ಸ್ವಪಕ್ಷೀಯರ ವಂಶವಾದಕ್ಕೆ ಮೋದಿ ಗುದ್ದು: ಸಂಸದೀಯ ಪಕ್ಷದ ಸಭೆಯಲ್ಲಿ ಕಠಿಣ ಸಂದೇಶ ರವಾನೆ

Modi
Published on

ನವದೆಹಲಿ: ಕಾಂಗ್ರೆಸ್ ಮತ್ತು ವಿಪಕ್ಷಗಳ ಕುಟುಂಬ ರಾಜಕಾರಣದ ಬಗ್ಗೆ ಟೀಕೆ ಮಾಡುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯಲ್ಲಿ ಸಂಸದ, ಶಾಸಕರ ಮಕ್ಕಳು, ಸಂಬಂಧಿಕರಿಗೆ ಟಿಕೆಟ್ ಸಿಗದಿದ್ದರೆ ಅದಕ್ಕೆ ನಾನೇ ನೇರ ಹೊಣೆ. ನಮ್ಮ ಪಕ್ಷದಲ್ಲಿ ಪರಿವಾರವಾದಕ್ಕೆ ಉತ್ತೇಜನವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಸಂಸದರನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಪ್ರಧಾನಿ, ವಂಶವಾದ ಹುಟ್ಟುಹಾಕಿದ್ದೇ ಕಾಂಗ್ರೆಸ್. ಇದರ ವಿರುದ್ಧ ನಾವು ಹೋರಾಡುತ್ತಿದ್ದೇವೆ. ವಂಶವಾದ ರಾಜಕಾರಣದಲ್ಲಿ ಜಾತಿವಾದವನ್ನು ಪ್ರೇರೇಪಿಸುತ್ತದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಹಲವಾರು ಮುಖಂಡರು ತಮ್ಮ ಸಂಬಂಧಿಕರಿಗೆ ಟಿಕೆಟ್ ಕೊಡಿಸಲು ಯತ್ನಿಸಿದ್ದರು. ಆದರೆ, ಅವರ್ಯಾರಿಗೂ ಟಿಕೆಟ್ ನೀಡಲಾಗಿಲ್ಲ. ಈ ತೀರ್ವನಕ್ಕೆ ನಾನೇ ಕಾರಣ. ವಂಶವಾದ ಪ್ರೋತ್ಸಾಹಿಸುತ್ತಿದ್ದರೆ ದೇಶವನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ಕೊಂಡೊಯ್ಯಲು ಸಾಧ್ಯವಿಲ್ಲ ಎಂದಿದ್ದಾರೆ.

ಮುಂಬರುವ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಹಾಗೂ 2024ರ ಲೋಕಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಈ ಮಾತುಗಳು ಮಹತ್ವ ಪಡೆದುಕೊಂಡಿದೆ. ಕೆಲ ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆಯಿತ್ತಾದರೂ, ಅದನ್ನು ಆಡಳಿತ ಪರ ಅಲೆಯನ್ನಾಗಿ ಬದಲಿಸಲಾಯಿತು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. ಪಂಚರಾಜ್ಯ ಚುನಾವಣೆಯಲ್ಲಿ ಉತ್ತಮ ನಿರ್ವಹಣೆ ತೋರಿದ್ದಕ್ಕಾಗಿ ಜೆ.ಪಿ. ನಡ್ಡಾ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ವೇದಿಕೆಯಲ್ಲಿದ್ದ ಹಿರಿಯ ಮುಖಂಡರು ಮೋದಿ ಮತ್ತು ನಡ್ಡಾ ಇಬ್ಬರನ್ನೂ ಅಭಿನಂದಿಸಿದರು.

ದಿಲ್ಲಿಗೆ ಸಾವಂತ್: ಗೋವಾದಲ್ಲಿ ಸರ್ಕಾರ ರಚಿಸಬೇಕಿರುವ ಹಿನ್ನೆಲೆಯಲ್ಲಿ ಹಾಲಿ ಸಿಎಂ ಪ್ರಮೋದ್ ಸಾವಂತ್ ದೆಹಲಿಗೆ ಬಂದಿದ್ದು, ಗೃಹ ಸಚಿವ ಅಮಿತ್ ಷಾ, ಅಧ್ಯಕ ನಡ್ಡಾರನ್ನು ಭೇಟಿ ಮಾಡಲಿದ್ದಾರೆ. ಹೈಕಮಾಂಡ್ ಸಾವಂತ್​ರನ್ನು ಸಿಎಂ ಸ್ಥಾನದಲ್ಲಿ ಮುಂದುವರಿಸುತ್ತದೋ ಅಥವಾ ಬೇರೆ ನಾಯಕರು ಆಯ್ಕೆಯಾಗುತ್ತಾರೋ ಎಂಬ ಕುತೂಹಲ ಮುಂದುವರಿದಿದೆ.

ಸಿನ್ಹಾ ಟಿಎಂಸಿ ಸೇರ್ಪಡೆ: ಕಾಂಗ್ರೆಸ್ ಮಾಜಿ ಮುಖಂಡ ಶತ್ರುಘ್ನ ಸಿನ್ಹಾ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿಕೊಂಡಿದ್ದು, ಅಸನ್ಸೋಲ್ ವಿಧಾನಸಭೆ ಉಪಚುನಾವಣೆಗೆ ಪಕ್ಷದಿಂದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. 2019ರಲ್ಲಿ ಕಾಂಗ್ರೆಸ್ ಸೇರಿದ್ದ ಸಿನ್ಹಾ ಅದಕ್ಕೂ ಮುನ್ನ ಬಿಜೆಪಿಯಲ್ಲಿದ್ದರು.

ಇಂದು ಮಾನ್ ಪ್ರಮಾಣ ವಚನ: ಪಂಜಾಬ್​ನಲ್ಲಿ 92 ಕ್ಷೇತ್ರಗಳನ್ನು ಗೆದ್ದುಗೊಂಡು ಅಭೂತಪೂರ್ವ ವಿಜಯ ಸಾಧಿಸಿರುವ ಆಮ್ ಆದ್ಮಿ ಪಕ್ಷದ ಸರ್ಕಾರ ಬುಧವಾರ ರಚನೆಯಾಗಲಿದೆ. ಭಗತ್ ಸಿಂಗ್ ಪೂರ್ವಜರ ಊರಾದ ಖಟ್ಕರ್ ಕಲಾನ್​ನಲ್ಲಿ ಭಗವಂತ್ ಸಿಂಗ್ ಮಾನ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಗಾಂಧಿ ಕುಟುಂಬ ವಿರುದ್ಧ ಕಿಡಿ: ರಾಹುಲ್ ಗಾಂಧಿ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಈ ಬಾರಿ ಗಾಂಧಿ ಪರಿವಾರದ ವಿರುದ್ಧವೇ ಕಿಡಿಕಾರಿದ್ದಾರೆ. ಕಾಂಗ್ರೆಸ್ ಎಲ್ಲರಿಗೂ ಸೇರಿದ ಪಕ್ಷ. ಒಂದು ಕುಟುಂಬಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದ್ದಾರೆ. ಗಾಂಧಿ ಪರಿವಾರದಿಂದ ಹೊರತಾದ ವ್ಯಕ್ತಿಗೆ ಪಕ್ಷದ ಉನ್ನತ ಜವಾಬ್ದಾರಿ ನೀಡಬೇಕು ಎಂಬರ್ಥದ ಹೇಳಿಕೆ ನೀಡಿರುವ ಸಿಬಲ್ ವಿರುದ್ಧ ಗಾಂಧಿ ಕುಟುಂಬದ ನಿಷ್ಠ ನಾಯಕರುಕೆಂಡ ಕಾರಿದ್ದಾರೆ. ಸಿಬಲ್ ಆರ್​ಎಸ್​ಎಸ್/ಬಿಜೆಪಿ ಭಾಷೆ ಮಾತನಾಡುತ್ತಿದ್ದಾರೆ. ಇದನ್ನು ಬಿಡಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಮುಖ್ಯಸಚೇತಕ ಮಾಣಿಕ್ಯಂ ಹೇಳಿದ್ದಾರೆ.

ರಾಜೀನಾಮೆಗೆ ಸೂಚನೆ: ಚುನಾವಣೆ ನಡೆದ ಐದು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಅಧ್ಯಕ್ಷರಿಗೆ ರಾಜೀನಾಮೆ ನೀಡುವಂತೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ. ಸಿಡಬ್ಲ್ಯೂಸಿ ಸಭೆ ನಡೆದ ಎರಡು ದಿನಗಳ ಬಳಿಕ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಐದು ರಾಜ್ಯಗಳ ಪೈಕಿ ಗೋವಾದ ಅಧ್ಯಕ್ಷ ಗಿರೀಶ್ ಚೊಡಾಂಕರ್ ಈಗಾಗಲೇ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಇನ್ನುಳಿದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಮಣಿಪುರದ ಪಿಸಿಸಿ ಅಧ್ಯಕ್ಷರು ರಾಜೀನಾಮೆ ನೀಡಬೇಕಿದೆ.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net