ಸಂಪಾದಕೀಯ | ಮೋದಿ ಸ್ಪಷ್ಟ ಸಂದೇಶ

modi
Published on

ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳ ಜತೆ ಮಾತನಾಡುವುದಿಲ್ಲ, ಪತ್ರಿಕಾಗೋಷ್ಠಿ ನಡೆಸುವುದಿಲ್ಲ ಎಂಬ ಟೀಕೆ ವಿಪಕ್ಷಗಳಿಂದ ಹಲವು ಬಾರಿ ಕೇಳಿಬಂದಿತ್ತು. ಆದರೆ, 2024ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಮೋದಿಯವರು ವಿಜಯವಾಣಿ ಸೇರಿದಂತೆ ದೇಶದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳು ಹಾಗೂ ಸುದ್ದಿಸಂಸ್ಥೆಗಳಿಗೆ ವಿವರವಾದ ಸಂದರ್ಶನ ನೀಡಿದರು. ಈಗೇನು ಚುನಾವಣೆ ಕಾಲವಲ್ಲ. ಆದರೆ, ಸಾಮಾಜಿಕ ಮಾಧ್ಯಮ, ಅದರಲ್ಲಿನ ಚರ್ಚೆಗಳನ್ನೂ ಗಂಭೀರವಾಗಿ ಗಮನಿಸುವ ಪ್ರಧಾನಿ ತಮ್ಮ ಅಭಿಪ್ರಾಯವನ್ನು ಕಾಲಕಾಲಕ್ಕೆ ಸ್ಪಷ್ಟಪಡಿಸುತ್ತ ಬಂದಿದ್ದಾರೆ.

ಇದರ ಪ್ರಮುಖ ಭಾಗವೆಂಬಂತೆ ಕೃತಕ ಬುದ್ಧಿಮತ್ತೆಯ (ಎಐ) ಅಮೆರಿಕ ಸಂಶೋಧಕ ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ಮೂರು ಗಂಟೆಗೂ ಹೆಚ್ಚು ಅವಧಿಯವರೆಗೆ ಪಾಡ್​ಕಾಸ್ಟ್ ನಲ್ಲಿ ಮಾತನಾಡಿದ್ದು, ಭಾನುವಾರ ಸಂಜೆ ಕಾರ್ಯಕ್ರಮ ಪ್ರಸಾರಗೊಂಡಿದೆ. ಮೋದಿ ಅಮೆರಿಕ ಭೇಟಿಯಿಂದ ಮರಳಿದ ಕೆಲ ದಿನಗಳಲ್ಲೇ ಈ ಮಾತುಕತೆ ನಡೆದಿರುವುದು ಗಮನಾರ್ಹ. ಭಾರತದ ವಿದೇಶಾಂಗ ನೀತಿ, ಕಠಿಣ ಮತ್ತು ಅನಿವಾರ್ಯ ನಿರ್ಧಾರಗಳು, ಮಹತ್ವದ ಸುಧಾರಣಾ ಕ್ರಮಗಳು, ಸರ್ಕಾರದ ಸಾಧನೆ, ತಾವು ಸಾಗಿಬಂದ ದಾರಿ, ಎದುರಿಸಿದ ಸವಾಲುಗಳು ಸೇರಿದಂತೆ ಹಲವು ಮಹತ್ವದ ಸಂಗತಿಗಳ ಬಗ್ಗೆ ಮುಕ್ತವಾಗಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಈ ಮೂಲಕ ಅನುಮಾನ, ಪ್ರಶ್ನೆಗಳಿಗೆ ತೆರೆ ಎಳೆದಿದ್ದಾರೆ. ಕ್ರೀಡೆ, ಅಧ್ಯಾತ್ಮ, ಸಂಘಟನೆ ಕುರಿತು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

‘ಪಾಕಿಸ್ತಾನದೊಂದಿಗೆ ಮಾತುಕತೆ ಆರಂಭಿಸಬೇಕು’ ಎಂದು ಕೆಲ ಪಕ್ಷಗಳು ಆಗ್ರಹ ಮಾಡುತ್ತಿವೆ. ಆದರೆ, ‘ನೆರೆಯ ಪಾಕಿಸ್ತಾನದೊಂದಿಗೆ ಶಾಂತಿ ಬೆಳೆಸುವ ನಿಟ್ಟಿನಲ್ಲಿ ನಡೆಸಿರುವ ಪ್ರಾಮಾಣಿಕ ಪ್ರಯತ್ನವು ಶತ್ರುತ್ವ ಹಾಗೂ ದ್ರೋಹವನ್ನು ಎದುರಿಸಿತು. 2014ರಲ್ಲಿ ನಾನು ಮೊದಲ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ಪಾಕ್ ಪ್ರಧಾನಿ ನವಾಜ್ ಷರೀಫ್​ರನ್ನು ವಿಶೇಷವಾಗಿ ಆಹ್ವಾನಿಸಿದ್ದೆ’ ಎಂಬ ವಾಸ್ತವವನ್ನು ಮೆಲುಕು ಹಾಕಿರುವ ಮೋದಿ, ಸಂಬಂಧ ಸುಧಾರಣೆಯ ಪ್ರತಿಯೊಂದು ಪ್ರಯತ್ನವನ್ನು ಪಾಕಿಸ್ತಾನ ಹಾಳುಗೆಡವಿದೆ ಎಂದಿದ್ದಾರೆ. ಇದು ಪಾಕಿಸ್ತಾನದ ಮೋಸ, ಕುತಂತ್ರವನ್ನೂ ಬಯಲು ಮಾಡಿದ್ದು, ಜಾಗತಿಕ ಸಮುದಾಯಕ್ಕೂ ಮಹತ್ವದ ಸಂದೇಶ ರವಾನೆಯಾದಂತಾಗಿದೆ.

‘ಭಾರತ ಚೀನಾ ಮಧ್ಯೆ ಭಿನ್ನಾಭಿಪ್ರಾಯ ಸಹಜ. ಆದರೆ, ಉಭಯರಾಷ್ಟ್ರಗಳ ನಡುವಿನ ಹಿತಾಸಕ್ತಿ, ಜಾಗತಿಕ ಸ್ಥಿರತೆ ಮತ್ತು ಪ್ರಗತಿಗಾಗಿ ಬಲವಾದ ಸಹಕಾರ ಅಗತ್ಯ’ ಎಂಬ ನಿಲುವಿನ ಮೂಲಕ ವಿದೇಶಾಂಗ ನೀತಿಯ ಸ್ಪಷ್ಟತೆಯನ್ನು ಸಾರಿದ್ದಾರೆ. ಅಲ್ಲದೆ, ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧ ನಿಲ್ಲಬೇಕು. ಭಾರತ ತಟಸ್ಥ ರಾಷ್ಟ್ರವಲ್ಲ, ಭಾರತ ಶಾಂತಿಯನ್ನು ಬಯಸುತ್ತದೆ, ಯುದ್ಧ ಯಾವುದಕ್ಕೂ ಪರಿಹಾರವಲ್ಲ ಎಂಬ ಸಂದೇಶವನ್ನು ಗಟ್ಟಿದನಿಯಲ್ಲಿ ತಿಳಿಸಿದ್ದಾರೆ. ಭಾರತ ಪ್ರಬಲ ನಾಯಕತ್ವದಿಂದ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಕಾಲಘಟ್ಟವಿದು. ಇಂಥ ಸಂದರ್ಭದಲ್ಲಿ ಪ್ರಮುಖ ವಿಷಯಗಳ ಬಗ್ಗೆ ಮೋದಿಯವರು ಮುಕ್ತ ಅನಿಸಿಕೆ ಹಂಚಿಕೊಂಡಿರುವುದು ಗಮನಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net