ಆಪ್, ಟಿಎಂಸಿಗೆ ಮೋದಿ ಚಾಟಿ; ರಾಜ್ಯದಲ್ಲಿ ಆಯುಷ್ಮಾನ್​ ಭಾರತ ಜಾರಿಗೆ ತರದಕ್ಕೆ ಟೀಕೆ

PM Modi
Published on

ನವದೆಹಲಿ: ರಾಜಕೀಯ ಹಿತಾಸಕ್ತಿಗಾಗಿ ರೋಗಿಗಳನ್ನು ಶೋಷಣೆಗೆ ಒಳಪಡಿಸುವುದು ಅಮಾನವೀಯ ಎಂದು ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. 70 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ ನೀಡುವ ಆಯುಷ್ಮಾನ್ ಭಾರತ್​ನ ವಿಸ್ತರಿತ ಯೋಜನೆಗೆ ಮಂಗಳವಾರ ದೆಹಲಿಯಲ್ಲಿ ಚಾಲನೆ ನೀಡಿದ ಅವರು, ವಿಪಕ್ಷಗಳನ್ನು ಗುರಿಯಾಗಿಸಿ ಈ ವಾಕ್ ಪ್ರಹಾರ ನಡೆಸಿದರು. ಆಯುಷ್ಮಾನ್ ಭಾರತ್ ಯೋಜನೆಯನ್ನು ಪಶ್ಚಿಮಬಂಗಾಳ ಹಾಗೂ ದೆಹಲಿಯಲ್ಲಿ ಕ್ರಮವಾಗಿ ಟಿಎಂಸಿ ಮತ್ತು ಆಪ್ ಅನುಷ್ಠಾನಗೊಳಿಸದ್ದಕ್ಕೆ ಪ್ರಧಾನಿ ಮೋದಿಯವರು ಈ ಪಕ್ಷಗಳ ವಿರುದ್ಧ ಕಿಡಿಕಾರಿದರು.

ಜನರು ಚಿಕಿತ್ಸೆಗಾಗಿ ಮನೆ, ಜಮೀನು, ಚಿನ್ನಾಭರಣ ಮಾರಿಕೊಳ್ಳಬೇಕಾದ ಕಾಲವಿತ್ತು. ಗಂಭೀರ ಕಾಯಿಲೆಗಳ ಚಿಕಿತ್ಸಾ ವೆಚ್ಚ ಕೇಳಿಯೇ ಬಡವರ ಆತ್ಮ ನಲುಗುತ್ತಿತ್ತು. ಬಡ ಸಹೋದರ- ಸಹೋದರಿಯರ ಈ ಅಸಹಾಯಕತೆ ನೋಡಲಾಗದೆ ಆಯುಷ್ಮಾನ್ ಭಾರತ್ ಯೋಜನೆ ಆರಂಭಿಸಲಾಯಿತು. ಆದರೆ ಪಶ್ಚಿಮಬಂಗಾಳ ಮತ್ತು ದೆಹಲಿಯ ಹಿರಿಯರಿಗೆ ಈ ಸೇವೆ ಒದಗಿಸಲಾಗದ್ದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ. ನೀವು ಸಮಸ್ಯೆಯಲ್ಲಿದ್ದೀರಿ ಎಂಬುದು ನನಗೆ ಗೊತ್ತು, ಆದರೆ ನನಗೆ ಸಹಾಯ ಮಾಡಲು ಆಗುತ್ತಿಲ್ಲ. ಏಕೆಂದರೆ ಪಶ್ಚಿಮಬಂಗಾಳ ಮತ್ತು ದೆಹಲಿಯ ರಾಜ್ಯ ಸರ್ಕಾರಗಳು ಈ ಯೋಜನೆಗೆ ಕೈಜೋಡಿಸುತ್ತಿಲ್ಲ ಎಂದು ಪ್ರಧಾನಿ ಮೋದಿಯವರು ತೀವ್ರ ಬೇಸರ ವ್ಯಕ್ತಪಡಿಸಿದರು. ನಾನು ಈ ದೇಶದ ಜನರ ಸೇವೆ ಮಾಡಲು ಸಿದ್ಧನಿದ್ದೇನೆ. ಆದರೆ ರಾಜಕೀಯ ಹಿತಾಸಕ್ತಿಯ ಗೋಡೆಗಳು ಪಶ್ಚಿಮ ಬಂಗಾಳ-ದೆಹಲಿ ರಾಜ್ಯಗಳ ಹಿರಿಯ ನಾಗರಿಕರ ಸೇವೆ ಮಾಡಲು ಬಿಡುತ್ತಿಲ್ಲ. ರಾಜಕೀಯ ಹಿತಾಸಕ್ತಿಗಾಗಿ ರೋಗಿಗಳನ್ನು ಶೋಷಣೆಗೆ ಒಳಪಡಿಸುವುದು ಅಮಾನವೀಯ ಎಂದು ಪ್ರಧಾನಿ ಅಸಮಾಧಾನ ವ್ಯಕ್ತಪಡಿಸಿದರು.

ಹಲವು ಯೋಜನೆಗೆ ಚಾಲನೆ: 12,850 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಔಷಧೀಯ ದೇವತೆ ‘ಧನ್ವಂತರಿ’ ಜಯಂತಿ ಹಾಗೂ 9ನೇ ಆಯುರ್ವೆದ ದಿನವಾದ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ದೇಶದ ಪ್ರಥಮ ಅಖಿಲ ಭಾರತ ಆಯುರ್ವೆದ ಸಂಸ್ಥೆಯ ಎರಡನೇ ಹಂತವನ್ನೂ ಅವರು ಉದ್ಘಾಟಿಸಿದರು. ಪಂಚಕರ್ಮ ಆಸ್ಪತ್ರೆ, ಔಷಧ ಉತ್ಪಾದಿಸುವ ಆಯುರ್ವೆದಿಕ್ ಫಾರ್ಮಸಿ, ಕ್ರೀಡಾ ಔಷಧ ಘಟಕ, ಕೇಂದ್ರ ಗ್ರಂಥಾಲಯ, ಐಟಿ ಆಂಡ್ ಸ್ಟಾರ್ಟಪ್ ಇನ್​ಕುಬೇಷನ್ ಸೆಂಟರ್ ಮತ್ತು 500 ಆಸನಗಳ ಸಭಾಂಗಣವನ್ನೂ ಇದು ಒಳಗೊಂಡಿದೆ.

ಡ್ರೋನ್-ಹೆಲಿಕಾಪ್ಟರ್ ಸೇವೆ: ಆರೋಗ್ಯ ಸೇವೆಗಳು ಹೆಚ್ಚು ಸುಲಭವಾಗಿ ಲಭಿಸುವಂತೆ ಮಾಡುವ ನಿಟ್ಟಿನಲ್ಲಿ 11 ತೃತೀಯ ಆರೋಗ್ಯಕಾಳಜಿ ಸಂಸ್ಥೆ ಗಳಲ್ಲಿನ ಡ್ರೋನ್ ಸೇವೆಗೂ ಅವರು ಚಾಲನೆ ನೀಡಿದರು. ದೇಶದ 11 ಏಮ್್ಸ ಗಳಲ್ಲಿ ಲಭ್ಯ ಇರಲಿವೆ. ಹಾಗೆಯೇ ಉತ್ತರಾಖಂಡದ ಹೃಷಿಕೇಶ ಏಮ್ಸ್​ನಲ್ಲಿ ಕ್ಷಿಪ್ರ ಸೇವೆಗೆಂದು ಹೆಲಿಕಾಪ್ಟರ್ ವೈದ್ಯಕೀಯ ಸೇವೆಯನ್ನೂ ಉದ್ಘಾಟಿಸಿದರು. ದೇಶದ ವಿವಿಧೆಡೆಗಳಲ್ಲಿನ ಆರೋಗ್ಯ ಸೌಲಭ್ಯ ಹಾಗೂ ಸೇವಾ ವಿಸ್ತರಣಾ ಕೇಂದ್ರಗಳಲ್ಲದೆ, ಮಧ್ಯಪ್ರದೇಶದ ಮಂದಸೌರ್, ನೀಮುಚ್ ಮತ್ತು ಸಿಯೊನಿಗಳಲ್ಲಿ ಮೂರು ವೈದ್ಯಕೀಯ ಕಾಲೇಜುಗಳನ್ನು ಮೋದಿ ವರ್ಚುವಲ್ ಆಗಿ ಉದ್ಘಾಟಿಸಿದರು. ಛತ್ತೀಸ್​ಗಢದ ಬಿಲಾಸ್ಪುರದಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿನ ಸೂಪರ್ ಸ್ಪೆಷಾಲಿಟಿ ಬ್ಲಾಕ್, ಒಡಿಶಾದ ಬರ್​ಗರ್​ನಲ್ಲಿನ ಕ್ರಿಟಿಕಲ್ ಕೇರ್ ಬ್ಲಾಕ್ ಕೂಡ ಉದ್ಘಾಟಿಸಿದರು.

ನೇಮಕಾತಿ ಪತ್ರ ವಿತರಣೆ: ಗರಿಷ್ಠ ಸಂಖ್ಯೆಯ ಯುವಕರಿಗೆ ಉದ್ಯೋಗ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಸುಮಾರು 51 ಸಾವಿರ ಮಂದಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ ವಿತರಿಸುವ ‘ರೋಜ್​ಗಾರ್ ಮೇಳ’ವನ್ನು ಉದ್ದೇಶಿಸಿ ಅವರು ಈ ಮಾತುಗಳನ್ನು ಹೇಳಿದರು. ಪ್ರತಿ ಯುವಕ-ಯುವತಿಗೂ ಉದ್ಯೋಗ ನೀಡುವ ಹಾಗೂ ಆ ಮೂಲಕ ಅವರ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಅವಕಾಶ ಕಲ್ಪಿಸುವ ವ್ಯವಸ್ಥೆ ಸರ್ಕಾರ ನಿರ್ವಿುಸಿದೆ ಎಂದು ಪ್ರಧಾನಿ ಹೇಳಿದರು. ಬಾಹ್ಯಾಕಾಶ ಮತ್ತು ಸೆಮಿಕಂಡಕ್ಟರ್ ಒಳಗೊಂಡಂತೆ ಈಗ ಅಸ್ತಿತ್ವದಲ್ಲಿರುವ ತಂತ್ರಜ್ಞಾನ ಹಾಗೂ ಆಧುನಿಕ ಕ್ಷೇತ್ರಗಳನ್ನು ಉತ್ತೇಜಿಸಿದರೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿ ಆಗುತ್ತವೆ. ಆದರೆ ಹಿಂದಿನ ಸರ್ಕಾರಗಳು ಆಧುನಿಕ ತಂತ್ರಜ್ಞಾನಗಳನ್ನು ನಮ್ಮ ದೇಶದಲ್ಲಿ ಸೃಷ್ಟಿಸಲಾಗುವುದಿಲ್ಲ ಎಂಬ ಮನಸ್ಥಿತಿಯಲ್ಲಿದ್ದವು. ಇದು ಅತಿ ದೊಡ್ಡ ಹಾನಿ ಮಾಡಿದೆ. ಆದರೆ ನಾವು ಹಿಂದಿನ ಸರ್ಕಾರಗಳ ಇಂಥ ಮನಸ್ಥಿತಿಯಿಂದ ಹೊರತಾಗಿ ಸರ್ಕಾರವನ್ನು ಮುನ್ನಡೆಸಲು ಮುಂದಾದೆವು ಎಂದು ಮೋದಿ ಹೇಳಿದರು. ರೋಜ್​ಗಾರ್ ಮೇಳ ಯೋಜನೆಯನ್ನು 2022ರಲ್ಲಿ ಜಾರಿಗೆ ತಂದ ಬಳಿಕ ಈ ವರೆಗೆ ಸರ್ಕಾರದಿಂದ 7.5 ಲಕ್ಷಕ್ಕೂ ಅಧಿಕ ಉದ್ಯೋಗಗಳ ನೇಮಕಾತಿ ಪತ್ರ ವಿತರಿಸಲಾಗಿದೆ ಎಂದೂ ಅವರು ತಿಳಿಸಿದರು.

ಎರಡು ಪೋರ್ಟಲ್ ಲೋಕಾರ್ಪಣೆ: ಕೋವಿಡ್ ಲಸಿಕೆಗೆಂದು ಮಾಡಲಾಗಿದ್ದ ‘ಕೊ-ವಿನ್’ ಮಾದರಿಯಲ್ಲಿ ‘ಯು-ವಿನ್’ ಎಂಬ ಪೋರ್ಟಲ್ ಕೂಡ ಲೋಕಾರ್ಪಣೆ ಮಾಡಿದರು. ಗರ್ಭಿಣಿಯರು ಹಾಗೂ ನವಜಾತ ಶಿಶುಗಳು ಲಸಿಕೀಕರಣ ವಿವರ ಇದರಲ್ಲಿ ಇರಲಿದೆ. ಶಿಶುಗಳಿಗೆ ಹುಟ್ಟಿನಿಂದ 16 ವರ್ಷ ಪೂರ್ಣಗೊಳ್ಳುವವರೆಗೆ ನೀಡಲಾಗುವ ಎಲ್ಲ ಲಸಿಕೆಗಳ ವಿವರ ಈ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಲಾಗಿರುತ್ತದೆ. ಆರೋಗ್ಯ ವೃತ್ತಿಪರರಿಗೆ ಹಾಗೂ ಸಂಸ್ಥೆಗಳು ಮತ್ತು ಸಂಬಂಧಪಟ್ಟವರಿಗೆಂದು ಪ್ರತ್ಯೇಕ ವೆಬ್​ಸೈಟ್​ವೊಂದನ್ನೂ ಲೋಕಾರ್ಪಣೆ ಮಾಡಲಾಯಿತು. ಇದು ಅಸ್ತಿತ್ವದಲ್ಲಿರುವ ಆರೋಗ್ಯ ವೃತ್ತಿಪರರು ಮತ್ತು ಸಂಸ್ಥೆಗಳ ಕೇಂದ್ರೀಕೃತ ಡೇಟಾಬೇಸ್ ಆಗಿ ಕಾರ್ಯನಿರ್ವಹಿಸಲಿದೆ.

ಸಂಜಯ್ ಪ್ರತ್ಯಾರೋಪ: ಪ್ರಧಾನಿ ವಾಗ್ದಾಳಿಗೆ ಪ್ರತಿಕ್ರಿಯಿಸಿರುವ ಆಪ್ ಸಂಸದ ಸಂಜಯ್ ಸಿಂಗ್, ‘ಮನೆಯಲ್ಲಿ ಫ್ರಿಡ್ಜ್ ಇದ್ದರೆ, ನಿಮ್ಮ ಬಳಿ ಬೈಕ್ ಇದ್ದರೆ, ನೀವು ತಿಂಗಳಿಗೆ 10 ಸಾವಿರ ರೂ.ಗಿಂತ ಹೆಚ್ಚು ಸಂಪಾದಿಸಿದರೆ ನೀವು ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಈ ಯೋಜನೆಯನ್ನು ದೆಹಲಿಯಲ್ಲಿ ಜಾರಿಗೆ ತಂದರೆ ಯಾರಿಗೂ ಪ್ರಯೋಜನವಾಗುವುದಿಲ್ಲ’. ಪಶ್ಚಿಮಬಂಗಾಳ ಮತ್ತು ದೆಹಲಿಗಳಲ್ಲಿ ರಾಜ್ಯದ್ದೇ ಪ್ರತ್ಯೇಕ ಆರೋಗ್ಯ ವಿಮೆ ಇದ್ದು, ಅದು ಕೇಂದ್ರದ ಯೋಜನೆಗಿಂತಲೂ ಉತ್ತಮವಾಗಿವೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net