

ಚಾಮರಾಜನಗರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸೇತುವೆಯಿಂದ ಕೆಳಕ್ಕೆ ಬಿದ್ದು ಸಂಭವಿಸಿದ ಅಪಘಾತದಲ್ಲಿ ಮತ್ತೊಬ್ಬರು ಸಾವಿಗೀಡಾಗಿದ್ದು, ಸತ್ತವರ ಸಂಖ್ಯೆ ಮೂರಕ್ಕೆ ಏರಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ. ಪಾಳ್ಯದ ಕುಡುವಾಳೆ ಹಳ್ಳದಲ್ಲಿ ಬಸ್ ಪಲ್ಟಿಯಾಗಿ ಈ ಅಪಘಾತ ಉಂಟಾಗಿತ್ತು.
ಈ ಅಪಘಾತದಲ್ಲಿ ಬಸ್ನಲ್ಲಿದ್ದ ಮಾಳಿಗನತ್ತ ಗ್ರಾಮದ ಶಿವಮ್ಮ (70)ಸ್ಥಳದಲ್ಲೇ ಸಾವಿಗೀಡಾಗಿದ್ದರೆ, ಪಿ.ಜಿ. ಪಾಳ್ಯದ ರಮೇಶ್ (28) ಕಾಮಗೆರೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು. ಅಲ್ಲದೆ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಪಿ.ಜಿ. ಪಾಳ್ಯ, ಕಾಮಗೆರೆ, ಕೊಳ್ಳೇಗಾಲ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದೀಗ ಗಾಯಾಳುಗಳ ಪೈಕಿ ಮಾಳಿಗನತ್ತ ಗ್ರಾಮದ ಸಣ್ಣರಾಯಪ್ಪ(60) ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೊಯಮತ್ತೂರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಪಿ.ಜಿ. ಪಾಳ್ಯ ಗ್ರಾಮದ ಕಡೆ ತೆರಳುತ್ತಿದ್ದ ಬಸ್ ತಾಂತ್ರಿಕ ದೋಷದ ಕಾರಣದಿಂದಾಗಿ ಅಪಘಾತಕ್ಕೆ ಈಡಾಗಿದೆ ಎನ್ನಲಾಗುತ್ತಿದೆ.