಿ ನಡುವೆಯೇ ವಿಜಯವಾಣಿಗೆ ಸಂದರ್ಶನ ನೀಡಿರುವ ಅವರು ಬಿಜೆಪಿ, ಜೆಡಿಎಸ್ ಮೈತ್ರಿಯ ಅನುಕೂಲತೆ, ಮತಕಣದ ಚಿತ್ರಣದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
1 ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಹೆಚ್ಚು ದಿನ ಬಾಕಿ ಉಳಿದಿಲ್ಲ. ಚುನಾವಣಾ ಭೂಮಿಕೆ ಎಷ್ಟು ಪ್ರಮಾಣದಲ್ಲಿ ಹದವಾಗಿದೆ? ನಿಮ್ಮ ಪ್ರಯತ್ನ ಯಾವ ಮಟ್ಟಿಗೆ ಫಲಕೊಟ್ಟಿದೆ?
ಇಡೀ ರಾಜ್ಯದಲ್ಲಿ ಪಕ್ಷದ ಪರವಾದ ವಾತಾವರಣವಿದೆ. ಕಾರ್ಯಕರ್ತರಲ್ಲೂ ಉತ್ಸಾಹ ಇದೆ. ಬಿಜೆಪಿ- ಜೆಡಿಎಸ್ ನಡುವೆ ಸಮನ್ವಯ ನಿರೀಕ್ಷೆಗಿಂತ ಚೆನ್ನಾಗಿದೆ. ಈ ವಿಷಯದಲ್ಲಿ ಉತ್ಪ್ರೇಕ್ಷೆ ಇಲ್ಲ. ಎಲ್ಲ ಕ್ಷೇತ್ರಗಳೂ ಗೆಲುವಿನ ಕ್ಷೇತ್ರಗಳಾಗಿ ಪರಿವರ್ತನೆಯಾಗಬೇಕಷ್ಟೇ. ಎದುರಾಳಿ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತಾರೂಢ ಪಕ್ಷ . ಅವರ ಗ್ಯಾರಂಟಿಗಳ ನಡುವೆಯೂ ಮೋದಿ ಬಗ್ಗೆ ಜನರಲ್ಲಿ ಹೆಚ್ಚು ಭರವಸೆ ಇದೆ. ಅದರಲ್ಲೂ ಮುಖ್ಯವಾಗಿ ಇದು ರಾಷ್ಟ್ರದ ಭವಿಷ್ಯ ನಿರ್ಧರಿಸುವ ಚುನಾವಣೆ ಎಂಬ ಅರಿವು ಜನರಿಗಿದೆ.
2 ಮೊದಲಿಗೆ ಚುನಾವಣೆ ನಡೆಯುವ 14 ಕ್ಷೇತ್ರಗಳಲ್ಲಿ ನಿಮ್ಮ ಪಾಲೆಷ್ಟು? ಕಾಂಗ್ರೆಸ್ಗೆ ದಕ್ಕುವುದೆಷ್ಟು?
14 ಕ್ಷೇತ್ರಗಳಲ್ಲೂ ಬಿಜೆಪಿ ಪರವಾದ ನಿಚ್ಚಳ ವಾತಾವರಣ ಇದೆ. ಚಾಮರಾಜನಗರ, ಬೆಂಗಳೂರು ಗ್ರಾಮಾಂತರದಲ್ಲಿ ತೀವ್ರ ಪೈಪೋಟಿ ಇದ್ದರೂ ಬಿಜೆಪಿಗೆ ಮುನ್ನಡೆ ಸಿಗಲಿದೆ. ಎರಡನೇ ಹಂತದಲ್ಲಿ ಚುನಾವಣೆ ನಡೆಯುವ 4-5 ಕಡೆ ಹೆಚ್ಚು ಪ್ರಯತ್ನ ಹಾಕಬೇಕಾಗಿದೆ.
3 ಜೆಡಿಎಸ್- ಬಿಜೆಪಿ ಮೈತ್ರಿಯಿಂದ ಪರಸ್ಪರ ಯಾವ ಪ್ರಮಾಣದ ಲಾಭ ನಿರೀಕ್ಷೆಯಲ್ಲಿದ್ದೀರಿ?
ಮೈತ್ರಿಯಿಂದ ಖಂಡಿತವಾಗಿ ಪರಸ್ಪರ ಲಾಭ ಆಗಲಿದೆ. ಕೆಳಹಂತದಲ್ಲಿ ಎರಡೂ ಪಕ್ಷದವರು ಒಟ್ಟಾಗಿ ಕೆಲಸ ಮಾಡುತ್ತಿ ದ್ದಾರೆ. ಬಿಜೆಪಿಯಿಂದ ಜೆಡಿಎಸ್ಗೆ ಜೆಡಿಎಸ್ನಿಂದ ಬಿಜೆಪಿಗೂ ಮತ ವರ್ಗಾವಣೆ ಆಗಲಿದೆ. ಅನುಮಾನ ಬೇಡ.
4 ಬಿಜೆಪಿ ಭಾವನಾತ್ಮಕ ವಿಚಾರ ಇಟ್ಟುಕೊಂಡು ಮತ ಬೇಡುತ್ತಿದೆ, ಅಭಿವೃದ್ಧಿ ವಿಚಾರದಲ್ಲಿ ಮತ ಕೇಳುವುದಿಲ್ಲ ಎಂಬುದು ಕಾಂಗ್ರೆಸ್ ವಾದ. ನಿಮ್ಮ ಉತ್ತರ?
ನಾವು ನಮ್ಮ ಪರ್ಫಾಮೆನ್ಸ್ ಮೇಲೆಯೇ ಮತ ಕೇಳುತ್ತಿದ್ದೇವೆ. ಸಕಾರಾತ್ಮಕ ಅಂಶ ಇಟ್ಟುಕೊಂಡು ಹೋಗುತ್ತಿದ್ದೇವೆ. ಮೋದಿಯವರ ಯೋಜನೆಗಳು ಸಾಕಷ್ಟು ಜನರನ್ನು ತಲುಪಿವೆ. ಇದರ ಪರಿಣಾಮ ಜನರು ನಮ್ಮ ಪರ ನಿಂತಿದ್ದಾರೆ. ಜನ ಮೂರ್ಖರಲ್ಲ, ಕಾಂಗ್ರೆಸ್ 60 ವರ್ಷದ ಆಡಳಿತ ಮತ್ತು ಮೋದಿಯವರ 10 ವರ್ಷದ ಆಡಳಿತ ತುಲನೆ ಮಾಡುತ್ತಾರೆ.
5 ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲುಂಟಾಗಿತ್ತು, ಯಾವ ರೀತಿ ಪುನಃ ಸಮರಕ್ಕೆ ಸಜ್ಜಾಗಿದೆ?
ವಿವಿಧ ಕಾರಣದಿಂದ ಹಿನ್ನಡೆಯಾಗಿದ್ದು ನಿಜ. ನಮ್ಮ ನಾಯಕರ ನಡವಳಿಕೆಯಿಂದ ಪ್ರಧಾನಿಗೂ ಅವಮಾನ ಮಾಡಿದೆವು. ಆದರೆ ಈ ಬಾರಿ ಹಾಗೆ ಆಗಲ್ಲ. ಸ್ವಯಂಕೃತ ತಪು್ಪ ಮರುಕಳಿಸಲ್ಲ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ನಮ್ಮ ತಂಡ ಸಂಕಲ್ಪ ಮಾಡಿ ಕೆಲಸ ಮಾಡುತ್ತಿದೆ. ಇದು ದೇಶದ ಚುನಾವಣೆ. ತಳ ಹಂತದಲ್ಲಿ ನಮ್ಮ ಕಾರ್ಯಕರ್ತರ ಶ್ರಮ ಜಾಸ್ತಿ ಇದೆ. ಬೂತ್ ಹಂತದಲ್ಲಿ ಕೆಲಸ ಮಾಡುತ್ತಿದ್ದಾರೆ. ಉದ್ದೇಶ ಈಡೇರುವ ಕೆಲಸ ಆಗಲಿದೆ. ಅಭ್ಯರ್ಥಿ ಯಾರೆಂಬುದಕ್ಕಿಂತ ಮೋದಿಗೆ ಮತ ಹಾಕಬೇಕೆಂಬ ಭಾವನೆ ಮತದಾರರಲ್ಲಿದೆ. ಇದನ್ನು ನಾವು ಎನ್ಕ್ಯಾಶ್ ಮಾಡಿಕೊಳ್ಳಬೇಕು.
6 ಇಂಡಿಯಾ ಶೈನಿಂಗ್ ಎಂದು ಎನ್ಡಿಎ ಮುಗ್ಗರಿಸಿದ ಉದಾಹರಣೆ ಇದೆ. ಈ ಬಾರಿ 400 ಸ್ಥಾನ ಗೆಲ್ಲುತ್ತೇವೆಂಬುದು ಏಕೋ ಅತಿಯಾದ ಆತ್ಮವಿಶ್ವಾಸ ಎನಿಸುತ್ತಿದೆಯಲ್ಲ?
ಈ ವಿಚಾರದಲ್ಲಿ ಪಕ್ಷಕ್ಕೆ ಹಾಗೂ ಪಕ್ಷ ಮುನ್ನಡೆಸುವವರಿಗೆ ಸ್ಪಷ್ಟತೆ ಇದೆ. ಅತಿಯಾದ ಆತ್ಮವಿಶ್ವಾಸ ಎನಿಸುವುದಿಲ್ಲ. ಚುನಾವಣೆಗೆ ತಯಾರಿ ಆರಂಭಿಸಿ ವರ್ಷವೇ ಕಳೆದಿದೆ. ಜತೆಗೆ ನೀಲಿನಕ್ಷೆ ಇಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ನಮ್ಮ ಸಂಘಟನೆಯ ಮೆಕ್ಯಾನಿಸಂ ಸರ್ಕಾರ ಇರಲಿ ಬಿಡಲಿ ಕೆಲಸ ಮಾಡುತ್ತಲೇ ಇರುತ್ತದೆ. ಅದೇ ನಮ್ಮ ಸಾಮರ್ಥ್ಯ.
7 ಕರ್ನಾಟಕಕ್ಕೆ ಬರ ಪರಿಹಾರ ಕೊಟ್ಟಿಲ್ಲ, ತೆರಿಗೆ ತಾರತಮ್ಯ ಆಗಿದೆ ಎಂಬ ರಾಜ್ಯ ಸರ್ಕಾರದ ವಾದ ಸರಿಯಲ್ಲವೇ? ಕೇಂದ್ರ ಏಕೆ ಸತಾಯಿಸುತ್ತಿದೆ? ಇದರಿಂದ ರಾಜ್ಯ ಬಿಜೆಪಿ ಚಡಪಡಿಸುತ್ತಿಲ್ಲವೇ?
ಕೇಂದ್ರದಿಂದ ಬರ ಪರಿಹಾರ ಬಂದಿಲ್ಲ ಎಂಬುದು ಸತ್ಯ. ಅನ್ಯಾಯ ಆಗಿದೆ ಎಂಬುದು ಸುಳ್ಳು. ಸಿಎಂ ಸಿದ್ದರಾಮಯ್ಯ ಬಹಳ ಬುದ್ಧಿವಂತಿಕೆಯಿಂದ ಅರ್ಧ ಸತ್ಯ ಹೇಳುತ್ತಿದ್ದಾರೆ. ಜಿಎಸ್ಟಿ ಪಾಲು, ಜಿಎಸ್ಟಿ ನಷ್ಟ ಪರಿಹಾರ ಎಲ್ಲದರಲ್ಲೂ ಅರ್ಧ ಸತ್ಯ ಹೇಳುತ್ತಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮನಬಂದಂತೆ ಹೇಳುತ್ತಾರೆ. ವಿಧಾನಸಭೆಯಲ್ಲಿ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅಧಿಕಾರಕ್ಕೆ ಬಂದಿದ್ದಾರೋ ಅದೇ ರೀತಿ ತಂತ್ರ ಅನುಸರಿಸಿ ಗೆಲ್ಲಬಹುದು ಎಂದುಕೊಂಡಿದ್ದಾರೆ. ಇದು ಅವರ ಭ್ರಮೆ. ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿಯೇ ಇಲ್ಲವೇ. ಕೇಂದ್ರದ ಅನುದಾನಕ್ಕೆ ಕಾಯದೇ ರಾಜ್ಯದ ಖಜಾನೆಯಿಂದ ಕೊಡಬಾರದೇ? ಅಲ್ಪಸಂಖ್ಯಾತರಿಗೆ ಹತ್ತು ಸಾವಿರ ಕೋಟಿ ಕೊಡುತ್ತೇನೆಂದು ಸಿಎಂ ಹೇಳಿಕೆ ಕೊಡುತ್ತಾರೆ, ಇಲ್ಲಿ ಬರ ಪರಿಹಾರ ಹೆಕ್ಟೇರ್ಗೆ 2 ಸಾವಿರ ರೂ. ಕೊಡುತ್ತೇನೆಂದರೆ ಏನು ಹೇಳಬೇಕು. ಕೇಂದ್ರ ಸರ್ಕಾರ ಬರ ಪರಿಹಾರ ಕೊಡಲ್ಲ ಎಂದು ಎಲ್ಲಿ ಹೇಳಿದೆ. ಇತರ ರಾಜ್ಯದವರೂ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ದೆಹಲಿಯಲ್ಲಿ ಸತ್ಯಾಗ್ರಹ ಧರಣಿ ಮಾಡಿಕೊಂಡು ಕುಳಿತರೇ? ರೈತರ ವಿಚಾರ, ಬರದ ವಿಚಾರದಲ್ಲೂ ರಾಜಕಾರಣ ಮಾಡುತ್ತಾರೆಂದರೆ, ರೈತರ ಬಗ್ಗೆ ಕಳಕಳಿ ಇಲ್ಲ ಎಂದರ್ಥ.
8 ಅನೇಕ ಕ್ಷೇತ್ರಗಳಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬೇರೆ ಬೇರೆ ಕಾರಣದಿಂದ ಪ್ರಮುಖ ನಾಯಕರು ಕೆಲಸ ಮಾಡದೇ ಮೌನವಾಗಿದ್ದಾರೆ. ಮೌನ ಅಪಾಯ ಕೂಡ ಅಲ್ಲವೇ?
ಮನಸ್ತಾಪ, ಭಿನ್ನಾಭಿಪ್ರಾಯ ಸಹಜ. ಕರ್ನಾಟಕದಲ್ಲಿ ಅದನ್ನು ಮೀರಿ ಕಾರ್ಯಕರ್ತರು, ಮತದಾರರು ಯೋಚನೆ ಮಾಡುತ್ತಿದ್ದಾರೆ. ಎಷ್ಟೋ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರೆಂದು ಮತದಾರರನ್ನು ಕೇಳಿದರೆ ಹೆಸರು ಗೊತ್ತಿರಲ್ಲ, ಮೋದಿ ಎನ್ನುತ್ತಾರೆ. ಇದು ವಾಸ್ತವಿಕ. ಎಷ್ಟು ವಿಶ್ವಾಸ ಇಟ್ಟುಕೊಂಡಿದ್ದಾರೆಂದರೆ ಒಂದೊಂದು ಸೀಟು ಮೋದಿಯವರಿಗೆ ಶಕ್ತಿ ತುಂಬಬೇಕು ಎಂಬ ಭಾವನೆ ಮತದಾರರಲ್ಲಿದೆ. ಟಿಕೆಟ್ ಹಂಚಿಕೆ ಬಳಿಕ ಕೆಲವೊಂದು ವ್ಯತ್ಯಾಸ ಕಾಣಿಸಿದೆ. ಹಾಗೆಂದು ಅಭ್ಯರ್ಥಿ ಯಾರಾಗಬೇಕೆಂದು ಪಕ್ಷದ ವರಿಷ್ಠರು ತೀರ್ಮಾನ ಮಾಡಿದ್ದಾರೆ. ಲೋಕಸಭೆ ಚುನಾವಣೆ ಆಗಿರುವುದರಿಂದ ರಾಜ್ಯದ ಅಧ್ಯಕ್ಷರೋ ಅಥವಾ ಯಡಿಯೂರಪ್ಪ ಪಾರ್ಲಿಮೆಂಟರಿ ಬೋರ್ಡ್ ಸದಸ್ಯರಿದ್ದಾರೆ ಎಂದು ತೀರ್ಮಾನ ಮಾಡುವ ಪ್ರಶ್ನೆಯೇ ಉದ್ಭವಿಸಲ್ಲ. ದೆಹಲಿ ನಾಯಕರು ಕಾಂಗ್ರೆಸ್ ಹೈಕಮಾಂಡ್ ರೀತಿ ಯಾರೋ ಒಬ್ಬಿಬ್ಬರ ಮಾತು ಕೇಳಿ ನಿರ್ಧಾರ ಮಾಡಲ್ಲ. ಕರ್ನಾಟಕದ ಬಗ್ಗೆಯಂತೂ ಹೆಚ್ಚು ಎಚ್ಚರ ವಹಿಸುತ್ತಾರೆ.
9 ರಾಜ್ಯ ಸರ್ಕಾರದ ಗ್ಯಾರಂಟಿ ಬಗ್ಗೆ ನಿಮ್ಮ ನಿಲುವೇನು?
ಒಬ್ಬ ಜನಪ್ರತಿನಿಧಿಯಾಗಿ ಹೇಳುತ್ತೇನೆ. ಗ್ಯಾರಂಟಿಯಿಂದ ವರ್ಷಕ್ಕೆ 60-70 ಸಾವಿರ ಕೋಟಿ ಬೇಕಾಗುತ್ತದೆ. ರಾಜ್ಯದ ಆದಾಯದ ಬಹುಪಾಲು ಸರ್ಕಾರಿ ನೌಕರರ ವೇತನ, ಸರ್ಕಾರದ ಹೊಣೆಗಾರಿಕೆಗೆ ಮರುಪಾವತಿಗೆ ಬೇಕಾಗುತ್ತದೆ. ಉಳಿದಿದ್ದು ಗ್ಯಾರಂಟಿಗೆ ನೀಡಿದರೆ ಅಭಿವೃದ್ಧಿ ಕೆಲಸ ಏನು ಮಾಡಲು ಸಾಧ್ಯ? ರಸ್ತೆ, ಶಾಲಾ-ಕಾಲೇಜು, ಆಸ್ಪತ್ರೆ ಮಾಡುತ್ತಾರೆಂದು ಜನ ಆಶೀರ್ವಾದ ಮಾಡಿ ಆರಿಸಿ ಕಳಿಸುತ್ತಾರೆ, ಪ್ರತಿ ಬಾರಿಯೂ ಗ್ಯಾರಂಟಿ ಎಂದು ಇದೇ ಕತೆ ಹೇಳಿಕೊಂಡು ಹೋಗುವುದೇ? ಎಷ್ಟು ವರ್ಷ ಅಭಿವೃದ್ಧಿ ಮಾಡದೇ ಇರಲು ಸಾಧ್ಯ. ಗ್ಯಾರಂಟಿಯಿಂದ ಜನರಿಗೆ ಬದುಕು ಕಟ್ಟಿಕೊಡಲು ಸಾಧ್ಯವೇ ಇಲ್ಲ. ಕಳೆದ ಹತ್ತು ತಿಂಗಳಲ್ಲಿ ರಾಜ್ಯದ ಭವಿಷ್ಯದ ದೃಷ್ಟಿಯಿಂದ, ಯುವಕರ ದೃಷ್ಟಿಯಿಂದ, ಅಭಿವೃದ್ಧಿ ದೃಷ್ಟಿಯಿಂದ ಇಂಥದ್ದೊಂದು ಯೋಜನೆ ಮಾಡಿದ್ದೇನೆಂದು ಸಿದ್ದರಾಮಯ್ಯ ಅವರು ಮೂರು ಯೋಜನೆ ಹೆಸರು ಹೇಳಲಿ ನೋಡೋಣ.
10 ಬಿಜೆಪಿ ಸರ್ಕಾರ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆಂದು ಸಿದ್ದರಾಮಯ್ಯ ನಿರಂತರವಾಗಿ ಹೇಳಿಕೊಂಡೇ ಬಂದಿದ್ದಾರೆ. ಈ ಮಾತನ್ನು ಯಾವ ರೀತಿ ಸ್ವೀಕರಿಸುತ್ತೀರಿ?
ಅವರ ಬಳಿ ಬೇರೆ ಏನೂ ವಿಷಯ ಇಲ್ಲ. ಮೋದಿಯವರನ್ನು ಭ್ರಷ್ಟಾಚಾರದ ವಿಚಾರದಲ್ಲಿ ಟೀಕಿಸಲು ಆಗಲ್ಲ. ಅಭಿವೃದ್ಧಿ ಆಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ, ಯಾರೋ ಒಬ್ಬರು ಹೇಳಿದ್ದಾರೆಂದು ಅದನ್ನೇ ಇಟ್ಟುಕೊಂಡು ಹೋಗುತ್ತಿದ್ದಾರೆ. ಅಂಬೇಡ್ಕರ್ಗೆ ಅವಮಾನ ಮಾಡಿದ್ದೇ ಕಾಂಗ್ರೆಸಿಗರು ಎಂಬುದಕ್ಕೆ ಉದಾಹರಣೆ ಇದೆ. ಅಂಬೇಡ್ಕರ್ ಅವರಿಗೆ ಗೌರವ ತರುವ ಕೆಲಸವನ್ನು ಬಿಜೆಪಿ ಮಾಡಿದೆ, ಒಟ್ಟಾರೆಯಾಗಿ ಕಾಂಗ್ರೆಸ್ಗೆ ಕೇಂದ್ರ, ಮೋದಿ ಬಗ್ಗೆ ಟೀಕಿಸಲು ಕಾರಣ ಸಿಗುತ್ತಿಲ್ಲ. ಸಂವಿಧಾನಕ್ಕೆ ಅತೀ ಹೆಚ್ಚು ತಿದ್ದುಪಡಿ ಯಾರು ಮಾಡಿದ್ದಾರೋ ಅವರೇ ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ.